ಸೋಮವಾರ, ಜನವರಿ 18, 2021
25 °C
ಎಂಇಎಸ್ ಮುಖಂಡರ ಎಚ್ಚರಿಕೆ: ಕನ್ನಡ ಧ್ವಜ ತೆರವಿಗೆ ಆಗ್ರಹ

ಕನ್ನಡ ಧ್ವಜ ತೆರವುಗೊಳಿಸದಿದ್ದರೆ ಗಲ್ಲಿಗಳಲ್ಲಿ ಭಗವಾಧ್ವಜ ಹಾರಲಿದೆ: ಎಂಇಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗ ಹಾರಿಸಿರುವ ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಗರದ ಗಲ್ಲಿ ಗಲ್ಲಿಗಳಲ್ಲಿ ಭಗವಾ ಧ್ವಜಗಳು ಹಾರಾಡಲಿವೆ. ಜೊತೆಗೆ ಗಡಿ ವಿವಾದಕ್ಕೆ ಸಂಬಂಧಿಸಿದ ಘೋಷಣೆಗಳು ಮೊಳಗಲಿವೆ’.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಜಿಲ್ಲಾಡಳಿತಕ್ಕೆ ನೀಡಿರುವ ಸವಾಲಿನ ರೂಪದ ಎಚ್ಚರಿಕೆ ಇದು.

ಗಡಿ ಹೋರಾಟದಲ್ಲಿ ಸಾವಿಗೀಡಾದ ಎಂಇಎಸ್ ಕಾರ್ಯಕರ್ತರ ಸ್ಮರಣಾರ್ಥ ಜ.17ರಂದು ಹುತಾತ್ಮ ದಿನಾಚರಣೆ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಲು ಮರಾಠಾ ಮಂದಿರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮೇಲಿನಂತೆ ನಿರ್ಣಯ ಕೈಗೊಳ್ಳಲಾಯಿತು.

‘ಕನ್ನಡ ಧ್ವಜ ತೆರವುಗೊಳಿಸದಿದ್ದಲ್ಲಿ, ಅದರ ಬಳಿ ಭಗವಾ ಧ್ವಜ ಹಾರಿಸಲು ಅವಕಾಶ ಕೊಡಬೇಕು’ ಎಂಬ ಬೇಡಿಕೆಯನ್ನೂ ಮಂಡಿಸಿದರು.

ಅಧ್ಯಕ್ಷ ದೀಪಕ ದಳವಿ ಮಾತನಾಡಿ, ‘ಕನ್ನಡ ಧ್ವಜ ವಿವಾದವನ್ನು ಹುಟ್ಟು ಹಾಕುವ ಮೂಲಕ ನಗರದಲ್ಲಿ ಶಾಂತಿ ಭಂಗ ಮಾಡಲು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ಪಾಲಿಕೆ ಆವರಣದಲ್ಲಿ ಕನ್ನಡ ಧ್ವಜ ಹಾರಿಸಿರುವುದು ಕಾನೂನು ಬಾಹಿರವಾಗಿದೆ. ಇದೆಲ್ಲ ಗೊತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಇದರಿಂದ ಮರಾಠಾ ಜನರ ಆತಂಕ ಮತ್ತು ವೇದನೆ ಹೆಚ್ಚಾಗಿದೆ’ ಎಂದು ಹೇಳಿದರು.

‘ಅಲ್ಲಿ ಕನ್ನಡ ಧ್ವಜ ಹಾರಿಸಲು ಜಿಲ್ಲಾಡಳಿತವೆ ಅವಕಾಶ ನೀಡಿದೆ. ಈ ಬಗ್ಗೆ ನಮ್ಮ ಅಳಲು ತೋಡಿಕೊಳ್ಳಲು ಮತ್ತು ಕನ್ನಡ ಧ್ವಜ ತೆರವಿಗೆ ಆಗ್ರಹಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಅವರು ಸ್ಪಂದಿಸಲಿಲ್ಲವಾದರೆ, ಈ ತಿಂಗಳ ಅಂತ್ಯದೊಳಗೆ ಗಲ್ಲಿ ಗಲ್ಲಿಗಳಲ್ಲೂ ಭಗವಾ ಧ್ವಜ ಹಾರಾಡಲಿವೆ. ಗಡಿ ವಿವಾದ ಘೋಷಣೆಗಳು ಮೊಳಗಲಿವೆ. ನಮ್ಮ ನಿರ್ಧಾರ ಅಚಲ’ ಎಂದು ತಿಳಿಸಿದರು.

ಮುಖಂಡರಾದ ಮಾಲೋಜಿರಾವ ಅಷ್ಟೇಕರ, ಮನೋಹರ ಕಿಣೇಕರ, ಪ್ರಕಾಶ ಮರಗಾಲೆ, ಬಿ.ಡಿ. ಮೋಹನಗೇಕರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು