ಶುಕ್ರವಾರ, ಏಪ್ರಿಲ್ 23, 2021
28 °C
ಜಿಲ್ಲಾಧಿಕಾರಿ ಹಿಂದಿಯಲ್ಲಿ ಮಾತನಾಡುವಂತೆ ಪಟ್ಟು

ಕನ್ನಡ ಧ್ವಜ ತೆರವುಗೊಳಿಸಬೇಕು: ಎಂಇಎಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಲ್ಲಿನ ಮಹಾನಗರಪಾಲಿಕೆ ಎದುರು ಕನ್ನಡ ಪರ ಹೋರಾಟಗಾರರು ಸ್ಥಾಪಿಸಿರುವ ಕನ್ನಡ ಧ್ವಜ ತೆರವುಗೊಳಿಸಬೇಕು. ಇಲ್ಲವೆ, ಅಲ್ಲಿ ಭಗವಾಧ್ವಜ ಹಾರಿಸಲು ನಮಗೆ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಗರದಲ್ಲಿ ಭಗವಾಧ್ವಜಗಳನ್ನು ಹಿಡಿದು ಸೋಮವಾರ ಪ್ರತಿಭಟನೆ ನಡೆಸಿದರು.

ಸಂಭಾಜಿ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಅವರನ್ನು ಪೊಲೀಸರು ಕಾಲೇಜು ರಸ್ತೆಯ ಸರ್ದಾರ್‌ ಮೈದಾನದಲ್ಲಿ ಸಮಾವೇಶಗೊಳ್ಳುವಂತೆ ಸೂಚಿಸಿದರು. ಆದರೆ, ಪ‍್ರತಿಭಟನಾಕಾರರು ಮುಂದೆ ಹೋಗಲು ಅವಕಾಶ ಕೊಡುವಂತೆ ಪಟ್ಟು ಹಿಡಿದರು. ಆದರೆ, ಪೊಲೀಸರು ಮುಂದೆ ಸಾಗದಂತೆ ಬ್ಯಾರಿಕೇಡ್ ಹಾಕಿ ತಡೆದರು. ಕೊನೆಗೆ ಮುಖಂಡರ ಸೂಚನೆಯಂತೆ, ‍ಪ್ರತಿಭಟನಾಕಾರರು ಕಾಲೇಜು ರಸ್ತೆಯಲ್ಲೇ ಕುಳಿತರು. ‘ಬೆಳಗಾವಿ, ನಿಪ್ಪಾಣಿ, ಕಾರವಾರ ಮೊದಲಾದವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು’ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದರು. ರಸ್ತೆಯಲ್ಲೇ ಪ್ರತಿಭಟಿಸಿದ್ದರಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ಸಮಿತಿಯ ಅಧ್ಯಕ್ಷ ದೀಪಕ ದಳವಿ ಮಾತನಾಡಿ, ‘ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿರುವುದು ಅನಧಿಕೃತವಾಗಿದೆ. ಹಾರಿಸುವ ವೇಳೆ ಕನ್ನಡ ಹೋರಾಟಗಾರರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ಆ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ, ನಗರಪಾಲಿಕೆಯಲ್ಲಿ ಹಿಂದೆ ಮಾಡಿದ್ದ ನಿರ್ಣಯದಂತೆ ಪಾಲಿಕೆ ಎದುರು ಭಗವಾಧ್ವಜ ಹಾರಿಸಲು ಅವಕಾಶ ನೀಡಬೇಕು' ಎಂದು ಒತ್ತಾಯಿಸಿದರು.

‘ಮರಾಠಿ ಭಾಷಿಕರಿಗೆ ಇಲ್ಲಿ ನಿರಂತರ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.

ಮಹಾರಾಷ್ಟ್ರದ ಶಿವಸೇನಾ ಮುಖಂಡರಿಂದ ಮೊಬೈಲ್‌ ಫೋನ್ ಮೂಲಕ ಭಾಷಣ ಮಾಡಿಸಲು ಮುಂದಾದ ಅವರಿಗೆ, ತಾಂತ್ರಿಕ ಸಮಸ್ಯೆ ಉಂಟಾಯಿತು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮುಖಂಡರ ಮನವಿ ಆಲಿಸಿದರು. ಕನ್ನಡದಲ್ಲಿ ಮಾತನಾಡಲು ಮುಂದಾದಾಗ ಪ್ರತಿಭಟನಾಕಾರರು ತಕರಾರು ತೆಗೆದರು. ಮರಾಠಿ ಅಥವಾ ಹಿಂದಿ ಬಳಸುವಂತೆ ಪಟ್ಟು ಹಿಡಿದರು. ಒತ್ತಡಕ್ಕೆ ಮಣಿದ ಡಿ.ಸಿ. ಹಿಂದಿಯಲ್ಲಿ ಮಾತನಾಡಿದರು.

‌‘ಕನ್ನಡ ಧ್ವಜದ ವಿಷಯದಲ್ಲಿ ತಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದಿಲ್ಲ. ಕನ್ನಡ ಪರ ಸಂಘಟನೆಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಸೌಹಾರ್ದಯುತವಾಗಿ ಬಗೆಹರಿಸಲಾಗುವುದು. ವಿಧಾನಮಂಡಲ ಅಧಿವೇಶನ ನಡೆದಿರುವುದರಿಂದ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿದ್ದಾರೆ. ಎಲ್ಲರೂ ಬಂದ ಮೇಲೆ ಚರ್ಚಿಸಲಾಗುವುದು. ಸಮಯ ಬೇಕು’ ಎಂದು ತಿಳಿಸಿದರು. ಇದಕ್ಕೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ತೆರಳಿದ ಬಳಿಕ ಪ್ರತಿಭಟನೆ ಮುಂದುವರಿಸಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ನಗರಪಾಲಿಕೆ ಬಳಿಗೆ ಹೋಗಿ ಭಗವಾ ಧ್ವಜ ಹಾರಿಸುತ್ತೇವೆ’ ಎಂದು ಕೆಲವರು ಧ್ವಜಗಳನ್ನು ಹಿಡಿದು ಬ್ಯಾರಿಕೇಡ್‌ಗಳತ್ತ ಮುನ್ನುಗ್ಗಿದರು. ಆಗ, ಪೊಲೀಸರು ಅವರನ್ನು ತಡೆದರು. ಚದುರಿಸಿ ಅಲ್ಲಿಂದ ಕಳುಹಿಸಿದರು. ನಂತರ, ಕೆಲವು ಮುಖಂಡರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಮುಖಂಡರಾದ ಮದನ್ ಬಾಮನೆ, ವಿಕಾಸ ಕಲಘಟಗಿ, ಮಾಲೋಜಿ ಅಷ್ಟೇಕರ, ಶುಭಂ ಶೇಳಕೆ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪಾಟೀಲ ನೇತೃತ್ವ ವಹಿಸಿದ್ದರು.

ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಹಾಗೂ ಡಿಸಿಪಿ ವಿಕ್ರಂ ಅಮಟೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು