ಭಾನುವಾರ, ಸೆಪ್ಟೆಂಬರ್ 26, 2021
27 °C
ಜಿಲ್ಲೆಯೊಂದರಲ್ಲೇ ಬರಬೇಕಾದ ಬಾಕಿ ₹ 57.46 ಕೋಟಿ

‘ಖಾತ್ರಿ’ ಕೂಲಿ ಹಣ ನೀಡಲೂ ‘ಬರ’!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸರಿಯಾದ ಮಳೆ, ಬೆಳೆ ಇಲ್ಲದೇ ಬರಪೀಡಿತವಾಗಿರುವ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಬಡ ಜನರು ಮಾಡಿದ ಕೆಲಸಕ್ಕೆ ಕೂಲಿಯೂ ದೊರೆಯದೇ ಕಂಗಾಲಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಕೆಲಸಕ್ಕಾಗಿ ಗುಳೆ ಹೋಗುವ ಸಾಧ್ಯತೆಗಳು ಕಂಡುಬರುತ್ತಿವೆ.

ಬರದ ಕಾರ್ಮೋಡಕ್ಕೆ ಸಿಲುಕಿ ತೀವ್ರ ಕಂಗಾಲಾಗಿರುವ ಕೃಷಿ ಕೂಲಿಕಾರ್ಮಿಕರ ಕೈ ಹಿಡಿಯಬೇಕಿದ್ದ ಹಾಗೂ ಆಸರೆಯಾಗಬೇಕಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೂಡ ಕೈಕೊಟ್ಟಿದೆ.

ಚಳಿ, ಬಿಸಿಲೆನ್ನದೇ ಬೆವರು ಸುರಿಸಿ ದುಡಿದ ಕೈಗಳಿಗೆ ಕೂಲಿ ಕೊಡುವುದಕ್ಕೂ ಹಣಕಾಸಿನ ಕೊರತೆ ಉಂಟಾಗಿದೆ. ಯೋಜನೆಯಡಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ ₹ 57.46 ಕೋಟಿ ಬಾಕಿ ಬರಬೇಕಾಗಿದೆ. ಕಾಲಕಾಲಕ್ಕೆ ಹಣ ಬಿಡುಗಡೆ ಅಗದಿರುವುದು ಕೂಲಿಕಾರರನ್ನು ಸಂಕಷ್ಟಕ್ಕೆ ದೂಡಿದೆ.

ವಿವಿಧ ಕೆಲಸಗಳಲ್ಲಿ: ಹಳ್ಳಿಗಳ ಸಾವಿರಾರು ಮಂದಿ ‘ಖಾತ್ರಿ’ ಯೋಜನೆಯ ಕೂಲಿ ನಂಬಿ ತಿಂಗಳುಗಟ್ಟಲೆ ಕೆರೆ, ಕುಂಟೆಗಳಲ್ಲಿ ಹೂಳು ತೆಗೆಯುವ, ಬದು, ಕೃಷಿ ಹೊಂಡಗಳನ್ನು ನಿರ್ಮಿಸುವ, ನದಿ ಪುನಶ್ಚೇತನ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಶ್ರಮಕ್ಕೆ ಪ್ರತಿಫ‌ಲವಾಗಿ ಸಿಗಬೇಕಿದ್ದ ಕೂಲಿ ಹಣಕ್ಕೆ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಸಂಬಂಧಿಸಿದ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.

ಯೋಜನೆಯಡಿ, ಉದ್ಯೋಗ ಚೀಟಿ ಹೊಂದಿರುವ ಒಬ್ಬರಿಗೆ ಬರದ ಹಿನ್ನೆಲೆಯಲ್ಲಿ ವಾರ್ಷಿಕ ಕೆಲಸದ ದಿನಗಳನ್ನು 150 ದಿನಗಳಿಗೆ ಏರಿಸಲಾಗಿದೆ. ದಿನವೊಂದಕ್ಕೆ ₹ 249 ಕೂಲಿ ನಿಗದಿಪಡಿಸಲಾಗಿದೆ. ಹಲವು ತಿಂಗಳಿಂದ ಕಾರ್ಮಿಕರಿಗೆ ಕೂಲಿ ಹಣ ಜಮೆಯಾಗಿಲ್ಲ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳು ಸರ್ಕಾರಗಳತ್ತ ಬೆರಳು ತೋರಿಸಿ, ‘ನಮಗೂ ಬಾಕಿಗೂ ಸಂಬಂಧವಿಲ್ಲ’ ಎನ್ನುವಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿ, ಬಾಕಿ ಮೊತ್ತ ಹೆಚ್ಚುತ್ತಲೇ ಇದೆ. ಇದರೊಂದಿಗೆ ಕೂಲಿಕಾರರ ಸಂಕಷ್ಟವೂ ಉಲ್ಬಣಿಸುತ್ತಿದೆ.

ಅಧಿಕಾರಿಗಳ ಸ್ಪಂದನೆ ಇಲ್ಲ: ಮುಂಗಾರು  ಹಾಗೂ ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಪರಿಣಾಮ, ಇಡೀ ಜಿಲ್ಲೆಯನ್ನು (ಎಲ್ಲ 14 ತಾಲ್ಲೂಕು) ಬರಪೀಡಿತ ಎಂದು ಘೋಷಿಸಲಾಗಿದೆ. ಇದರಿಂದಾಗಿ ಹಳ್ಳಿಗಳಲ್ಲಿ ಜನರಿಗೆ ಕೃಷಿ ಕೆಲಸಗಳು ಅಷ್ಟಾಗಿ ದೊರೆಯುತ್ತಿಲ್ಲ. ಉದ್ಯೋಗ ಖಾತ್ರಿಯಡಿ ಮಾಡಿದ ಕೂಲಿಯೂ ಕೈಸೇರದೇ ಶ್ರಮಿಕ ವರ್ಗ ಅನುಭವಿಸುತ್ತಿರುವ ಕಷ್ಟಕ್ಕೆ ಅಧಿಕಾರಿಗಳಿಂದ ‘ಸ್ಪಂದನೆ’ ದೊರೆತಿಲ್ಲ.

‌ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ 83 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಲಾಗಿತ್ತು. ಜನವರಿ ಅಂತ್ಯದವರೆಗೆ 73.22 ಲಕ್ಷ ಉದ್ಯೋಗ ಕಲ್ಪಿಸಿ, ಗುರಿ ಮೀರಿ (ಶೇ 117.32) ಸಾಧನೆ ಮಾಡಲಾಗಿದೆ. ಆದರೆ, ಕೂಲಿ ಹಾಗೂ ಸಾಮಗ್ರಿ ವೆಚ್ಚ ಭರಿಸುವ ಕಾರ್ಯವಾಗಿಲ್ಲ. ಕೂಲಿಯಾಗಿ ನೀಡಬೇಕಾದ ₹ 6 ಕೋಟಿ ಹಾಗೂ ಸಾಮಗ್ರಿಗೆ ಆದ ವೆಚ್ಚ ₹ 51.46 ಕೋಟಿ ಬಾಕಿ ಇದೆ.

ದೊಡ್ಡ ಮೊತ್ತ ಬಾಕಿ ಇರುವುದು ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಲೆನೋವಿಗೆ ಕಾರಣವಾಗಿದೆ. ‘ಶೀಘ್ರವೇ ಹಣ ಬರುತ್ತದೆ’ ಎಂಬಿತ್ಯಾದಿ ನೆಪಗಳನ್ನು ಹೇಳಿ, ಕೃಷಿ ಕಾರ್ಮಿಕರಿಂದ ಕೂಲಿ ಮಾಡಿಸಲು ಹೆಣಗಾಡುತ್ತಿದ್ದಾರೆ.

ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ ಪ್ರತಿಕ್ರಿಯಿಸಿ, ‘ಈ ಸಮಸ್ಯೆ ಬೆಳಗಾವಿ ಜಿಲ್ಲೆಯಷ್ಟೇ ಅಲ್ಲ. ರಾಜ್ಯದಾದ್ಯಂತ ಇದೆ. ಜನರಿಗೆ ಮನವರಿಕೆ ಮಾಡಿಕೊಟ್ಟು ಖಾತ್ರಿ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ. ಕೆಲಸಕ್ಕಾಗಿ ಪಡೆದ  ಟ್ರಾಕ್ಟರ್‌, ಖರೀದಿಸಿದ ಸಿಮೆಂಟ್ ಮೊದಲಾದ ಸಾಮಗ್ರಿಗಳ ವೆಚ್ಚ ಜಾಸ್ತಿ ಇದೆ. ಎಲ್ಲವನ್ನೂ ಸಚಿವರ ಗಮನಕ್ಕೆ ತಂದಿದ್ದೇವೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು