ಮಂಗಳವಾರ, ಮೇ 18, 2021
31 °C

ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಹಸ್ತ: ‘ಕೋವಿಡ್ ಆಸರೆ ಬೆಳಗಾವಿ ಸಮೂಹ’ ರಚನೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದಲ್ಲಿ ಕೋವಿಡ್ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಇಲ್ಲಿನ ಕೆಲವು ಸಮಾನ ಮನಸ್ಕರು ತಮ್ಮೊಂದಿಗೆ ಸಂಪರ್ಕದಲ್ಲಿರುವ ವೈದ್ಯರು, ಸರ್ಕಾರೇತರ ಸಂಘ–ಸಂಸ್ಥೆ(ಎನ್‌ಜಿಒ)ಗಳು ಹಾಗೂ ದಾನಿಗಳನ್ನು ಒಗ್ಗೂಡಿಸಿ ‘ಕೋವಿಡ್ ಆಸರೆ ಬೆಳಗಾವಿ ಸಮೂಹ’ ಕಟ್ಟಿದ್ದಾರೆ. ಸಂಕಷ್ಟದಲ್ಲಿರುವವರಿಗೆ  ಸಹಾಯ ಹಸ್ತ ಚಾಚುವ ಕಾರ್ಯವನ್ನು ಕೆಲವು ದಿನಗಳ ಹಿಂದಿನಿಂದ ಆರಂಭಿಸಿದ್ದಾರೆ.

ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಬಿಕ್ಕಟ್ಟಿಗೆ ಸಿಲುಕಿ ತೊಂದರೆಗೆ ಒಳಗಾದವರಿಗೆ ಆಸರೆ ಕಲ್ಪಿಸುವುದು ಸಮೂಹದ ಉದ್ದೇಶ. ಅನುಭವಿ ವೈದ್ಯರು, ಎನ್‌ಜಿಒಗಳ ಪ್ರತಿನಿಧಿಗಳು, ನಾಗರಿಕ ಪ್ರತಿನಿಧಿಗಳು ಇದರಲ್ಲಿದ್ದಾರೆ.

ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕೇಂದ್ರೀಕೃತ ಟೋಲ್‌ಫ್ರೀ ಸಹಾಯವಾಣಿ 1800 102 2716 ಆರಂಭಿಸಿದ್ದಾರೆ. ಆ ಸಂಖ್ಯೆಗೆ ಕರೆ ಮಾಡಿದ ನಂತರ, ತಮಗೆ ಬೇಕಾದ ನೆರವಿಗಾಗಿ ಅಲ್ಲಿ ತಿಳಿಸಲಾಗುವ ಸಂಖ್ಯೆಯನ್ನು ಒತ್ತಬೇಕು. ಬಹುತೇಕ ಸಹಾಯ ಮತ್ತು ಮಾರ್ಗದರ್ಶನವನ್ನು ಫೋನ್‌ ಮೂಲಕವೇ ಪಡೆದುಕೊಳ್ಳಬಹುದಾದ ಅವಕಾಶವನ್ನು ಒದಗಿಸಲಾಗಿದೆ. ತುರ್ತು ಸೇವೆಯನ್ನೂ ಕಲ್ಪಿಸಲಾಗುವುದು ಎಂದು ತಂಡ ಹೇಳಿದೆ.

ವೈದ್ಯರ ಸಲಹೆ: ಕೋವಿಡ್ ಲಕ್ಷ್ಮಣಗಳು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡವರು ವೈದ್ಯರೊಂದಿಗೆ ಮೊಬೈಲ್‌ ಫೋನ್‌ನಲ್ಲಿ ನೇರವಾಗಿ ಮಾತನಾಡಬಹುದು. ವೈದ್ಯಕೀಯ ಆಕ್ಸಿಜನ್‌ ಸಿಲಿಂಡರ್‌ ಕೂಡ ಪಡೆಯಬಹುದು. ಆದರೆ, ಅದಕ್ಕೆ ವೈದ್ಯರು ನೀಡಿದ ಸಲಹಾ ಚೀಟಿ ಪ್ರಸ್ತುತಪಡಿಸುವುದು ಕಡ್ಡಾಯ. ಪ್ಲಾಸ್ಮಾ ಥೆರಫಿಯನ್ನೂ ಮಾಡಲಾಗುವುದು. ಪ್ಲಾಸ್ಮಾ ದಾನ ಹಾಗೂ ಪಡೆಯುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಸಮೂಹ ಮಾಡುತ್ತದೆ. ಅಂತ್ಯಕ್ರಿಯೆ ನೆರವೇರಿಸುವುದಕ್ಕೂ ಸಮೂಹದ ಸ್ವಯಂಸೇವಕರು ನೆರವಾಗುತ್ತಾರೆ. ಬೆಳಗಾವಿ ನಗರದ ನಿವಾಸಿಗಳಿದ್ದರೆ ಆಂಬುಲೆನ್ಸ್ ಸೌಲಭ್ಯವನ್ನೂ ಒದಗಿಸಲಾಗುವುದು. ಔಷಧಿ, ಎಚ್‌ಆರ್‌ಟಿಸಿ ಸ್ಕ್ಯಾನ್ ಹಾಗೂ ರಕ್ತದ ಮಾದರಿ ಪರೀಕ್ಷೆಯನ್ನೂ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ನಗರ ಕೆಲವು ಡಯೋಗ್ನಾಸ್ಟಿಕ್ ಕೇಂದ್ರಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಇಂಗ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯವರೇ ಆದ ಡಾ.ಮಕ್ಸೂದ್ ಪುಣೇಕರ್, ಡಾ.ಸೈಫ್‌ ಮೆಮನ್, ಡಾ.ಸಮೀರ ನಾಯ್ಕ, ಡಾ.ನದೀಮ್‌ ಅತ್ತಾರ್, ಡಾ.ಕುಮೇಲ್‌ ಸೈಯದ್, ಡಾ.ನಬೀಲ್ ಗಾಂಧಿ ಅವರು ತವರಿನ ಜನರಿಗೆ ನೆರವಾಗುತ್ತಾರೆ. ಒಬ್ಬರಿಲ್ಲದಿದ್ದರೆ ಮತ್ತೊಬ್ಬರು ಸಹಾಯವಾಣಿಯ ಮೂಲಕ ಸಲಹೆ ನೀಡಲಿದ್ದಾರೆ. ತುರ್ತು ಪರಿಸ್ಥಿತಿಗೆ ಸ್ಪಂದಿಸಲಿದ್ದಾರೆ. ಅವರೊಂದಿಗೆ ಇಲ್ಲಿನ ಸಮಾಜ ಸೇವಕ ಫಹೀಮ್ ಮಾಡಿವಾಲೆ ಕೈಜೋಡಿಸಿದ್ದಾರೆ.

‘ಕೋವಿಡ್ 2ನೇ ಅಲೆಯು ಭೀಕರವಾಗಿದೆ. ಲಕ್ಷಣಗಳಿಲ್ಲದವರು ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಬಹುದು. ಅಂಥವರಿಗೆ ತಂಡದ ವೈದ್ಯರು ಮೊಬೈಲ್‌ ಫೋನ್ ಮೂಲಕವೇ ಮಾರ್ಗದರ್ಶನ ನೀಡುತ್ತಾರೆ. ಅವಶ್ಯವಿದ್ದಲ್ಲಿ ಔಷಧಿ, ಆಮ್ಲಜನಕ ಸಿಲಿಂಡರ್ ಮೊದಲಾದವುಗಳನ್ನು ಸ್ವಯಂ ಸೇವಕರು ತಲುಪಿಸುತ್ತಾರೆ. ಈ ಸೇವೆಯು ಒಂದು ಧರ್ಮದವರಿಗೆ ಸೀಮಿತವಾಗಿಲ್ಲ. ಯಾರು ಬೇಕಾದರೂ ಪಡೆಯಬಹುದು. ಬೆಳಗಾವಿಯಲ್ಲಿರುವವರಿಗೆ ಆದ್ಯತೆ ನೀಡಲಾಗುವುದು’ ಸಮೂಹದ ಪ್ರತಿನಿಧಿ ಅಲಂ ಮುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು