ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ಬರಿದಾದ ಕೆರೆ: 200 ಕೆರೆಗಳಲ್ಲಿ ಹನಿ ನೀರೂ ಇಲ್ಲ

Published 17 ಮೇ 2024, 6:24 IST
Last Updated 17 ಮೇ 2024, 6:24 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮೂರಾಗಿನ ಎರಡ ಕೆರ್‍ಯಾಗ ನಮ್ಮ ದನಗೋಳಿಗೆ ನೀರ ಕುಡಸತಿದ್ವಿರಿ. ಆದ್ರ ಹೋದ ವರ್ಷ ಮಳಿರಾಯ ಕೈಕೊಟ್ಟ. ಹಂಗಾಗಿ ಒಂದ ಕೆರ್‍ಯಾಗ ಸ್ವಲ್ಪ ನೀರ ಉಳಿದೇತ್ರಿ. ಒಂದ ಪೂರ್ತಿ ಬತ್ತಿಹೋಗೇತ್ರಿ. ಈಗ ದನಗೋಳಿಗೆ ಕುಡ್ಯಾಕ ನೀರ ಹುಡುಕೋದ ನಮಗ್‌ ಕೆಲ್ಸ ಆಗೇತ್ರಿ. ಕೆರಿ ಮಗ್ಗಲದಾಗ ಇರೋ ಹೊಲದಾಗಿನ ಬೆಳಿಗೋಳ ಒಣಗಾತಾವ್ರಿ...’

ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿಯಲ್ಲಿ ಹಿರೇಬಾಗೇವಾಡಿ–ಸವದತ್ತಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಇರುವ ಕೆರೆದಂಡೆ ಮೇಲೆ ಕುಳಿತಿದ್ದ ಕೃಷಿಕ ವೆಂಕನಗೌಡ ಪಾಟೀಲ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡಿದ್ದು ಹೀಗೆ.

ಇದು ಇವರೊಬ್ಬರ ಸಂಕಷ್ಟ ಮಾತ್ರವಲ್ಲ; ಜಾನುವಾರುಗಳ ದಾಹ ನೀಗಿಸಲು ಮತ್ತು ಅಂತರ್ಜಲ ಮಟ್ಟ ವೃದ್ಧಿಗೆ ಕೆರೆಗಳನ್ನೇ ನೆಚ್ಚಿಕೊಂಡಿದ್ದ ಬಹುತೇಕ ಕೃಷಿಕರ ಗೋಳು.

ಸಪ್ತ ನದಿಗಳು ಹರಿಯುವ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಸೇರಿದ 290 ಕೆರೆಗಳಿವೆ. 30,813 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದ ಈ ಕೆರೆಗಳು, ಗರಿಷ್ಠ 3236.72 ಎಂಸಿಎಫ್‌ಟಿ(ಮೀಟರ್‌ ಕ್ಯುಬಿಕ್‌ ಅಡಿ) ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. 

2023ರ ಮೇ 15ರಂದು 116 ಕೆರೆ ಬರಿದಾಗಿದ್ದವು. ಈ ಬಾರಿ ಮೇ 15ರಂದು 200 ಕೆರೆಗಳಲ್ಲಿ ಹನಿ ನೀರೂ ಇಲ್ಲ.  ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಖಾಲಿಯಾದ ಕೆರೆಗಳ ಸಂಖ್ಯೆ ದುಪ್ಪಟ್ಟಾಗಿದೆ.

ಕಳೆದೊಂದು ವಾರದಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ರೈತರಲ್ಲಿ ಒಂದಿಷ್ಟು ಆಶಾಭಾವ ಮೂಡಿಸಿದೆ. ಈ ಬಾರಿ ವರುಣ ಕೈಹಿಡಿಯುತ್ತಾನೆ. ಕೆರೆಯೊಡಲಿಗೆ ಜೀವಜಲ ಹರಿದುಬರುತ್ತದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಸವದತ್ತಿ, ಅಥಣಿಯಲ್ಲೇ ಹೆಚ್ಚು: 42 ಕೆರೆಗಳನ್ನು ಹೊಂದಿದ ಹುಕ್ಕೇರಿ ತಾಲ್ಲೂಕಿನಲ್ಲಿ 21 ಕೆರೆ(ಶೇ 50) ಬರಿದಾಗಿವೆ. 14 ಕೆರೆ ಹೊಂದಿದ ಬೈಲಹೊಂಗಲದಲ್ಲಿ 2, 9 ಕೆರೆಗಳಿರುವ ಗೋಕಾಕದಲ್ಲಿ 2 ಕೆರೆ ಬತ್ತಿವೆ. ಆದರೆ, ತಲಾ 36 ಕೆರೆಗಳನ್ನು ಹೊಂದಿದ ಸವದತ್ತಿ ಮತ್ತು ಅಥಣಿ ತಾಲ್ಲೂಕಿನಲ್ಲಿ ಒಂದೇ ಕೆರೆಯಲ್ಲೂ ನೀರಿಲ್ಲ. ಪಶ್ಚಿಮಘಟ್ಟದ ಸೆರಗಿನಲ್ಲಿರುವ ಖಾನಾಪುರದಲ್ಲಿ 28, ರಾಮದುರ್ಗದಲ್ಲಿ 24 ಕೆರೆಗಳ ಒಡಲು ಬರಿದಾಗಿದೆ.

72 ಕೆರೆಗಳು ಶೇ 1ರಿಂದ 30ರಷ್ಟು ನೀರು ಹೊಂದಿದ್ದರೆ, 15 ಕೆರೆಗಳಲ್ಲಿ ಶೇ 31ರಿಂದ 50ರಷ್ಟು ನೀರಿದೆ. ಮೂರು ಕೆರೆಗಳಲ್ಲಿ ಶೇ 51ರಿಂದ 99ರಷ್ಟು ನೀರು ಸಂಗ್ರಹವಾಗಿದೆ. ಇನ್ನೂ ಒಂದು ಕೆರೆಯೂ ಪೂರ್ಣ ತುಂಬಿದ ಸ್ಥಿತಿಯಲ್ಲಿಲ್ಲ.

ಮಳೆಯೊಂದೇ ಕಾರಣವಲ್ಲ: ‘ಕೆರೆಗಳು ಬತ್ತಲು ವರುಣನ ಅವಕೃಪೆ ಒಂದೇ ಕಾರಣವಲ್ಲ. ಕೆಲವು ಕೆರೆಗಳಿಗೆ ನೀರು ಹರಿದುಬರಲು ಸರಿಯಾದ ವ್ಯವಸ್ಥೆಯೇ ಇಲ್ಲ. ಅತಿಕ್ರಮಣದಿಂದಾಗಿ ನೀರು ಬೇರೆಡೆ ಹರಿಯುತ್ತಿದೆ. ಕಸಕಂಟಿ ಬೆಳೆದಿದ್ದರಿಂದಲೂ ಮಳೆನೀರೆಲ್ಲ ಕೆರೆಯೊಡಲು ಸೇರುತ್ತಿಲ್ಲ. ಹಾಗಾಗಿ ಕೆರೆಗಳಿರುವ ಜಲಮೂಲಗಳನ್ನು ಸರಿಯಾಗಿ ಕಾಯ್ದುಕೊಳ್ಳಬೇಕು. ನೀರು ಹರಿದುಬರುವ ಮಾರ್ಗ ಶುಚಿಗೊಳಿಸಬೇಕು. ಅತಿಕ್ರಮಣ ತಡೆಯಬೇಕು’ ಎಂಬೆಲ್ಲ ಅಭಿಪ್ರಾಯಗಳೂ ಕೇಳಿಬರುತ್ತಿವೆ.

‘ಪ್ರತಿಬಾರಿ ಮಳೆಗಾಲದಲ್ಲಿ ತುಂಬುವ ಅನಗೋಳದ ನಾಥಪೈ ನಗರದ ಡಬ್ಬೂ ತಲಾವ್‌ನಲ್ಲಿ(ಕೆರೆಯಲ್ಲಿ) ಮತ್ತೊಂದು ಮಳೆಗಾಲ ಬರುವವರೆಗೂ ಒಂದಿಷ್ಟಾದರೂ ನೀರು ಸಂಗ್ರಹವಿರುತ್ತಿತ್ತು. ಭೀಕರ ಬರದಿಂದಾಗಿ ಈ ಸಲ ಪೂರ್ತಿ ಖಾಲಿಯಾಗಿದೆ. ಇದರಿಂದಾಗಿ ಕೆರೆ ಪಕ್ಕದಲ್ಲಿರುವ ಕೃಷಿಭೂಮಿಗಳಲ್ಲಿ ಅಂತರ್ಜಲ ಮಟ್ಟವೂ ಕುಸಿದಿದೆ’ ಎಂದು ಕೃಷಿಕ ಮಹಿಳೆ ಯಲ್ಲೂಬಾಯಿ ಖನ್ನೂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಕೈಕೊಟ್ಟ ಪರಿಣಾಮ ಕಳೆದ ವರ್ಷಕ್ಕಿಂತ ಹೆಚ್ಚಿನ ಕೆರೆಗಳು ಬರಿದಾಗಿವೆ. ಕೆರೆಗಳ ಸಂರಕ್ಷಣೆಗೆ ಕ್ರಮ ವಹಿಸುತ್ತಿದ್ದೇವೆ
–ಬಿ.ಎಂ.ಗುರುಬಸವರಾಜಯ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬೆಳಗಾವಿ ಉಪವಿಭಾಗ ಸಣ್ಣ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT