ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕೊರೊನಾ ಸೇನಾನಿಯ ಮಗು ಅನಾಥ; ನೆರವಿಗೆ ಮೊರೆ

ಕೊರೊನಾ ಸೇನಾನಿಯ ಮಗು ಅನಾಥ; ನೆರವಿಗೆ ಮೊರೆ
Last Updated 14 ಜೂನ್ 2021, 9:15 IST
ಅಕ್ಷರ ಗಾತ್ರ

ಬೆಳಗಾವಿ: ‘ಮದುವೆಯಾಗಿ ಎರಡು ವರ್ಷಗಳಷ್ಟೇ ಕಳೆದಿದೆ. ಮಗಳಿಗೆ ಈಗ 14 ತಿಂಗಳಷ್ಟೆ. ಮುಂದೆ ಜೀವನ ನಡೆಸುವುದು ಹೇಗೆ, ಆಕೆಯನ್ನು ಓದಿಸುವುದಕ್ಕೆ ಏನು ಮಾಡಬೇಕು? ನನಗೂ, ನನ್ನ ಮಗಳಿಗೂ ದೇವರು ದೊಡ್ಡ ಅನ್ಯಾಯ ಮಾಡಿಬಿಟ್ಟ’.

ಇಲ್ಲಿನ ವೈಭವ ನಗರದ ನಿವಾಸಿ ದೀಪಾ ಪಾಟೀಲ ಹೇಳುತ್ತಾ ಕಣ್ಣೀರಾದರು. ಅಪ್ಪ ಏನಾದರು, ಎಲ್ಲಿ ಹೋದರು ಎನ್ನುವುದೇನೊಂದೂ ಅರಿಯದ ಮಗುವಿನತ್ತ ನೋಡಿ ಮತ್ತಷ್ಟು ದುಃಖಿತರಾದರು.

ಅವರ ಪತಿ ಡಾ.ಮಹೇಶ ಪಾಟೀಲ ಕೋವಿಡ್–19ನಿಂದ ಈಚೆಗೆ ನಿಧನರಾದರು. ಅದಕ್ಕೆ ನಾಲ್ಕು ದಿನಗಳ ಹಿಂದೆ ಅತ್ತೆ ಸುಮಿತ್ರಾ ಪಾಟೀಲ ಕೂಡ ಸೋಂಕಿನಿಂದಲೇ ಮೃತರಾಗಿದ್ದರು.

ಮುಂಚೂಣಿ ಯೋಧ:

ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಮಹೇಶ, ಕೊರೊನಾ ಮುಂಚೂಣಿ ಯೋಧರಾಗಿ ಕೆಲಸ ಮಾಡುತ್ತಿದ್ದರು. ಸೋಂಕಿತರ ಆರೈಕೆಯಲ್ಲಿ ತೊಡಗಿದ್ದರು. ಈ ನಡುವೆ, ತಮಗೂ ಸೋಂಕು ದೃಢಪಟ್ಟಿದ್ದರಿಂದ ಹೋಂ ಐಸೊಲೇಷನ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ತಾಯಿಗೂ ಸೋಂಕು ತಗುಲಿತ್ತು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಮಹೇಶ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ತಾಯಿ ಸುಮಿತ್ರಾ ಅವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ತಾಯಿ ಮೃತರಾದ ನಾಲ್ಕೇ ದಿನಗಳಲ್ಲಿ ಮಗ ಕೂಡ ಸಾವಿಗೀಡಾದರು. ಅವರ ತಂದೆಯೂ ಅನಾರೋಗ್ಯಕ್ಕೀಡಾಗಿದ್ದಾರೆ. ಮಹೇಶ ಅವರ ಪತ್ನಿ ಹಾಗೂ ಮಗು ಅನಾಥರಾಗಿದ್ದಾರೆ.

‘ಪತಿ ಬಿಎಚ್‌ಎಂಎಸ್ ಮಾಡಿದ್ದರು. ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಮಗಳಂತೂ ಬಹಳ ಹಚ್ಚಿಕೊಂಡಿದ್ದಳು. ಏನೂ ಅರಿಯದ ವಯಸ್ಸಲ್ಲೇ ಅಪ್ಪನನ್ನು ಕಳೆದುಕೊಂಡಿದ್ದಾಳೆ. ಆಗಾಗ, ಅಪ್ಪ ಅಪ್ಪ ಎಂದು ಕನವರಿಸುತ್ತಾಳೆ. ಫೋಟೊ ನೋಡಿದಾಗ, ಮೊಬೈಲ್‌ ಫೋನ್‌ ಕಂಡಾಗ ರಚ್ಚೆ ಹಿಡಿಯುತ್ತಾಳೆ. ಸಾಲ ತೀರಿಸುವುದು ಮೊದಲಾದ ಮನೆಯ ಕಮಿಟ್‌ಮೆಂಟ್ ಎಂದು ಪತಿ ಮುಳುಗಿದ್ದರು. ಮಗಳ ಹೆಸರಲ್ಲಿ ಏನಾದರೂ ಹೂಡಿಕೆ ಮಾಡಬೇಕು ಎಂದೆಲ್ಲಾ ಚರ್ಚಿಸಿದ್ದರು. ಈ ನಡುವೆ ಕೊರೊನಾ ನಮ್ಮ ಬದುಕು ಕಿತ್ತುಕೊಂಡಿತು...’ ಎಂದು ದೀಪಾ ಕಣ್ಣೀರಿಟ್ಟರು.

‘ಸದ್ಯಕ್ಕೆ ತವರು ಮನೆ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿಯಲ್ಲಿದ್ದೇನೆ. ತವರಲ್ಲಿ ಎಷ್ಟು ದಿನಗಳೆಂದು ಇರಲಾಗುತ್ತದೆ? ಅಪ್ಪ–ಅಮ್ಮನಿಗೆ ಹೊರೆಯಾಗಲು ಇಷ್ಟವಿಲ್ಲ. ಮದುವೆಗೆ ಮುನ್ನ ಸ್ಟಾಫ್ ನರ್ಸ್‌ ಆಗಿದ್ದೆ. ಈಗ ಮತ್ತೊಮ್ಮೆ ಕೆಲಸ ಹುಡುಕಬೇಕು. ಜೀವನ ನಿರ್ವಹಣೆಗಾಗಿ ದುಡಿಯಬೇಕು. ಮಗಳ ಭವಿಷ್ಯ ರೂಪಿಸುವ ಜವಾ‌ಬ್ದಾರಿಯೂ ಹೆಗಲೇರಿದೆ. ಕೆಲವೇ ದಿನಗಳ ಅಂತರದಲ್ಲಿ ಪತಿ, ಅ‌ತ್ತೆ ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದೇನೆ’ ಎಂದು ತಿಳಿಸಿದರು.

‘ವೈದ್ಯರಿಗೇ ಹೀಗಾದರೆ ಸಾಮಾನ್ಯ ಜನರ ಪಾಡೇನು?’ ಎಂದು ಕೊರೊನಾವನ್ನು ಶಪಿಸಿದರು.‌

‘ಪತಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯವರನ್ನು ಭೇಟಿಯಾಗಿ, ನೆರವಾಗುವಂತೆ ಕೇಳೋಣ ಎಂದುಕೊಂಡಿರುವೆ. ಪತಿ ಉಳಿಸಿದ್ದ ಪಿಎಫ್‌ ಹಣವೂ ಬಹಳವೇನೂ ಇಲ್ಲ. ಚಿಕಿತ್ಸೆಗಾಗಿಯೇ ₹ 4 ಲಕ್ಷ ವೆಚ್ಚವಾಯಿತು. ಸಾಲ ಮಾಡಿ ಅದನ್ನು ಹೊಂದಿಸಿದ್ದೆವು. ಬರುವ ಪಿಎಫ್ ಹಣ ಸಾಲ ತೀರಿಸಲೂ ಸಾಧ್ಯವಾಗುವುದಿಲ್ಲ. ಜೀವನ ನಡೆಸುವುದಕ್ಕೆ ಬಹಳ ತೊಂದರೆ ಇದೆ. ಸರ್ಕಾರದಿಂದ ಮಗಳ ಶಿಕ್ಷಣಕ್ಕೆ ಆರ್ಥಿಕ ನೆರವು ಸಿಕ್ಕರೆ ಅನುಕೂಲವಾಗುತ್ತದೆ’ ಎಂದು ಕೋರಿದರು.

ಮನೆಯ ಯಜಮಾನನನ್ನು ಕಳೆದುಕೊಂಡ ಈ ಕುಟುಂಬ ನೆರವಿನ ನಿರೀಕ್ಷೆಯಲ್ಲಿದೆ. ಸಂಪರ್ಕಕ್ಕೆ ಮೊ: 9844160847.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT