ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ವಶದಲ್ಲಿದ್ದ ಆಭರಣ ವ್ಯಾಪಾರಿ ಕಾರಿನಿಂದ ₹2.50 ಕೋಟಿ ಮೌಲ್ಯದ ಚಿನ್ನ ಕಳವು

ಪೊಲೀಸರ ವಶದಲ್ಲಿದ್ದಾಗಲೇ ಕೃತ್ಯ
Last Updated 27 ಮೇ 2021, 13:09 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ₹ 2.50 ಕೋಟಿ ಮೌಲ್ಯದ 4 ಕೆ.ಜಿ. 900 ಗ್ರಾಂ. ಚಿನ್ನ ನಾಪತ್ತೆಯಾದ ಪ್ರಕರಣ ತಿರುವು ಪಡೆದುಕೊಂಡಿದೆ. ಅದನ್ನು ‘ಅಪರಿಚಿತರು’ ಕಳವು ಮಾಡಿದ್ದಾರೆ ಎಂದು ಎಫ್‌ಐಆರ್‌ ದಾಖಲಾಗಿದೆ.

ಕಾರಿನ ಮಾಲೀಕ ಮಂಗಳೂರಿನ ಅಲೆಪ್ಪಿ ಪೆರಮಾರ್‌ನ ತಿಲಕ್ ಮೋನಪ್ಪ ಪೂಜಾರಿ ನೀಡಿದ ದೂರು ಆಧರಿಸಿ, ಯಮಕನಮರಡಿ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ದೂರಿನ ವಿವರ: ‘ನಾನು ಮಂಗಳೂರಿನಲ್ಲಿ ಲಕ್ಷ್ಮಿ ಜ್ಯುವೆಲರ್ಸ್‌ ಎನ್ನುವ ಬಂಗಾರದ ಅಂಗಡಿ ಹೊಂದಿದ್ದೇನೆ. ಗ್ರಾಹಕರು ಹಳೆಯ ಬಂಗಾರ ನೀಡಿ ಹೊಸದನ್ನು ಖರೀದಿಸುತ್ತಾರೆ. ನಾವು ಅದನ್ನು ಕರಗಿಸಿ ಮತ್ತೆ ಹೊಸ ಆಭರಣಗಳನ್ನು ಮಾಡಿ ಮಾರುತ್ತೇವೆ. ಈ ರೀತಿ ಖರೀದಿಸಿದ 4 ಕೆ.ಜಿ. 900 ಗ್ರಾಂ. ಹಳೆ ಬಂಗಾರವನ್ನು ಜ.9ರಂದು ಮಂಗಳೂರಿನಿಂದ ಕೊಲ್ಹಾ‍ಪುರಕ್ಕೆ ಹೊಸ ಆಭರಣಗಳನ್ನು ಮಾಡಿಸಲು ಮಾರುತಿ ಸುಜುಕಿ ಎರ್ಟಿಗಾ ಕಾರ್‌ (ನಂ.ಕೆ.ಎ–19, ಎಂ.ಎಚ್. 9451)ನಲ್ಲಿ ಸಾಗಿಸುತ್ತಿದ್ದೆವು. ಕಾರನ್ನು ಹತ್ತರಗಿ ಚೆಕ್‌ಪೋಸ್ಟ್‌ನಲ್ಲಿ ಯಮನಕನಮರಡಿ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ತಪಾಸಣೆ ಮಾಡಿದ್ದರು’.

‘ಡಕಾಯಿತರು ತಡೆದು ಕಳವು ಮಾಡಬಹುದೆಂದು ನಾವು ವಾಹನದ ಏರ್‌ಬ್ಯಾಗ್ ಜಾಗದಲ್ಲಿ ಬಂಗಾರ ಮುಚ್ಚಿಟ್ಟಿದ್ದೆವು. ಹೀಗಾಗಿ, ಪೊಲೀಸರು ತಪಾಸಿಸಿದಾಗ ಬಂಗಾರ ಸಿಕ್ಕಿರಲಿಲ್ಲ. ಈ ನಡುವೆ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಣ್ಣ ಪ್ರಕರಣ ದಾಖಲಿಸಿ, ನಮ್ಮವರನ್ನು ಅಲ್ಲಿಂದ ಕಳುಹಿಸಿದ್ದರು. ಆ ವೇಳೆ ನಾವು ಹೆದರಿ ಬಂಗಾರದ ಬಗ್ಗೆ ಮಾಹಿತಿ ನೀಡಿರಲಿಲ್ಲ’.

‘ಏ.16ರಂದು ನ್ಯಾಯಾಲಯದ ಆದೇಶದಂತೆ ಪೊಲೀಸರು ಕಾರು ಬಿಡುಗಡೆ ಮಾಡಿದರು. ಏರ್‌ಬ್ಯಾಗ್ ಜಾಗ ಪರಿಶೀಲಿಸಿದಾಗ ಬಂಗಾರ ಇರಲಿಲ್ಲ ಮತ್ತು ಹಿಂಬದಿಯ ಗಾಜನ್ನು ಬದಲಾವಣೆ ಮಾಡಲಾಗಿತ್ತು. ಚಿನ್ನವನ್ನು ಯಾರೋ ತೆಗೆದುಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಪೂಜಾರಿ, ಉತ್ತರ ವಲಯ ಐಜಿಪಿಯಾಗಿದ್ದ ಎಚ್‌.ಜಿ. ರಾಘವೇಂದ್ರ ಸುಹಾಸ್ ಅವರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಪೊಲೀಸರು, ಪ್ರಕರಣದಲ್ಲಿ ಇಲಾಖೆಯವರೇ ಇರಬಹುದಾದ ಸಾಧ್ಯತೆಗಳು ಇರುವುದರಿಂದ ಹೆಚ್ಚಿನ ತನಿಖೆಗೆ ಸಿಐಡಿಗೆ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ಕೆಲವು ದಿನಗಳವರೆಗೆ ಇದ್ದು ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಮುಂದಿನ ತನಿಖೆಗಾಗಿ ಐಪಿಸಿ ಸೆಕ್ಷನ್ 380 (ಕಳ್ಳತನ) ಹಾಗೂ 447 (ಅಕ್ರಮ ಪ್ರವೇಶ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

‘ಇದರೊಂದಿಗೆ ಚಿನ್ನ ಕಳವಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಯಾರು ಕದ್ದಿದ್ದಾರೆ ಎನ್ನುವುದು ತನಿಖೆಯಿಂದ ಹೊರಬರಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ಸಿಐಡಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಗೋಕಾಕ ಉಪ ವಿಭಾಗದ ಡಿವೈಎಸ್ಪಿ, ಡಿಎಸ್‌ಬಿ ಇನ್‌ಸ್ಪೆಕ್ಟರ್‌ ಮತ್ತು ಯಮಕನಮರಡಿ ಠಾಣೆ ಪಿಎಸ್‌ಐ ಅವರನ್ನು ಕೆಲವು ದಿನಗಳ ಹಿಂದೆ ವರ್ಗಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT