ಭಾನುವಾರ, ಏಪ್ರಿಲ್ 11, 2021
32 °C
ದುಃಸ್ಥಿತಿಯಲ್ಲಿರುವ ರಸ್ತೆಯಲ್ಲಿ ಜನರ ಪ್ರಯಾಸದ ನಡಿಗೆ

‘ನವಗ್ರಾಮ’ ಬಡಾವಣೆ: ತಪ್ಪದ ಬವಣೆ

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು: ಇಲ್ಲಿನ ಸರ್ಕಾರಿ ಪದವಿ ಕಾಲೇಜು ಬಳಿ ಇರುವ ನವಗ್ರಾಮ ಬಡಾವಣೆ ಜನತೆಯ ಬವಣೆ ದೂರವಾಗುವ ಕಾಲ ಇನ್ನೂ ಕೂಡಿ ಬಂದಿಲ್ಲ.

ಬೀದಿ ದೀಪ ಮತ್ತು ಅಲ್ಲಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಬಿಟ್ಟರೆ ಕೆಲ ಮೂಲ ಸೌಲಭ್ಯಗಳು ಇನ್ನೂ ಅವರಿಗೆ ಮರೀಚಿಕೆ ಆಗಿವೆ. ಇದರಿಂದಾಗಿ ಜನರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೊರತೆಗಳ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ದುಃಸ್ಥಿತಿಯಲ್ಲಿರುವ ರಸ್ತೆಯಲ್ಲಿ ಜನರು ಪ್ರಯಾಸ ಪಡಬೇಕಾದ ಸ್ಥಿತಿ ಇದೆ. ಮಳೆ ಬಂದಾಗಲಂತೂ ಈ ರಸ್ತೆಯು ಕೆಸರು ಗದ್ದೆಯಂತಾಗುತ್ತದೆ. ಇದರೊಂದಿಗೆ ಅಲ್ಲಿನ ನಿವಾಸಿಗಳ ಸಂಕಷ್ಟವೂ ಜಾಸ್ತಿಯಾಗುತ್ತದೆ.

100 ಮನೆಗಳು ನಿರ್ಮಾಣವಾಗಿ ಬರೋಬ್ಬರಿ 19 ವರ್ಷಗಳು ಕಳೆದಿವೆ. ಇತ್ತೀಚಿನ ಅವಧಿವರೆಗೆ ಅಲ್ಲಿ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯವೇ ಇರಲಿಲ್ಲ. ಕೆಲ ತಿಂಗಳುಗಳ ಹಿಂದೆ ಕುಡಿಯುವ ನೀರಿನ ಸವಲತ್ತು ಮಾಡಲಾಗಿದೆ ಎಂದು ಸಾರ್ವಜನಿಕರು ತಿಳಿಸುತ್ತಾರೆ.

ಅವ್ಯವಸ್ಥೆಯ ಬೀಡು:

ಗ್ರಾಮ ಪಂಚಾಯ್ತಿ ವ್ಯವಸ್ಥೆ ಇದ್ದಾಗ ಕಡುಬಡವರಿಗೆ ಈ ಹೊಸ ಬಡಾವಣೆ ನಿರ್ಮಿಸಿ ಕೊಡಲಾಯಿತು. ಮನೆ ನಿರ್ಮಾಣಕ್ಕಷ್ಟೇ ಪಂಚಾಯ್ತಿ ಸೀಮಿತವಾಯಿತು. ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಪೂರೈಕೆ ಜಾಲ, ರಸ್ತೆ, ಚರಂಡಿ ನಿರ್ಮಾಣ ಮಾಡುವ ಗೋಜಿಗೆ ಹೋಗಲಿಲ್ಲ. ಮನೆ ನಿರ್ಮಾಣಗೊಂಡರೂ ಅಗತ್ಯ ಸೌಲಭ್ಯಗಳು ಇಲ್ಲದ್ದರಿಂದ ಕುಟುಂಬಗಳು ವಾಸಿಸಲು ಹಿಂದೇಟು ಹಾಕಿದವು. ಕಟ್ಟಿದ ಮನೆಗಳು ನಿರ್ವಹಣೆ ಇಲ್ಲದೆ ಚಾವಣಿಗಳು ಕಿತ್ತು ಹೋದವು. ಅವುಗಳನ್ನು ಅನೇಕರು ತಿರುಗಿಯೂ ನೋಡಲಿಲ್ಲ. ವಾಸಿಸಬೇಕಾದ ಮನೆಯಲ್ಲಿ ಆಳೆತ್ತರದ ಕಸಗಂಟಿಗಳು ಬೆಳೆದು ನಿಂತವು ಎಂದು ಜನರು ಮಾಹಿತಿ ನೀಡಿದರು.

ಸಾಕಷ್ಟು ಬಾರಿ ಒತ್ತಾಯಿಸಿದ ನಂತರ ಪಂಚಾಯ್ತಿಯವರು ವಿದ್ಯುತ್‌ ದೀಪಗಳ ವ್ಯವಸ್ಥೆ ಕಲ್ಪಿಸಿದರು. ಕೆಲ ತಿಂಗಳುಗಳ ಹಿಂದೆ ಟ್ಯಾಂಕ್‌ಗಳನ್ನಿಟ್ಟು ನೀರಿನ ಸೌಲಭ್ಯ ಒದಗಿಸಿಕೊಡಲಾಗಿದೆ. ನಿಧಾನವಾಗಿ ವಾಸಿಸಲು ಹೆಚ್ಚು ಕುಟುಂಬಗಳು ಈ ಕಡೆಗೆ ಆಗಮಿಸಲು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ ನಿವಾಸಿಗಳು.

ರಸ್ತೆ ಬೇಕು:

ಕಿತ್ತೂರು-ಬೀಡಿ ರಸ್ತೆಯ ಮಾರ್ಗದ ಒಳಗೆ ಬರುವ ಈ ಬಡಾವಣೆಗೆ ಮುಖ್ಯವಾಗಿ ಸರಿಯಾದ ರಸ್ತೆಯೇ ಇಲ್ಲ. ಚರಂಡಿಯಂತೂ ನಿರ್ಮಾಣವಾಗಿಲ್ಲ. ರಸ್ತೆಯ ಒಂದು ಬದಿಯ ಮನೆಯ ನೀರು ಮತ್ತೊಂದು ಬದಿಯ ಮನೆಯ ಕಡೆಗೆ ಹರಿಯುತ್ತದೆ. ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಮೊದಲು ಕಲ್ಪಿಸಬೇಕು ಎನ್ನುವ ಆಗ್ರಹ ನಿವಾಸಿಗಳದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು