ಶನಿವಾರ, ಮೇ 28, 2022
31 °C
ಕಿತ್ತೂರು ಉತ್ಸವದ ಸಮಾರೋಪ ಸಮಾರಂಭ

ಚನ್ನಮ್ಮನ ಹೆಸರು ಇತಿಹಾಸದಲ್ಲಿ ಮೊದಲು ದಾಖಲಾಗಲಿ: ಪ್ರೊ.ಎಂ.ರಾಮಚಂದ್ರಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ. ಆದರೆ, ಅದಕ್ಕೂ ಮುನ್ನವೇ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮನ ಹೆಸರನ್ನು ಇತಿಹಾಸದಲ್ಲಿ ಸೇರಿಸಬೇಕಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕಿತ್ತೂರಿನ ಕೋಟೆ ಆವರಣದಲ್ಲಿ ಭಾನುವಾರ ನಡೆದ ಚನ್ನಮ್ಮನ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ವಿಶ್ವವಿದ್ಯಾಲಯದ ವಿಭಾಗಗಳನ್ನು (ಚನ್ನಮ್ಮ ಅಧ್ಯಯನ ಪೀಠ ಹಾಗೂ ಸ್ನಾತಕೋತ್ತರ ಕೇಂದ್ರ ಸೇರಿದಂತೆ) ಚನ್ನಮ್ಮನ ಕಿತ್ತೂರಿನಲ್ಲಿ ಆರಂಭಿಸಲಾಗುವುದು. ‌ಈ ಶೈಕ್ಷಣಿಕ ವರ್ಷದಿಂದಲೇ ಶುರು ಮಾಡಲಾಗುವುದು. ಅದಕ್ಕೆ ತಕ್ಕಂತೆ ಜಾಗ ಹಾಗೂ ಅನುದಾನ ಕೊಡಿಸಲು ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಕ್ರಮ ವಹಿಸಬೇಕು ಎಂದು ಕೋರಿದರು.

ಹಿರೇಬಾಗೇವಾಡಿಯಲ್ಲಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಜಾಗ ದೊರೆತಿದೆ. ಅದರ ಕಾಮಗಾರಿಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು. ಮುಖ್ಯಮಂತ್ರಿಯನ್ನು ಆಹ್ವಾನಿಸಲಾಗುವುದು. ಪುಣೆ- ಬೆಂಗಳೂರು ಹೆದ್ದಾರಿಯಲ್ಲಿ ಹೋಗುವವರನ್ನು ಆಕರ್ಷಿಸುವ ರೀತಿಯಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಬ್ರಿಟಿಷರ ವಿರುದ್ಧ ಮೊದಲಿಗೆ ಸ್ವಾತಂತ್ರ್ಯದ ಕಹಳೆ ಮೊಳಗಿಸಿದವರು ಕಿತ್ತೂರು ರಾಣಿ ಚನ್ನಮ್ಮ ಎನ್ನುವುದನ್ನು ಗಟ್ಟಿಯಾಗಿ ಹೇಳಬೇಕು. ಅದು ಜಾಲತಾಣದಲ್ಲೂ ದೊರೆಯುವಂತೆ ಆಗಬೇಕು ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕಿತ್ತೂರು ಉತ್ಸವ ಸರ್ಕಾರಿ ಉತ್ಸವವಲ್ಲ; ನಾಡಹಬ್ಬವಾಗಿ ಹೊರಹೊಮ್ಮಿದೆ. ಕಿತ್ತೂರು ಕೋಟೆ ಮರು ನಿರ್ಮಾಣಕ್ಕೆ ನಾಡಿನ ಪ್ರತಿಯೊಬ್ಬರೂ ಕಾಣಿಕೆ ನೀಡಬೇಕು. ಆಗ ಅದು ನಮ್ಮದು ಎಂಬ ಭಾವನೆ ಬರುತ್ತದೆ. ಕಿತ್ತೂರಿನ ಗತ ವೈಭವವನ್ನು ಮುಂದಿನ‌ ಪೀಳಿಗೆಗೆ ತಲುಪಿಸುವ ಕೆಲಸವನ್ನು ಇಂದಿನ ಯುವ ಪೀಳಿಗೆ ಮಾಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಮಾತನಾಡಿ, ಚನ್ನಮ್ಮನ ಕುರಿತ ನಾಟಕವನ್ನು ಹಿಂದಿ ಭಾಷೆಯಲ್ಲಿ ಸಿದ್ಧಪಡಿಸಿ ಅದನ್ನು ರಾಷ್ಟ್ರದಾದ್ಯಂತ ಪ್ರದರ್ಶಿಸುವ ಮೂಲಕ ಇತಿಹಾಸವನ್ನು ಇಡೀ ಜಗತ್ತಿಗೆ ತಿಳಿಸಿಕೊಡುವ ಕೆಲಸ ನಡೆಯಬೇಕು. ಸರ್ಕಾರ ಈ ಕಾರ್ಯ ಮಾಡಬೇಕು. ನಾವೆಲ್ಲರೂ ಮುಂದಿನ ಪೀಳಿಗೆಗೆ ಇತಿಹಾಸದ ಪ್ರಜ್ಞೆಯನ್ನು ಉಳಿಸಿ ಹೋಗಬೇಕಾಗಿದೆ ಎಂದರು.

ಇಲ್ಲಿನ ಗ್ರಾಮೀಣ ಹೆಣ್ಣು ಮಕ್ಕಳಿಗಾಗಿ ರಾಣಿ ಚನ್ನಮ್ಮನ ಹೆಸರಿನಲ್ಲಿ ಕಿತ್ತೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಎಂಯ ಒತ್ತಾಯಿಸಿದರು. ನೆಲಮಟ್ಟದಲ್ಲಿ ಕೆಲಸವಾದಾಗ ಮಾತ್ರ ಚನ್ನಮ್ಮ ಉಳಿಯುತ್ತಾಳೆ. ಗಟ್ಟಿಯಾದ ಇತಿಹಾಸ ರಚಿಸುವ ಕಾರ್ಯವಾಗಬೇಕು. ರಂಜನೆ, ದೀಪಾಲಂಕಾರ ಹಾಗೂ ಭಾಷಣದಿಂದ ಅದು ಸಾಧ್ಯವಾಗುವುದಿಲ್ಲ. ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದ ವ್ಯಾಪಾರಿಗಳಿಗೆ ಉತ್ಸವ ಚೈತನ್ಯ ನೀಡಿದೆ. ಸಣ್ಣ ಪುಟ್ಟ ವ್ಯಾಪಾರಿಗಳು ಹಾಗೂ ರೈತರು ಬದುಕಿದರೆ ದೇಶ ಬದುಕುತ್ತದೆ ಎನ್ನುವುದನ್ನು ಮರೆಯಬಾರದು ಎಂದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು