ಮಂಗಳವಾರ, ಏಪ್ರಿಲ್ 20, 2021
31 °C

ತಮಿಳು, ಕನ್ನಡ ಸೋದರ ಭಾಷೆಗಳು: ಜಯಲಲಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ತಮಿಳು ಮತ್ತು ಕನ್ನಡ ಸಹೋದರ ಭಾಷೆಗಳು’ ಎಂದು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಡಾ.ಜಯಲಲಿತಾ ಅಭಿಪ್ರಾಯಪಟ್ಟರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಏರ್ಪಡಿಸಿದ್ದ ‘ತಮಿಳು ಮತ್ತು ಕನ್ನಡ ಶಾಸ್ತ್ರೀಯ ಭಾಷೆಗಳ ಅಂತಃಸಬಂಧಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಾಚೀನ ಕನ್ನಡ ಮತ್ತು ತಮಿಳು ಸಾಹಿತ್ಯವು ಒಂದನ್ನೊಂದು ಅವಲಂಬಿಸಿ ಬೆಳೆದ ಭಾಷೆಗಳಾಗಿವೆ. ಮೂಲದಲ್ಲಿ ಒಂದೇ ಭಾಷೆಯಾಗಿದ್ದ ಅವು ಕಾಲಾನುಕ್ರಮದಲ್ಲಿ ಬೇರೆ ಕವಲುಗಳಾಗಿ ಬೆಳೆದ ದಕ್ಷಿಣ ಏಷಿಯಾದ ಮಹಾನ್ ಭಾಷೆಗಳಾದವು. ಭಾಷೆ, ವ್ಯಾಕರಣ, ಸಾಹಿತ್ಯ, ಶಾಸ್ತ್ರಕಾವ್ಯ ಹಾಗೂ ಚಳುವಳಿಗಳ ಹಿನ್ನೆಲೆಯಲ್ಲಿ ಎರಡೂ ಶಾಸ್ತ್ರೀಯ ಭಾಷೆಗಳ ಅಂತಃಸಂಬಂಧಗಳನ್ನು ಗುರುತಿಸಬಹುದಾಗಿದೆ’ ಎಂದರು.

‘ಅಲ್ಲದೇ ಷಂಗೈ, ತೇವಾರಂ ಮುಂತಾದ ಚಳವಳಿಗಳು ತಮಿಳಿನಲ್ಲಿ ಬಂದರೆ, ಕನ್ನಡದಲ್ಲಿ ಚಂಪೂ, ವಚನ ಚಳವಳಿಗಳು ಬಂದವು. ಒಂದೇ ಮನೆಯ ಸೋದರ ಭಾಷೆಗಳಾದ ಎರಡು ಭಾಷೆಗಳು ಇಂದಿಗೂ ನಾಮಪದ, ಕ್ರಿಯಾಪದ, ಲಿಂಗ, ವಚನ, ವಿಭಕ್ತಿಗಳಲ್ಲಿ ಅದೇ ಸಂರಚನೆಯನ್ನು ಒಳಗೊಂಡಿವೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ.ಎಸ್.ಎಂ. ಗಂಗಾಧರಯ್ಯ, ‘ಶಕ್ಕಿಳಾರ್‌ನ ಪೆರಿಯ ಪುರಾಣ, ತಿರುಕ್ಕುರುಳ್, ತೊಲ್ಕಾಪ್ಪಿಯಂ, ಕವಿರಾಜ ಮಾರ್ಗ, ಪಂಪಭಾರತ, ಗದಾಯುದ್ಧ, ಶಬ್ಧಮಣಿದರ್ಪಣದಂತಹ ಕೃತಿಗಳನ್ನು ಎರಡು ಭಾಷೆಗಳ ಮೂಲಕ ಅಧ್ಯಯನ ಮಾಡಿ ಚರ್ಚಿಸಲು ವಿಫುಲ ಅವಕಾಶಗಳಿವೆ’ ಎಂದು ಅಭಿಪ್ರಾಯಪಟ್ಟರು.

ಡಾ.ಗಜಾನನ ನಾಯ್ಕ, ಡಾ.ಹನುಮಂತಪ್ಪ ಸಂಜೀವಣ್ಣವರ, ಡಾ.ಮಹೇಶ ಫ. ಗಾಜಪ್ಪನವರ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ.ಪಿ. ನಾಗರಾಜ, ಅಂಜುಮನ್‌ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಐ. ತಿಮ್ಮಾಪೂರ ಇದ್ದರು.

ಡಾ.ಶೋಭಾ ನಾಯಕ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು