ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌; ಬೆಳಗಾವಿ ಸಂಪೂರ್ಣ ಸ್ತಬ್ಧ

ದಿಕ್ಕು ದಿಸೆಯಿಲ್ಲದೇ ಬೀಸಿದ ‘ಪೊಲೀಸ್‌ ಲಾಠಿ’
Last Updated 24 ಮಾರ್ಚ್ 2020, 15:10 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಘೋಷಿಸಿದ್ದ ‘ಲಾಕ್‌ಡೌನ್‌’ ನಿಮಿತ್ತ ಮಂಗಳವಾರ ಬೆಳಗಾವಿ ಸಂಪೂರ್ಣ ಸ್ತಬ್ಧವಾಗಿತ್ತು.

ಸತತ ಮೂರನೇ ದಿನವೂ ಬಸ್‌, ಆಟೊ ಬಂದ್‌ ಆಗಿದ್ದವು. ಶಾಲಾ– ಕಾಲೇಜುಗಳಿಗೆ ಈಗಾಗಲೇ ಸರ್ಕಾರ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳ ಚಲನವಲನಗಳಿರಲಿಲ್ಲ. ಖಾಸಗಿ ಕಂಪನಿಗಳು, ಅಂಗಡಿ– ಮುಂಗಟ್ಟುಗಳು ಬಂದ್‌ ಆಗಿದ್ದವು. ಸಿನಿಮಾ ಮಂದಿರಗಳು, ಮಾಲ್‌ಗಳು ಈಗಾಗಲೇ ಬಂದ್‌ ಆಗಿವೆ. ಸರ್ಕಾರಿ ಕಚೇರಿಗಳಲ್ಲೂ ಅಧಿಕಾರಿಗಳ ಹಾಜರಾತಿ ಕಡಿಮೆ ಇತ್ತು. ಜನ ಸಂಚಾರ ವಿರಳವಾಗಿತ್ತು. ಅನಾವಶ್ಯಕವಾಗಿ ಜನರು ಸಂಚರಿಸುವುದನ್ನು ತಡೆಗಟ್ಟಲು ಪೊಲೀಸರು ಬಿಗಿಕ್ರಮಕೈಗೊಂಡರು, ಕೆಲವೆಡೆ ಲಾಠಿಯೂ ಬೀಸಿದರು.

ಬೆಳಿಗ್ಗೆ ಹಾಲು, ದಿನಪತ್ರಿಕೆ, ತರಕಾರಿ, ದಿನಸಿ ಪದಾರ್ಥಗಳನ್ನು ಖರೀದಿಸಿದ ಜನರು ವಾಪಸ್‌ ಮನೆ ಸೇರಿಕೊಂಡರು. ಕೆಲವರು ಯುಗಾದಿ ಹಬ್ಬದ ನಿಮಿತ್ತ ಹೂವು, ಹಣ್ಣು, ತೆಂಗಿನಕಾಯಿ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದರು. ಅವರನ್ನು ಪೊಲೀಸರು ಬೆದರಿಸಿ ಓಡಿಸಿದರು. ಗಣಪತ್‌ ಗಲ್ಲಿ ಹಾಗೂ ರವಿವಾರ ಪೇಟೆಯಲ್ಲಿ ಲಾಠಿ ಬೀಸಿ, ಜನರನ್ನು ಹಾಗೂ ವ್ಯಾಪಾರಸ್ಥರನ್ನು ಚದುರಿಸಿದರು.

ನಾಕಾಬಂದಿ

ನಗರ ಪ್ರವೇಶಿಸುವ ಮಾರ್ಗಗಳಲ್ಲಿ ಬೆಳಿಗ್ಗೆಯಿಂದಲೇ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದರು. ಒಳಬರುವ ಹಾಗೂ ಹೊರಹೋಗುವ ಕಾರು, ಬೈಕ್‌ ಹಾಗೂ ಇತರ ವಾಹನಗಳಿಗೆ ತಡೆಯೊಡ್ಡುವ ಕೆಲಸ ಮಾಡಿದರು.

ವೈದ್ಯಕೀಯ ಸೇವೆ ನೀಡುವವರು, ಸರ್ಕಾರಿ ಅಧಿಕಾರಿಗಳು, ಟೆಲಿಕಾಂ, ಜಲಮಂಡಳಿ, ಮಾಧ್ಯಮ ಸೇರಿದಂತೆ ಅವಶ್ಯಕ ಸೇವೆಗಳನ್ನು ಒದಗಿಸುವವರಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇನ್ನುಳಿದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಅನಿವಾರ್ಯತೆ ಇಲ್ಲವೆನ್ನುವುದು ಖಾತರಿಯಾದಾಗ ವಾಪಸ್‌ ಕಳುಹಿಸಿಕೊಟ್ಟರು.

ಲಾಠಿ ಬೀಸಿದ ಪೊಲೀಸರು

ಕೆಲವು ಮಾರ್ಗಗಳಲ್ಲಿ ಪೊಲೀಸರು ದಾರಿಹೋಕರ ಮೇಲೆ ಬೇಕಾಬಿಟ್ಟಿ ಲಾಠಿ ಬೀಸಿದರು. ಒಬ್ಬೊಬ್ಬರೇ ಹೋಗುತ್ತಿದ್ದವರನ್ನು ತಡೆದು, ನಾಲ್ಕು ಏಟು ಕೊಟ್ಟು ಕಳುಹಿಸುತ್ತಿದ್ದರು. ಗೋಂಧಳಿ ಗಲ್ಲಿಯಲ್ಲಿ ಬೈಕ್‌ ಮೇಲೆ ಹೋಗುತ್ತಿದ್ದ ಯುವಕನನ್ನು ಕೆಳಗಿಳಿಸಿದ ಮೂವರು ಪೊಲೀಸರು ಮನಬಂದಂತೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದರು.

ಕೇಳುವ ಮೊದಲೇ ಏಟು

ರಾಣಿ ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ ಬ್ಯಾರಿಕೇಡ್‌ ಹಾಕಿ, ವಾಹನಗಳ ಸಂಚಾರಕ್ಕೆ ಪೊಲೀಸರು ತಡೆಯೊಡ್ಡಿದ್ದರು. ಬೈಕ್‌ ಮೇಲೆ ಸಂಚರಿಸುತ್ತಿದ್ದವರಿಗೆ ತಮ್ಮ ಅನಿವಾರ್ಯತೆಯನ್ನು ಹೇಳಿಕೊಳ್ಳಲು ಅವಕಾಶ ನೀಡದ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು. ಸ್ಥಳದಲ್ಲಿಯೇ ಇದ್ದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಕೊಡ್ರಿ.. ಇನ್ನೂ ನಾಲ್ಕು’ ಎಂದು ಸೂಚನೆ ನೀಡುತ್ತಿದ್ದರು.

ಪೊಲೀಸರಿಗೆ ಹೆದರಿ ಬಂದ್‌

ದಿನಸಿ, ತರಕಾರಿ ಹಾಗೂ ಹೋಟೆಲ್‌ (ಪಾರ್ಸಲ್‌ ವಿಭಾಗ) ತೆರೆಯಲು ಸರ್ಕಾರ ಅವಕಾಶ ನೀಡಿದ್ದರೂ ಕೆಲವು ಪೊಲೀಸರು ಒತ್ತಾಯಪೂರ್ವಕವಾಗಿ ಬಂದ್‌ ಮಾಡಿಸಿದರು. ಅಂಗಡಿ ಮಾಲೀಕರಿಗೆ ಬಾಯಿಗೆ ಬಂದಂತೆ ಹೀನಾಯವಾಗಿ ಬೈದರು. ಇದರಿಂದ ನೊಂದ ವ್ಯಾಪಾರಸ್ಥರು, ತಮ್ಮ ಅಂಗಡಿಗಳನ್ನು ಬಂದ್‌ ಮಾಡಿದರು.

ಅಗತ್ಯ ವಸ್ತುಗಳು ಸಿಗದೇ ಜನರು ಪೊಲೀಸರಿಗೆ ಹಿಡಿಶಾಪ ಹಾಕಿ ತೆರಳಿದರು. ಆಟೊ, ಬಸ್‌ ಇಲ್ಲದಿದ್ದರಿಂದ ಜಿಲ್ಲಾಸ್ಪತ್ರೆಯ ಕೆಲವು ರೋಗಿಗಳು ನಡೆದುಕೊಂಡೇ ಮನೆಯತ್ತ ತೆರಳಿದರು.

ಟಿ.ವಿ, ವಾಟ್ಸ್‌ಆ್ಯಪ್‌ಗೆ ಮೊರೆ

ದಿನವಿಡೀ ಮನೆಯಲ್ಲಿದ್ದ ಜನರು ಟಿ.ವಿ ಹಾಗೂ ವಾಟ್ಸ್ ಆ್ಯಪ್‌ಗೆ ಮೊರೆ ಹೋದರು. ಕೊರೊನಾಗೆ ಸಂಬಂಧಿಸಿದ ಬೆಳವಣಿಗೆಗಳನ್ನು ವೀಕ್ಷಿಸಿದರು. ತಮ್ಮ ಪ್ರದೇಶಗಳಲ್ಲಿ ಆಗುತ್ತಿದ್ದ ಬೆಳವಣಿಗೆಗಳ ಕುರಿತು ವಾಟ್ಸ್‌ಆ್ಯಪ್‌ಗಳ ಮೂಲಕ ಸ್ನೇಹಿತರಿಗೆ, ಸಂಬಂಧಿಕರಿಗೆ ಮಾಹಿತಿ ರವಾನಿಸುತ್ತಿದ್ದರು. ಕೆಲವರು ಮನರಂಜನೆಗಾಗಿ ಟಿ.ವಿಗಳಲ್ಲಿ ಸಿನಿಮಾ, ಧಾರವಾಹಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT