ಸೋಮವಾರ, ಆಗಸ್ಟ್ 8, 2022
22 °C
ಎಂಇಎಸ್‌ಗೆ ಮತ್ತೆ ಮುಖಭಂಗ

ಮರಾಠಿ ಭಾಷೆಯಲ್ಲಿ ದಾಖಲೆ ಕೋರಿ ಪ್ರತಿಭಟನೆ: ಎಂಇಎಸ್‌ಗೆ ಮರಾಠಿಗರಿಂದ ಸಿಗದ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕನ್ನಡದ ಜೊತೆಗೆ ಮರಾಠಿ ಭಾಷೆಯಲ್ಲಿ ದಾಖಲೆ ಕೋರಿ ನಗರದಲ್ಲಿ ಸೋಮವಾರ ಪ್ರತಿಭಟಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್)ಮರಾಠಿಗರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಲಿಲ್ಲ.

‘ಜೂನ್ 27ರೊಳಗೆ ಬೆಳಗಾವಿಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮರಾಠಿ ಫಲಕ ಹಾಕಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ಒಂದೇ ಒಂದು ಕನ್ನಡ ಬಾವುಟ, ಕನ್ನಡ ಫಲಕ ಇರಲು ಬಿಡುವುದಿಲ್ಲ. ತಲ್ವಾರ್‌ ರೆಡಿ ಮಾಡಿಕೊಳ್ಳಿ. ಇದು ಮನವಿಯಲ್ಲ. ಎಚ್ಚರಿಕೆ’ ಎಂದು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿದ್ದರು.

ಅಲ್ಲದೆ, ದೊಡ್ಡಮಟ್ಟದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಬೆಂಬಲ ಕೋರಿ ಬೆಳಗಾವಿ, ಖಾನಾಪುರ ಮತ್ತಿತರ ಕಡೆ ಎಂಇಎಸ್‌ ವಿವಿಧ ಸಂಘಟನೆಗಳ ಸಭೆಗಳನ್ನು ನಿರಂತರವಾಗಿ ನಡೆಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಮರಾಠಿಗರು ಸೇರಬಹುದೆನ್ನುವ ನಿರೀಕ್ಷೆಯಲ್ಲಿತ್ತು.  ಆದರೆ, ಬಹುತೇಕ ಮರಾಠಿಗರು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿಲ್ಲ. ತಾವೂ ನಿರೀಕ್ಷಿಸಿದಂತೆ ಜನರೂ ಸೇರದ್ದರಿಂದ ಎಂಇಎಸ್‌ ನಾಯಕರಿಗೆ ಮುಖಭಂಗವಾಯಿತು.

ಮುಖಂಡ ಮನೋಹರ ಕಿಣೇಕರ್‌, ‘ನಮಗೆ ಕನ್ನಡದೊಂದಿಗೆ ಮರಾಠಿಯಲ್ಲಿ ದಾಖಲೆ ನೀಡುವಂತೆ ಭಾಷಾ ಅಲ್ಪಸಂಖ್ಯಾತರ ಆಯೋಗ ಆದೇಶಿಸಿದೆ. ಅದನ್ನು ಅನುಷ್ಠಾನಗೊಳಿಸದ ರಾಜ್ಯ ಸರ್ಕಾರ ನಮಗೆ ಅನ್ಯಾಯ ಮಾಡುತ್ತಿದೆ. ದುರ್ದೈವದಿಂದ ಈ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ. ವಾರದೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಎಂಇಎಸ್‌ ಅಧ್ಯಕ್ಷ ದೀಪಕ ದಳವಿ, ಪ್ರಕಾಶ ಮರಗಾಳೆ, ಶಿವಾಜಿ ಸುಂಠಕರ ಇತರರಿದ್ದರು.

ಕನ್ನಡ ಹೋರಾಟಗಾರರು ವಶಕ್ಕೆ:

ಎಂಇಎಸ್‌ ಪ್ರತಿಭಟನೆ ವಿರೋಧಿಸಿ ನಗರದ ರಾಣಿ ಚನ್ನಮ್ಮ ವೃತ್ತದ ಬಳಿ ಪ್ರತಿಭಟಿಸಲು ಮುಂದಾದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್‌ ಹಿರೇಕೋಡಿ ಸೇರಿ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು