ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ನಷ್ಟ ಸಮೀಕ್ಷೆ, ಪರಿಹಾರಕ್ಕೆ ಆಗ್ರಹ

ತರಕಾರಿ, ಹೂವು, ಹಣ್ಣಿಗಿಲ್ಲ ನಿರೀಕ್ಷಿತ ಬೇಡಿಕೆ
ಅಕ್ಷರ ಗಾತ್ರ

ಚಿಕ್ಕೋಡಿ: ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳಿಗೆ ನಿರೀಕ್ಷಿತ ಬೇಡಿಕೆ ಇಲ್ಲದಿರುವುದು ಮತ್ತು ಬೆಲೆ ದೊರೆಯದೆ ಇರುವುದರಿಂದ ಉತ್ಪಾದನಾ ವೆಚ್ಚವೂ ಸಿಗದೆ ಕೃಷಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ, ತ್ವರಿತವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ನೆರೆ ಹಾವಳಿ, ಅತಿವೃಷ್ಟಿ, ಬೆಲೆ ಏರಿಳಿತಗಳಿಂದ ನಲುಗಿ ಹೋಗಿದ್ದ ರೈತರು ಈಗ ಬಂದೆರೆಗಿರುವ ಕೊರೊನಾ ಕಂಟಕದಿಂದಾಗಿ ಮತ್ತೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಈಚೆಗೆ ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸಿದೆ. ಆದರೆ, ಹೂವು, ಹಣ್ಣು, ತರಕಾರಿ ಮೊದಲಾದ ಕೃಷಿ ಉತ್ಪನ್ನಗಳು ಮಾರಾಟ ಆಗದೆ ಇರುವುದರಿಂದ ಅನೇಕ ರೈತರು ಅವುಗಳನ್ನು ನಾಶಪಡಿಸುತ್ತಿದ್ದಾರೆ.

ಕೃಷ್ಣಾ ನದಿ ದಂಡೆಯಲ್ಲಿರುವ ತಾಲ್ಲೂಕಿನ ಯಡೂರವಾಡಿಯ ಕೃಷಿಕ ಕೃಷ್ಣಾ ವನೇರಿ ಎಂಬುವವರು ಕಳೆದ ಆಗಸ್ಟ್‌ನಲ್ಲಿ ಉಂಟಾದ ಮಹಾಪೂರದಲ್ಲಿ ಸಂಪೂರ್ಣ ಬೆಳೆ ಕಳೆದುಕೊಂಡಿದ್ದರು. ಹಿಂಗಾರು ಹಂಗಾಮಿನಲ್ಲಾದರೂ ಆದಾಯ ಗಳಿಸಬಹುದು ಎಂದುಕೊಂಡು ಒಂದು ಎಕರೆಯಲ್ಲಿ ಬೆಂಡೆ ಮತ್ತು ಒಂದು ಎಕರೆಯಲ್ಲಿ ಚೆಂಡು ಹೂವು ಬೆಳೆದಿದ್ದರು. ಫಸಲು ಕಟಾವಿಗೆ ಬರುವಷ್ಟರಲ್ಲಿ ಲಾಕ್‌ಡೌನ್‌ ಬಂದಿದ್ದರಿಂದ ಉತ್ಪನ್ನ ಮಾರಾಟವಾಗಲಿಲ್ಲ. ಈಗ ಮನಸ್ಸಿಲ್ಲದ ಮನಸ್ಸಿನಿಂದಲೇ ಟ್ರ್ಯಾಕ್ಟರ್‌ನಿಂದ ಬೆಳೆ ನಾಶಪಡಿಸಿದ್ದಾರೆ.

ತಾಲ್ಲೂಕಿನ ಹಿರೇಕೋಡಿಯ ಕೃಷಿಕ ಲಕ್ಷ್ಮಣ ನಿಂಗಾಗೋಳ ಒಂದು ಎಕರೆಯಲ್ಲಿ ದೊಡ್ಡಮೆಣಸಿನಕಾಯಿ ಬೆಳೆದಿದ್ದು, ಅದಕ್ಕಾಗಿ ₹ 70ಸಾವಿರ ಖರ್ಚು ಮಾಡಿದ್ದಾರೆ. ‘ಕಟಾವು ಆರಂಭವಾಗುತ್ತಿದ್ದಂತೆಯೇ ಲಾಕ್‌ಡೌನ್‌ ಬಂತು. ಕೇವಲ ಆರು ಚೀಲ ಮೆಣಸಿನಕಾಯಿಯನ್ನು ಪ್ರತಿ ಕೆ.ಜಿ.ಗೆ. ₹ 6ರಂತೆ ಮಾರಿದ್ದೆ. ನಂತರ ಫಸಲು ಮಾರಾಟವಾಗದೆ ₹ 4 ಲಕ್ಷಕ್ಕೂ ಅಧಿಕ ನಷ್ಟವಾಗಿದೆ' ಎಂದು ಅಳಲು ತೋಡಿಕೊಂಡರು.

ಲಾಕ್‌ಡೌನ್‌ನಿಂದಾಗಿ ತರಕಾರಿ, ಹೂವು, ಹಣ್ಣು ಮಾರಾಟವಾಗದೆ ಹೊಲದಲ್ಲಿಯೇ ಕೊಳೆಯುತ್ತಿವೆ. ರೈತರು ಅಸಹಾಯಕರಾಗಿ ಬೆಳೆ ನಾಶಪಡಿಸಿ ಮುಂಗಾರು ಹಂಗಾಮಿಗೆ ಭೂಮಿ ಸಿದ್ದಪಡಿಸುತ್ತಿದ್ದಾರೆ. ‘ಅಧಿಕಾರಿಗಳು ಕ್ಷೇತ್ರ ಸಮೀಕ್ಷೆ ನಡೆಸಿ, ಬೆಳೆ ಮಾರಾಟವಾಗದೆ ರೈತರಿಗೆ ಉಂಟಾಗಿರುವ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ರಾಜ್ಯ ರೈತ ಸಂಘದ ವಕ್ತಾರ ತ್ಯಾಗರಾಜ್ ಕದಂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT