ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯೂ ವಿಭಜನೆ ಆಗಲೇಬೇಕು: ಶಾಸಕ ಸತೀಶ

ಉಪ ಚುನಾವಣೆ: ಸ್ಪರ್ಧೆಗೆ ಆಸಕ್ತಿ ಇಲ್ಲ
Last Updated 26 ನವೆಂಬರ್ 2020, 8:31 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಬಂದಿರುವುದು ನಿಜ. ಆದರೆ, ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ. ರಾಜ್ಯ ಹಾಗೂ ಜಿಲ್ಲೆಯಲ್ಲೇ ಮಾಡುವುದಕ್ಕೆ ಬಹಳಷ್ಟು ಕೆಲಸವಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಭ್ಯರ್ಥಿ ಆಯ್ಕೆ ಕುರಿತು ಡಿಸೆಂಬರ್ ಮೊದಲ ವಾರ 2ನೇ ಸುತ್ತಿನ ಸಭೆ ನಡೆಸುತ್ತೇವೆ. ಯಾರ‍್ಯಾರು ಆಸಕ್ತರಿದ್ದಾರೆ ಮತ್ತು ಅವರ ಸಾಮರ್ಥ್ಯವೇನು ಎನ್ನುವುದನ್ನು ಪರಿಶೀಲಿಸಿ, ಮೂವರ ಹೆಸರನ್ನು ಕೆಪಿಸಿಸಿಗೆ ಕಳುಹಿಸಲಾಗುವುದು. ಅಂತಿಮ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತದೆ. ಅದಕ್ಕೆ ಬದ್ಧವಿದ್ದೇವೆ’ ಎಂದು ತಿಳಿಸಿದರು.

‘ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಸಮರ್ಥರನ್ನು ಕಣಕ್ಕಿಳಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

‘ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಟಿಕೆಟ್‌ ಕೇಳಿರುವ ವಿಚಾರ ನನಗೆ ಗೊತ್ತಿಲ್ಲ’ ಎಂದರು.

ಬಂದ್‌ಗೆ ಬೆಂಬಲವಿಲ್ಲ:

‘ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ, ಕೆಲವು ಸಂಘಟನೆಗಳು ಡಿ. 5ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕಾಂಗ್ರೆಸ್ ಬೆಂಬಲವಿಲ್ಲ. ಯಾವುದೇ ಸಮುದಾಯಕ್ಕೆ ನಿಗಮ ರಚಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ರಾಜಕೀಯ ಕಾರಣ ಮುಂದಿಟ್ಟುಕೊಂಡು ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ನಿಗಮ ಸ್ಥಾಪನೆಯನ್ನು ಬಜೆಟ್‌ನಲ್ಲಿಯೇ ಘೋಷಣೆ ಮಾಡಬೇಕಿತ್ತು. ಚುನಾವಣೆಗಳು ಬಂದಾಗ ಘೋಷಿಸಿರುವುದೇಕೆ?’ ಎಂದು ಕೇಳಿದರು.

‘ಬಿಜೆಪಿಯವರು ಯಾವ ಕಾಲದಲ್ಲೂ ಅಭಿವೃದ್ಧಿಗೆ ಆದ್ಯತೆ ನೀಡಿಯೇ ಇಲ್ಲ. ಅದನ್ನು ನಾವು ನಿರೀಕ್ಷೆ ಮಾಡಲೂಬಾರದು’ ಎಂದರು.

ಮೂರು ಜಿಲ್ಲೆಗಳಾಗಲಿ:

‘ಧಾರವಾಡದಲ್ಲೂ ಮೊದಲು 18 ವಿಧಾನಸಭಾ ಕ್ಷೇತ್ರಗಳಿದ್ದವು. ಆಗ ಆ ಜಿಲ್ಲೆ ವಿಭಜನೆ ಮಾಡಲಾಯಿತು. ಅಂತೆಯೇ ಬೆಳಗಾವಿ ಜಿಲ್ಲೆಯನ್ನೂ ವಿಭಜಿಸಬೇಕು. ಗೋಕಾಕ, ಚಿಕ್ಕೋಡಿ ಮತ್ತು ಬೆಳಗಾವಿ ಮೂರು ಜಿಲ್ಲೆ ರಚಿಸಲೇಬೇಕು. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಅಗತ್ಯವಾಗಿದೆ. ಇದನ್ನು ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಚಿಕ್ಕೋಡಿ ಜಿಲ್ಲೆ ರಚಿಸಬೇಕೆಂದು ಆ ಭಾಗದ ಬಿಜೆಪಿ ನಾಯಕರೂ ಅಲ್ಲಿ ‍ಹೋರಾಟ ನಡೆಸಿರಲಿಲ್ಲವೇ?’ ಎಂದು ಹೇಳಿದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಇದ್ದರು.

ಇದಕ್ಕೂ ಮುನ್ನ, ಕೋವಿಡ್–19ನಿಂದ ನಿಧನರಾದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂವಿಧಾನ ದಿನ ಆಚರಿಸಲಾಯಿತು.

‘ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟಂತಹ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಸತತ ಅಧ್ಯಯನದ ಫಲವಾಗಿ ನಮಗೆ ಉತ್ತಮವಾದ ಸಂವಿಧಾನ ಸಿಕ್ಕಿದೆ’ ಎಂದು ಮುಖಂಡ ಸಂತೋಷ ಬಗಲಿ ದೇಸಾಯಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT