ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಸಂಚಾರ ವದಂತಿ: ಸಾರ್ವಜನಿಕರಲ್ಲಿ ಆತಂಕ

ಗಾಲ್ಫ್‌ ಮೈದಾನ ಬಳಿ ಕಾಣಿಸಿತೆಂದು ತಿಳಿಸಿರುವ ಕೆಲ ವಾಯುವಿಹಾರಿಗಳು
Last Updated 1 ಜುಲೈ 2021, 14:23 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ಗಾಲ್ಫ್ ಮೈದಾನದ ಬಳಿ ಗುರುವಾರ ಬೆಳಿಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ ಎಂಬ ಸುದ್ದಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸೆರೆಗಾಗಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ‘ಆ ಪ್ರದೇಶದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಹೆಜ್ಜೆ ಗುರುತಾಗಲಿ ಅಥವಾ ಇತರ ಕುರುಹುಗಳಾಗಲಿ ಕಂಡುಬಂದಿಲ್ಲ’ ಅಧಿಕಾರಿಗಳು ತಿಳಿಸಿದ್ದಾರೆ.

‘ಮೈದಾನದ ಸುತ್ತಲಿನ ಪೊದೆಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಮಾಹಿತಿಯನ್ನು ವಾಯುವಿಹಾರಕ್ಕೆ ತೆರಳಿದ್ದ ಕೆಲವರು ತಿಳಿಸಿದ್ದಾರೆ’ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದರಿಂದ ಭೀತಿ ಉಂಟಾಗಿದೆ.

ಬಹಳಷ್ಟು ಮಂದಿ ಅಲ್ಲಿಗೆ ವಾಯುವಿಹಾರಕ್ಕೆ ಬರುತ್ತಾರೆ. ತಾತ್ಕಾಲಿಕ ಅಲ್ಲಿಗೆ ಜನರ ಪ್ರವೇಶ ನಿರ್ಬಂಧಿಸಲಾಗಿದೆ. ಗಾಲ್ಫ್‌ ಆಟಕ್ಕೆ ಬರುವವರಿಗೂ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಲ್ಫ್‌ ಮೈದಾನಕ್ಕೆ ಹೊಂದಿಕೊಂಡಂತೆ ಅರಣ್ಯ ಪ್ರದೇಶವಿದೆ. ಅಲ್ಲಿಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಹರ್ಷಭಾನು, ‘ವಾಯುವಿಹಾರಕ್ಕೆ ಬಂದಿದ್ದ ಇಬ್ಬರು ಚಿರತೆ ಕಾಣಿಸಿತೆಂದು ಮಾಹಿತಿ ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಲಾಗಿದೆ. ಚಿರತೆಯ ಚಲನವಲನ ಅಥವಾ ಹೆಜ್ಜೆ ಗುರುತುಗಳು ಕಂಡುಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಹಾಗೂ ಕಾಕತಿ ಅರಣ್ಯ ವಲಯದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ತಿಳಿಸಿದರು.

‘ಚಿರತೆ ನಾಚಿಕೆ ಸ್ವಭಾವದ ಪ್ರಾಣಿ. ಅದು ಯಾರ ಮೇಲೂ ಅನವಶ್ಯವಾಗಿ ದಾಳಿ ನಡೆಸುವುದಿಲ್ಲ. ಚಿರತೆ ಇದ್ದರೆ ಸೆರೆಗಾಗಿ, ಮುಂಜಾಗ್ರತಾ ಕ್ರಮವಾಗಿ ಜಮಖಂಡಿಯಿಂದ ಎರಡು ಬೋನುಗಳನ್ನು ತರಿಸಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಆದರೆ, ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಕೋರಿದರು.

ಬೆಳಗಾವಿ ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್ಮ ನೇತೃತ್ವದ ಮೂರು ತಂಡಗಳು ಪರಿಶೀಲನೆ ನಡೆಸಿದವು.

‘ಆ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತು ಕಂಡುಬಂದಿಲ್ಲ. ಮೇಕೆ ಮರಿಗಳನ್ನು ಒಳಗೆ ಕಟ್ಟಿರುವ ಎರಡು ಬೋನುಗಳನ್ನು ಅಲ್ಲಲ್ಲಿ ಇರಿಸಲಾಗಿದೆ. ಅಲ್ಲದೇ 5 ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದೆ. ನಾಲ್ಕೈದು ದಿನಗಳವರೆಗೆ ಮೈದಾನಕ್ಕೆ ಜನರಿಗೆ ಪ್ರವೇಶ ನೀಡದಂತೆ ಮಿಲಿಟರಿಯವರಿಗೆ ಕೋರಲಾಗಿದೆ. ಜುಲೈ 2ರಂದು ಕ್ಯಾಮೆರಾಗಳನ್ನು ಪರಿಶೀಲಿಸಲಾಗುವುದು. ಚಿರತೆ ಸಂಚಾರದ ದೃಶ್ಯ ಕಂಡುಬಂದಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಂಡು ಮುಂದಿನ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಶಿವಾನಂದ ಮಗದುಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT