ಶನಿವಾರ, ಮೇ 30, 2020
27 °C
ಮನೋರೋಗ ತಜ್ಞ ಎಸ್‌.ಎಸ್‌. ಚಾಟೆ ಜೊತೆ ಸಂದರ್ಶನ;

ಲಾಕ್‌ಡೌನ್‌ ವೇಳೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ: ವೈದ್ಯ ಚಾಟೆ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್‌ ಹೇರಲಾಗಿದೆ. ಅವಶ್ಯಕ ಹಾಗೂ ತುರ್ತುಪರಿಸ್ಥಿತಿಗಳನ್ನು ಹೊರತುಪಡಿಸಿದರೆ ಯಾರೂ ಮನೆಯಿಂದ ಹೊರಬರಬಾರದೆಂದು ಸರ್ಕಾರ ಆದೇಶ ಹೊರಡಿಸಿದ್ದು, ಒಂದು ವಾರ ಕಳೆದಿದೆ. ಇನ್ನೂ 15 ದಿನ ಕಳೆಯಬೇಕಾಗಿದೆ.

ದಿನದ 24 ಗಂಟೆಯೂ ಮನೆಯಲ್ಲಿಯೇ ಇರುವುದರಿಂದ ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಇಂತಹ ಸಂದರ್ಭಗಳಲ್ಲಿ ಅವರ ಮಾನಸಿಕ ಸ್ಥಿತಿ ಹೇಗಿರುತ್ತದೆ? ಅದನ್ನು ಆರೋಗ್ಯಕರವಾಗಿ ಹೇಗೆ ಕಾಪಾಡಿಕೊಳ್ಳಬೇಕು? ಹಾಗೂ ಇತರ ಅಂಶಗಳ ಬಗ್ಗೆ ಮನೋರೋಗತಜ್ಞ ಎಸ್‌.ಎಸ್‌. ಚಾಟೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

21 ದಿನಗಳವರೆಗೆ ಮನೆಯಲ್ಲಿಯೇ ‘ಬಂಧಿ’ಯಾಗಿರಬೇಕಾದ ಪರಿಸ್ಥಿತಿ ಬಹುಶಃ ಇದೇ ಮೊದಲ ಬಾರಿ ಬಂದಿದೆ. ಮನಸೋಇಚ್ಛೆ ತಿರುಗಾಡುತ್ತಿದ್ದ ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ?

ಮನುಷ್ಯ ಮೂಲತಃ ಸಂಘಜೀವಿ. ನಾಲ್ಕಾರು ಜನರ ಜೊತೆ ಬೆರೆತು, ಬದುಕುವಂತಹ ಜೀವಿ. ಇದನ್ನೇ ಇಷ್ಟು ವರ್ಷ ಮಾಡಿಕೊಂಡು ಬಂದಿದ್ದಾರೆ. ಈಗ ಅಚಾನಕ್‌ ಆಗಿ ಎದುರಾಗಿರುವ ‘ಲಾಕ್‌ಡೌನ್‌’ನಿಂದಾಗಿ ಒಂದಿಷ್ಟು ಕಷ್ಟವಾಗಬಹುದು. ಮನೆಯಲ್ಲಿಯೇ ಹೊತ್ತು ಸಮಯ ಕಳೆಯಲು ಬೇಸರವಾಗಬಹುದು. ಮಕ್ಕಳಿಗಿಂತ ಮಧ್ಯವಯಸ್ಕರರು ಹಾಗೂ ವಯಸ್ಸಾದವರಲ್ಲಿ ಹೆಚ್ಚು ಬೇಸರ, ಆತಂಕ ತರಿಸಬಹುದು. ಸಣ್ಣಪುಟ್ಟ ಆತಂಕ, ಬೇಸರ ಮೆಟ್ಟಿ ನಿಂತರೆ ತೊಂದರೆಯಾಗದು, ಆದರೆ ಮೀತಿ ಮೀರಿ ಉದ್ವೇಗಕ್ಕೆ ಒಳಗಾದರೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು.

ಯಾವ ರೀತಿ ಲಕ್ಷಣಗಳು ಕಾಣಿಸುತ್ತವೆ?

ಹೊರಪ್ರಪಂಚದ ಜೊತೆ ಸಂಪರ್ಕ ಕಡಿತಗೊಳಿಸಿಕೊಂಡ ನಂತರ ಹಾಗೂ ಕೊರೊನಾ ಬಗ್ಗೆಯೇ ಚಿಂತಿಸುವುದರಿಂದ ಮುಂದೆ ಹೇಗಪ್ಪ ಎನ್ನುವ ಭಯ, ಆತಂಕ ಕಾಡುತ್ತದೆ. ಏಪ್ರಿಲ್‌ 14ಕ್ಕೆ ಇದು ಕೊನೆಗಾಣದಿದ್ದರೆ ಹೇಗೆ ಎಂದು ಚಿಂತಿಸಲು ಆರಂಭಿಸುತ್ತಾರೆ. ಮಾತು ಕಡಿಮೆ ಮಾಡುತ್ತಾರೆ. ಅತಂತ್ರ ಭಾವನೆಗೆ ಒಳಗಾಗುತ್ತಾರೆ. ಇದು ನಿದ್ರಾಹೀನತೆಗೂ ಕಾರಣವಾಗಲು ಸಾಕು. ನಿದ್ರೆ ಹತ್ತುವುದು ಕಡಿಮೆಯಾಗುತ್ತ ಬಂದರೆ, ಪರಿಸ್ಥಿತಿ ತುಂಬಾ ಗಂಭೀರವಾಗುತ್ತದೆ. ಮುಂದೆ ಇದು ಜಿಗುಪ್ಸೆಗೆ (ಡಿಪ್ರೆಷನ್‌)  ಹಾಗೂ ಆತ್ಮಹತ್ಯೆ ಯೋಚನೆಗಳಿಗೂ ಕಾರಣವಾಗಬಹುದು.

ಇದಕ್ಕೆ ಪರಿಹಾರವೇನು?

ಸರ್ಕಾರ ಲಾಕ್‌ಡೌನ್‌ ಮಾಡಿರುವುದು ನಮ್ಮ ಒಳ್ಳೆಯದಕ್ಕೆ ಎನ್ನುವುದನ್ನು ಮನಗಾಣಬೇಕು. ನಮ್ಮಲ್ಲಿರುವ ಹಿರಿಯರು ಅಥವಾ ತಿಳಿದುಕೊಂಡರು ಈ ವಿಷಯವನ್ನು ಇತರ ಸದಸ್ಯರಿಗೆ ಮನವರಿಕೆ ಮಾಡಿಕೊಡಬೇಕು. ಸಾಮಾನ್ಯ ದಿನಗಳಲ್ಲಿಯಾದರೆ ಇಷ್ಟೊಂದು ಸಮಯ ಮನೆಯಲ್ಲಿ ಇರಲು ಸಾಧ್ಯವೇ ಇರಲಿಲ್ಲ. ಈಗ ಇಂತಹದೊಂದು ಅವಕಾಶ ಸಿಕ್ಕಿದೆ. ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಲು ದೇವರೇ ಅವಕಾಶ ಕಲ್ಪಿಸಿಕೊಟ್ಟಿದ್ದಾನೆ ಎಂದುಕೊಳ್ಳಬೇಕು. ಆಗ ನೋಡಿ, ಸಕಾರಾತ್ಮಕ ಭಾವನೆ ಹೇಗೆ ಮೂಡುತ್ತದೆ.

ಪ್ರಾಥಮಿಕ ಹಂತದಲ್ಲಿ ನಮ್ಮ ಹಂತದಲ್ಲಿಯೇ ಇದಕ್ಕೆ ಪರಿಹಾರ ರೂಪಿಸಿಕೊಳ್ಳಬೇಕು. ಕುಟುಂಬದ ಸದಸ್ಯರ ಜೊತೆ ಮಾತನಾಡುವುದು, ಹರಟೆ ಹೊಡೆಯುವುದು, ಸ್ನೇಹಿತರಿಗೆ ದೂರವಾಣಿ ಕರೆ ಮಾಡುವುದು, ಮನೆಗೆಲಸ ಮಾಡುವುದು, ಟಿ.ವಿ, ಮೊಬೈಲ್‌ ವೀಕ್ಷಿಸುವುದನ್ನು ಮಾಡಬಹುದು. ಕತೆ– ಕಾದಂಬರಿ, ದಿನಪತ್ರಿಕೆ ಓದಬಹುದು. ಮಕ್ಕಳ ಜೊತೆ ಆಟವಾಡಬಹುದು. ಕ್ರಾಫ್ಟ್‌ಗಳನ್ನು ಮಾಡಬಹುದು, ಪತಿ– ಪತ್ನಿ ಜೊತೆ ಹೆಚ್ಚಿನ ಸಮಯ ಕಳೆಯಬಹುದು. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳ ಜೊತೆ ಸಮಯ ಕಳೆಯಬಹುದು. ಸಾಧ್ಯವಾದಷ್ಟು ಏಕಾಂತವಾಗಿರಬಾರದು. ನಿದ್ರಾಹೀನತೆ, ಜಿಗುಪ್ಸೆ ಅಥವಾ ಜೀವನವೇ ಬೇಸರವಾಗಿ ಆತ್ಮಹತ್ಯೆಯಂತಹ ಆಲೋಚನೆಗಳು ಬರುತ್ತಿದ್ದರೆ ತಕ್ಷಣ ಸಮೀಪದ ಮನೋರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.

ತೀವ್ರ ಒತ್ತಡಕ್ಕೆ ಒಳಗಾಗಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ.

ಹೌದು. ಇವರಲ್ಲಿ ಬಹುತೇಕರು ಮದ್ಯವ್ಯಸನಿಗಳು ಎನ್ನುವುದನ್ನು ತಿಳಿದುಕೊಳ್ಳಬೇಕು. ತಂಬಾಕು, ಸಿಗರೇಟು ಹಾಗೂ ಇತರ ವ್ಯಸನಿಗಳು ತಮ್ಮನ್ನು ತಾವು ಹೇಗೋ ನಿಯಂತ್ರಿಸಿಕೊಳ್ಳುತ್ತಾರೆ. ಆದರೆ, ಮದ್ಯ ವ್ಯಸನಿಗಳಿಗೆ ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿದಿನ ಕುಡಿಯುವುದರಿಂದ ಅವರ ದೇಹ ಮದ್ಯಕ್ಕೆ ಒಗ್ಗಿಕೊಂಡಿರುತ್ತದೆ. ಅದಿಲ್ಲವೆಂದರೆ ಅವರ ಕೈ– ಕಾಲುಗಳು ನಡುಗುತ್ತವೆ. ನಾಲಿಗೆ ತೊದಲಿಸುತ್ತದೆ. ನಿದ್ರೆ ಹತ್ತುವುದಿಲ್ಲ. ಯಾವಾಗಲೂ ಬಾಯಿ ಬಡಿಸುತ್ತಾರೆ. ಇಂತಹವರಿದ್ದರೆ ಸಮೀಪದ ಆಸ್ಪತ್ರೆಗೆ ಅಥವಾ ವ್ಯಸನ ಮುಕ್ತ ಕೇಂದ್ರಗಳಿಗೆ ದಾಖಲಿಸುವುದು ಉತ್ತಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು