ಗುರುವಾರ , ಜನವರಿ 28, 2021
15 °C

ಡಿಸಿಎಂ ಸವದಿ ಖಾಸಗಿ ಕಾರಿಗೆ ಸಾರಿಗೆ ಸಂಸ್ಥೆ ಡಿಪೊದಲ್ಲಿ ಡೀಸೆಲ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಅವರ ಚಾಲಕ ಬಸ್ ಡಿಪೊದಲ್ಲಿನ ಬಂಕ್‌ನಿಂದಲೇ ಶುಕ್ರವಾರ ಡೀಸೆಲ್ ತುಂಬಿಸಿಕೊಂಡರು.

ನಗರದ 3ನೇ ಬಸ್ ಡಿಪೊದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಿದ ವಿಶ್ರಾಂತಿ ಗೃಹದ ಉದ್ಘಾಟನೆಗೆಂದು ಸವದಿ ಆ ವಾಹನದಲ್ಲಿ ಬಂದಿದ್ದರು. ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ, ಇತ್ತ ಡಿಪೊದಲ್ಲಿನ ಬಂಕ್‌ನಿಂದ ಚಾಲಕ ಇಂಧನ ತುಂಬಿಸಿಕೊಂಡರು.

ಸರ್ಕಾರಿ ಸಾರಿಗೆ ಬಸ್‌ಗಳಿಗೆ ಇಂಧನಕ್ಕಾಗಿ ಈ ಬಂಕ್ ತೆರೆಯಲಾಗಿದೆ. ಆದರೆ, ಸಚಿವರು ಇಲ್ಲಿ ಪ್ರವಾಸಕ್ಕೆ ಬಳಸುವ ತಮ್ಮ ವಾಹನಕ್ಕೆ ಡೀಸೆಲ್ ಹಾಕಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸವದಿ, ‘ಡಿಪೊದಲ್ಲಿ ಡೀಸೆಲ್ ಹಾಕಿಸಿದ ವಿಷಯ ಬಳಿಕ ಗೊತ್ತಾಯಿತು. ನನ್ನ ಖಾಸಗಿ ಚಾಲಕನ ಅಚಾತುರ್ಯದಿಂದ ಹೀಗಾಗಿದೆ. ಆತ ಬಂಕ್ ಬಗ್ಗೆ ವಿಚಾರಿಸಿದ ಅವರಿಗೆ ಅಲ್ಲಿನ ಸಿಬ್ಬಂದಿ ಇಲ್ಲೇ ಹಾಕುತ್ತೇವೆ ಎಂದು ಹೇಳಿ ತುಂಬಿಸಿದರಂತೆ. ಒಟ್ಟಿನಲ್ಲಿ ಇದರಿಂದ ನಾನು ಮುಜುಗರಕ್ಕೆ ಒಳಗಾಗುವಂತಾಗಿದೆ’ ಎಂದರು.

‘ಖಾಸಗಿ ವಾಹನಗಳಿಗೆ ಹೀಗೆ ಡೀಸೆಲ್ ಹಾಕಿಸಿಕೊಳ್ಳಲು ನಿಮಯದ ಪ್ರಕಾರ ಅವಕಾಶವಿಲ್ಲ. ನಾನೀಗ ಹಣ ತುಂಬುತ್ತೇನೆ ಎಂದರೂ ಆಗುವುದಿಲ್ಲ. ಹೀಗಾಗಿ, ನಿರಾಕರಿಸದ ಡಿಪೊ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಚಾಲಕನಿಗೂ ಎಚ್ಚರಿಕೆ ನೀಡಿದ್ದೇನೆ’ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು