ಸೋಮವಾರ, ಸೆಪ್ಟೆಂಬರ್ 27, 2021
22 °C
ನರೇಗಾ ಯೋಜನೆ

ವರ್ಷವಿಡೀ ಉದ್ಯೋಗ ಒದಗಿಸಲು ಸಿದ್ಧ; ಗುಳೆ ಹೋಗಬೇಡಿ: ಸಚಿವ ದೇಶಪಾಂಡೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಗ್ರಾಮೀಣ ಭಾಗದ ಎಲ್ಲ ಕುಟುಂಬಗಳಿಗೆ ನರೇಗಾ ಯೋಜನೆಯಡಿ ವರ್ಷವಿಡೀ ಉದ್ಯೋಗ ಒದಗಿಸಲು ಸರ್ಕಾರ ಸಿದ್ಧವಿದೆ. ಯಾರೂ ಗುಳೆ ಹೋಗಬಾರದು’ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾಂಬಳ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ನಂತರ ಕೆಲಸಗಾರರ ಜೊತೆ ಮಾತನಾಡಿದರು.

‘ಸ್ಥಳೀಯರಿಗೆ ಉದ್ಯೋಗ ನೀಡಲು ಕನಿಷ್ಠ ಒಂದು ಕಾಮಗಾರಿಯನ್ನಾದರೂ ಕೈಗೆತ್ತಿಕೊಳ್ಳಬೇಕೆಂದು ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಸೂಚನೆ ನೀಡಲಾಗಿದೆ. ಇದಲ್ಲದೇ, ನರೇಗಾ ಯೋಜನೆಯಡಿ ಕುಟುಂಬವೊಂದಕ್ಕೆ ನೀಡಲಾಗುತ್ತಿದ್ದ ಕೆಲಸವನ್ನು ಕನಿಷ್ಠ 100 ದಿನಗಳವರೆಗೆ ಹೆಚ್ಚಿಸಲಾಗಿದೆ’ ಎಂದರು.  

ಹಣದ ಕೊರತೆ ಇಲ್ಲ

‘ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಹಣದ ಕೊರತೆ ಇಲ್ಲ. ಕುಡಿಯುವ ನೀರು ಪೂರೈಸಲು, ಮೇವು ಬ್ಯಾಂಕ್‌ ಸ್ಥಾಪಿಸಲು ಹಾಗೂ ನರೇಗಾ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರದ ಬಳಿ ಹಣವಿದೆ. ಜಿಲ್ಲಾಧಿಕಾರಿ ಖಾತೆಯಲ್ಲೂ ಹಣವಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬ ವ್ಯಕ್ತಿಗೆ 40 ಲೀಟರ್ ಕುಡಿಯುವ ನೀರು ಪ್ರತಿದಿನ ಪೂರೈಕೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಬರ ನಿರ್ವಹಣೆಗೆ ಸರ್ಕಾರ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಯಾವ ಹಳ್ಳಿಗೆ ಟ್ಯಾಂಕರ್‌ ನೀರು ನೀಡಬೇಕು ಎನ್ನುವುದನ್ನು ಸ್ಥಳೀಯವಾಗಿ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಅವರೇ ನಿರ್ಧರಿಸಲಿದ್ದಾರೆ’ ಎಂದು ತಿಳಿಸಿದರು.

ಮೋಡಬಿತ್ತನೆಗೆ ನಿರ್ಧಾರ

‘ಕಳೆದ 18 ವರ್ಷಗಳ ಅವಧಿಯಲ್ಲಿ 14 ವರ್ಷಗಳ ಕಾಲ ರಾಜ್ಯದಲ್ಲಿ ಬರ ಬಿದ್ದಿದೆ. 2005, 2007, 2010 ಹಾಗೂ 2017ರ ವರ್ಷವನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ವರ್ಷಗಳಲ್ಲಿ ಬರ ಬಿದ್ದಿದೆ. ನೀರಿನ ಕೊರತೆಯನ್ನು ನೀಗಿಸಲು ಈ ಸಲ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಟೆಂಡರ್‌ ಕೂಡ ಕರೆಯಲಾಗಿದೆ’ ಎಂದರು.

ಪರಿಹಾರ ಹೆಚ್ಚಿಸಲಾಗಿದೆ

ಗುಡುಗು ಸಿಡಿಲಿನಿಂದ ಸಾವು ಸಂಭವಿಸಿದರೆ ಅಥವಾ ಬಿಸಿಗಾಳಿಯಿಂದ ಸಾವು ಸಂಭವಿಸಿದರೆ ಅಂತಹವರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಅಂತರರಾಜ್ಯ ಸಾಗಾಟಕ್ಕೆ ತಡೆ

‘ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮೇವು ಲಭ್ಯವಿದೆ. ಜಿಲ್ಲೆಯಲ್ಲಿ 7 ವಾರಕ್ಕೆ ಬೇಕಾಗುವಷ್ಟು ಮೇವು ಸಂಗ್ರಹವಿದೆ. ಮೇವಿನ ಕೊರತೆ ಇಲ್ಲ. ಪಕ್ಕದ ರಾಜ್ಯಗಳಿಗೆ ಮೇವು ಸಾಗಾಟವಾಗದಂತೆ ತಡೆಯಲು ಅಂತರರಾಜ್ಯ ಮೇವು ಸಾಗಾಟದ ಮೇಲೆ ನಿಷೇಧ ಹೇರಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್., ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು