ಗುರುವಾರ , ಮೇ 26, 2022
23 °C

ಬೆಳಗಾವಿ | ಸ್ಪೃಶ್ಯರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಬಿಡಿ: ಮಾದಿಗ ಸಮಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕು’ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸಂಘಟನೆ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಸಮಾಜದವರು ಸುವರ್ಣ ವಿಧಾನಸೌಧ ಸಮೀಪದ ಕೊಂಡಸಕೊಪ್ಪದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಿಜಶರಣ ಬಸವಮೂರ್ತಿ ಮಾದರ ಚನ್ನಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು. ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಮತ್ತು ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕವಾಗಿ ₹ 1ಸಾವಿರ ಕೋಟಿ ಅನುದಾನ ಕೊಡಬೇಕ ಎಂದು ಒತ್ತಾಯಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಾದಿಗ ಸಮಾಜದ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸಲು ನಿವೇಶನ ಹಂಚಿಕೆ ಮಾಡಬೇಕು ಮತ್ತು ಅನುದಾನ ಒದಗಿಸಬೇಕು ಎಂದು ಕೋರಿದರು.

‘ರಾಜ್ಯದ 17 ಜಿಲ್ಲೆಗಳಲ್ಲಿ ಸಮುದಾಯದ ಕೆಲವರು ಆದಿಕರ್ನಾಟಕ ಎಂದು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದು ಅವರಿಗೆ ಆದಿದ್ರಾವಿಡ ಎಂದು ಪರಿಗಣಿಸಿ ಜಾತಿ ಪ್ರಮಾಣಪತ್ರ ನೀಡಬೇಕು. ಈಗಾಗಲೇ ಆದಿಕರ್ನಾಟಕ ಎಂದು ಪ್ರಮಾಣಪತ್ರ ಪಡೆದಿರುವವರಿಗೂ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ‘ಸ್ವಾತಂತ್ರ್ಯ ಬಂದಾಗಿನಿಂದಲೂ ಪರಿಶಿಷ್ಟರಿಗೆ ಶೇ 15ರಷ್ಟು ಮೀಸಲಾತಿಯನ್ನೇ ಮುಂದುವರಿಸಲಾಗಿದೆ. ಇದ್ದುದ್ದರಲ್ಲೇ ಹಂಚಿ ತಿನ್ನುತ್ತಿದ್ದರೂ ಕೆಲವು ಸಮಾಜದವರು ವಿರೋಧ ಮಾಡುತ್ತಿದ್ದಾರೆ. ಹೀಗಾಗಿ, ನಮ್ಮ ಮೀಸಲಾತಿಯನ್ನು ನಾವೀಗ ಕೇಳುತ್ತಿದ್ದೇವೆ. ಸ್ಪೃಶ್ಯ ಜಾತಿಗಳನ್ನು ನಮ್ಮೊಂದಿಗೆ ಸೇರಿಸಬಾರದು’ ಎಂದು ಆಗ್ರಹಿಸಿದರು.

‘ಸಮಾಜದವರು ಇಂದಿಗೂ ಜೀತ ಮಾಡುತ್ತಿದ್ದೇವೆ. ನಾವು ಮುಖ್ಯವಾಹಿನಿಗೆ ಬರುವುದಕ್ಕೆ ನಿಗಮಗಳಿಗೆ ಈಗ ಕೊಡುವ ಅನುದಾನ ಸಾಲುತ್ತಿಲ್ಲ. ಹೀಗಾಗಿ, ಅದನ್ನು ಕನಿಷ್ಠ ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಬೇಕು. ಗ್ರಾಮ ಸಹಾಯಕರಾಗಿ ದುಡಿಯುತ್ತಿರುವವರ ಕೆಲಸ ಕಾಯಂಗೊಳಿಸಬೇಕು. ಎಸ್‌ಟಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ವಾಪಸ್ ಪಡೆಯದೆ ಎಲ್ಲವನ್ನೂ ಬಳಸಬೇಕು’ ಎಂದು ಒತ್ತಾಯಿಸಿದರು.

ಕಲುಬುರಗಿಯ ಅಧ್ಯಕ್ಷ ಚಂದ್ರಕಾಂತ ನಾಟೀಕರ ನೇತೃತ್ವದಲ್ಲಿ ಕೆಲವರು ಬೈಕ್ ರ‍್ಯಾಲಿಯಲ್ಲಿ ಬಂದಿದ್ದರು. ವಿಭಾಗೀಯ ಅಧ್ಯಕ್ಷ ಮಹೇಶ ಬಿ. ಅಗರಖೇಡ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು