ಗುರುವಾರ , ಜೂನ್ 17, 2021
24 °C
ಪ್ರಯಾಣಿಕರು ಬಸ್‌ಗಾಗಿ ರಸ್ತೆ ಬದಿಯಲ್ಲೇ ಕಾಯಬೇಕಾದ ಅನಿವಾರ್ಯತೆ

ಬಸ್‌ ನಿಲ್ದಾಣವೇ ಇಲ್ಲದ ಕಬ್ಬೂರ ಪಟ್ಟಣ!

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ತಾಲ್ಲೂಕಿನ ಕಬ್ಬೂರ ಪಟ್ಟಣದಲ್ಲಿ ಕನಿಷ್ಠ ಮೂಲ ಸೌಲಭ್ಯವಾದ ಬಸ್ ನಿಲ್ದಾಣವೇ ಇಲ್ಲ! ಇದರಿಂದ ಪ್ರಯಾಣಿಕರು ಬಸ್‌ಗಾಗಿ ಮಳೆ, ಬಿಸಿಲಲ್ಲೂ ರಸ್ತೆ ಬದಿಯಲ್ಲೇ ನಿಂತು ಕಾಯುವ ಅನಿವಾರ್ಯತೆ ಇದೆ. ಇಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಸಾರ್ವಜನಿಕರ ಬಹು ದಿನಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.

ಕಬ್ಬೂರದ ಸಾರ್ವಜನಿಕರಿಗೆ ಸುಸಜ್ಜಿತವಾದ ಬಸ್ ನಿಲ್ದಾಣ ಅತ್ಯವಶ್ಯವಾಗಿದೆ ಪಟ್ಟಣದ ಮೂಲಕ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಆದರೆ, ಪ್ರಯಾಣಿಕರು ಬಸ್ ನಿಲ್ದಾಣ ಇಲ್ಲದೇ ಇರುವುದರಿಂದ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ನಿಂತುಕೊಳ್ಳುವ ಮೂಲಕ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅಪಘಾತಕ್ಕೂ ಇದು ಆಸ್ಪದ ನೀಡುತ್ತಿದೆ.

ನೂರಾರು ಬಸ್‌ ಸಂಚಾರ:

ಪಟ್ಟಣವು 18,858 ಜನಸಂಖ್ಯೆ ಹೊಂದಿದೆ. ಆಡಳಿತದ ದೃಷ್ಟಿಯಿಂದಾಗಿ ನಾಲ್ಕೈದು ವರ್ಷದ ಹಿಂದೆ ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಬಸ್‌ ನಿಲ್ದಾಣದಂತಹ ಸೌಲಭ್ಯಗಳನ್ನು ಕಲ್ಪಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತೆಲೆಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ-ಮಹಾರಾಷ್ಠ ರಾಜ್ಯಗಳ ನಿಪ್ಪಾಣಿ, ಕೊಲ್ಹಾಪುರ, ಪುಣೆ, ಮುಂಬೈ, ಸಾಂಗಲಿ, ಗೋಕಾಕ, ಸವದತ್ತಿ, ಯಲ್ಲಮ್ಮನಗುಡ್ಡ, ಧಾರವಾಡ, ಬೆಂಗಳೂರು, ಬೆಳಗಾವಿ ಮುಂತಾದ ಪಟ್ಟಣ-ನಗರಗಳಿಗೆ ಕಬ್ಬೂರ ಪಟ್ಟಣದ ಮೂಲಕ ಬಸ್‌ಗಳು ಸಂಚರಿಸುತ್ತವೆ. ನಿತ್ಯವೂ 175ಕ್ಕೂ ಹೆಚ್ಚಿನ ಬಸ್‌ಗಳು ಈ ಮಾರ್ಗದಲ್ಲಿ ಹಾದು ಹೋಗುತ್ತವೆ. ಇಂತಹ ದೊಡ್ಡ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಸಾವಿರಾರು ಮಂದಿ:

ಕಬ್ಬೂರ ಪಟ್ಟಣದಿಂದ ಸುತ್ತಮುತ್ತಲಿನ ಗ್ರಾಮಗಳಾದ ಬೆಲ್ಲದ ಬಾಗೇವಾಡಿ, ಜಾಗನೂರ, ವಿಜಯನಗರ, ಕೆಂಚನಟ್ಟಿ, ಬೆಳಗಲಿ, ಮಾಡಲಗಿ, ಜೋಡಟ್ಟಿ, ಮಿರಾಪುರಹಟ್ಟಿ ಗ್ರಾಮಗಳು ಹಾಗೂ ಸಮೀಪದಲ್ಲಿ ಚಿಕ್ಕೋಡಿ ರೈಲು ನಿಲ್ದಾಣವಿದೆ. ರೈಲಿನಲ್ಲಿ ಬರುವಂತಹ ಪ್ರಯಾಣಿಕರು ತಮ್ಮ ಪಟ್ಟಣ, ಗ್ರಾಮ, ನಗರಗಳಿಗೆ ಪ್ರಯಾಣವನ್ನು ಕಬ್ಬೂರ ಪಟ್ಟಣದಿಂದ ಮುಂದುವರಿಸಬೇಕಾಗುತ್ತದೆ. ಆದರೆ, ಇಲ್ಲಿ ಬಸ್‌ಗಳಿಗಾಗಿ ಕಾಯುತ್ತಾ ನಿಲ್ಲಬೇಕಾಗಿದೆ. ಬಿಸಿಲು, ಮಳೆಯಿಂದ ತಪ್ಪಿಸಿಕೊಳ್ಳಲು ನಿಲ್ದಾಣದ ಕೊರತೆ ಕಾಡುತ್ತಿದೆ. ಅಧಿಕಾರಿಗಳು ಮಾತ್ರ, ಜಾಗದ ಕೊರತೆ ಇದೆ ಎಂಬಿತ್ಯಾದಿ ಕಾರಣಗಳನ್ನು ಹೇಳುತ್ತಾ ಕಾಲ ದೂಡುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಮುನ್ನ ಚಿಕ್ಕದಾದ ಬಸ್ ತಂಗುದಾಣ ಇತ್ತು. ಅದನ್ನು ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ನೆಲಸಮಗೊಳಿಸಲಾಗಿದೆ. ಹೆದ್ದಾರಿ ನಿರ್ಮಾಣವಾಗಿ ಎರಡು ವರ್ಷಗಳೇ ಕಳೆದಿವೆ. ಆದರೆ, ಪಟ್ಟಣದ ಜನರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲ ಮಾಡಿಕೊಡಲು ಬಸ್ ನಿಲ್ದಾಣವನ್ನು ನಿರ್ಮಿಸಿಯೇ ಇಲ್ಲ.

ಶೌಚಾಲಯವಿಲ್ಲದೆ ಜನರ ಪರದಾಟ:

ಬಸ್ ನಿಲ್ದಾಣ ನಿರ್ಮಿಸಿಲ್ಲದೇ ಇರುವುದರಿಂದ ಇಲ್ಲಿ ಶೌಚಾಲಯ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೂರದ ಗ್ರಾಮಗಳಿಂದ ಬಸ್‌ಗಾಗಿ ರಸ್ತೆ ಬದಿಯಲ್ಲೇ ಕಾದು ಕುಳಿತುಕೊಳ್ಳುವ ಪ್ರಯಾಣಿಕರು ನೈಸರ್ಗಿಕ ಕರೆಗಳಿಗಾಗಿ ಬಯಲನ್ನೇ ಆಶ್ರಯಿಸಬೇಕಾಗಿದೆ. ಮಹಿಳೆಯರು, ಯುವತಿಯರ ಪಾಡು ಹೇಳತೀರದು. ಸಂಬಂಧಿಸಿದವರು ಎಚ್ಚೆತ್ತುಕೊಂಡು ಕೂಡಲೇ ಕಬ್ಬೂರ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಬೇಕು. ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಒದಗಿಸಬೇಕು ಎನ್ನುತ್ತಾರೆ ಸ್ಥಳೀಯರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು