ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು: ಎಫ್‌ಆರ್‌ಪಿ ನಿಗದಿಗೆ ಅಪಸ್ವರ

ಜಿಲ್ಲೆಯಲ್ಲಿ ಟನ್ ಕಬ್ಬಿಗೆ ಗರಿಷ್ಠ ₹ 3,477 ದರ ನಿಗದಿ
Last Updated 24 ಅಕ್ಟೋಬರ್ 2020, 9:20 IST
ಅಕ್ಷರ ಗಾತ್ರ

ಬೆಳಗಾವಿ: ‘ಟನ್ ಕಬ್ಬಿಗೆ ‘2020–21ನೇ ಸಾಲಿಗೆ ರಾಜ್ಯ ಸರ್ಕಾರವು ನಿಗದಿಪಡಿಸಿರುವ ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ) ಅವೈಜ್ಞಾನಿಕವಾಗಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆರೋಪಿಸಿದ್ದಾರೆ.

‘ಪುನರ್ ಪರಿಶೀಲಿಸಬೇಕು ಎಂದು ಈಚೆಗೆ ನಡೆದ ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಕ್ಕರೆ ಸಚಿವರು ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಮೂರು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸುವ ಮೂಲಕ ರೈತರನ್ನು ವಂಚಿಸುತ್ತಿವೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡಬೇಕೆಂದು ಆದೇಶವಿದ್ದರೂ ಯಾವುದೇ ಕಾರ್ಖಾನೆಗಳು ಪಾಲನೆ ಮಾಡಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಇಳುವರಿ ಆಧರಿಸಿ:‘ಕೇಂದ್ರ ಸರ್ಕಾರವು ನಿಗದಿ‍ಪಡಿಸಿರುವ ಎಫ್‌ಆರ್‌ಪಿಯನ್ನು ಪರಿಗಣಿಸಿ, ಕಳೆದ ಸಾಲಿನ ಇಲ್ಲಿನ 23 ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿನ ಕಬ್ಬಿನ ಇಳುವರಿ ಪ್ರಮಾಣ ಆಧರಿಸಿ 2020–21ನೇ ಸಾಲಿಗೆ ಎಫ್‌ಆರ್‌ಪಿ ನಿಗದಿಪಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ 12.20 ಇಳುವರಿ ಹೊಂದಿರುವ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದ ವೆಂಕಟೇಶ್ವರ ಪವರ್ ಪ್ರಾಜೆಕ್ಟ್‌ ಸಕ್ಕರೆ ಕಾರ್ಖಾನೆಗೆ ₹ 3,477 ನಿಗದಿಪಡಿಸಲಾಗಿದೆ. ಅತಿ ಕಡಿಮೆ ಎಂದರೆ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯದಾಗಿದೆ. ಅಲ್ಲಿ ಶೇ 9.75 ಇಳುವರಿ ಇದ್ದು, ₹ 2,779 ದರ ನಿಗದಿ ಮಾಡಲಾಗಿದೆ.

‘ಹಂಗಾಮು ಆರಂಭವಾದರೂ ದರ ನಿಗದಿಯಾಗಿಲ್ಲದ’ ಕುರಿತು ‘ಪ್ರಜಾವಾಣಿ’ ಅ. 10ರಂದು ವರದಿ ಮಾಡಿ ಸರ್ಕಾರದ ಗಮನಸೆಳೆದಿತ್ತು. ಬಳಿಕ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ನಡೆಸಿದ್ದರು.

‘ಪ್ರಜಾವಾಣಿ’ಯಲ್ಲಿ ಅ.10ರಂದು ಪ್ರಕಟವಾಗಿದ್ದ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT