ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೊರೊನಾಕ್ಕೆ ಜಗ್ಗದ ‘ಯೋಧ’ರಿವರು

ಪತ್ರಿಕಾ ವಿತರಕರ ದಿನಾಚರಣೆ ಸೆ.4ರಂದು
Last Updated 4 ಸೆಪ್ಟೆಂಬರ್ 2020, 1:47 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ಬೆಳಗಾವಿ: ಮಳೆ, ಚಳಿ, ಗಾಳಿ ಹಾಗೂ ಕೊರೊನಾ ಸೋಂಕಿನ ಭೀತಿ... ಇದೆಲ್ಲದರ ನಡುವೆಯೂ ಮನೆ–ಮನೆಗಳಿಗೆ ದಿನಪತ್ರಿಕೆಗಳನ್ನು ತಲುಪಿಸುವ ಮೂಲಕ ಓದುಗರ ಜ್ಞಾನಾಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಪತ್ರಿಕಾ ವಿತರಕರು ‘ಕೊರೊನಾ ಯೋಧ’ರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊರೊನಾ ತಲ್ಲಣದ ಪರಿಣಾಮ ಈ ಶ್ರಮಿಕರ ಮೇಲೂ ತಟ್ಟಿದೆ. ಅಸಂಘಟಿತ ವಲಯವಾಗಿ ದುಡಿಯುತ್ತಿರುವ ತಮ್ಮ ಶ್ರಮವನ್ನು ಸರ್ಕಾರ ಗುರುತಿಸಿಲ್ಲ ಎಂಬ ಕೊರಗು ಅವರದು. ತಮ್ಮನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವ ಅವರ ಬಹಳ ವರ್ಷಗಳ ಬೇಡಿಕೆ ಇಂದಿಗೂ ಈಡೇರಿಲ್ಲ. ಆದರೆ, ‘ಸುದ್ದಿ ಹಂಚುವ’ ಹಾಗೂ ‘ಜ್ಞಾನ ದಾಸೋಹ’ದ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ನಿಲ್ಲಿಸಿಲ್ಲ.

‘ಲಾಕ್‌ಡೌನ್‌ ವೇಳೆ ಹಲವು ಸಮಸ್ಯೆಗಳು ಎದುರಾದವು. ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಓಡಾಡಲು ಆಗುತ್ತಿರಲಿಲ್ಲ. ಪೊಲೀಸರು ಲಾಠಿ ಬೀಸಿದ್ದು ಹಾಗೂ ಗಾಯಗೊಂಡಿದ್ದೂ ಉಂಟು. ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾಯಕದಲ್ಲಿ ತೊಡಗಿದ್ದೇವೆ. ಬಹುತೇಕ ಓದುಗರಿಂದ ಸಹಕಾರ ಸಿಕ್ಕಿತು. ಬಿಲ್‌ ಪಡೆಯಲು ತಂತ್ರಜ್ಞಾನದ ಮೊರೆ ಹೋದೆವು’ ಎಂದು ಪತ್ರಿಕಾ ವಿತರಕರು ‍‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

****

ಕೊರೊನಾ ಆತಂಕದ ಕಾರಣದಿಂದಾಗಿ ಅಪಾರ್ಟ್‌ಮೆಂಟ್‌ಗಳಿಗೆ ಹೋಗಲು ಅಲ್ಲಿನವರು ಅವಕಾಶ ಕೊಡಲಿಲ್ಲ. ಅಲ್ಲಲ್ಲಿ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಗ್ರಾಹಕರನ್ನು ತಲುಪಲು ಬಹಳ ತೊಂದರೆಯಾಯಿತು. ಬಿಲ್ ಪಾವತಿ ತಡವಾದ್ದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಮಹಾರಾಷ್ಟ್ರದ ಮಾದರಿಯಲ್ಲಿ ಸರ್ಕಾರ ನಮಗೆ ನೆರವಾಗಬೇಕು. ಆರ್ಥಿಕವಾಗಿ ಪ್ಯಾಕೇಜ್‌ ನೀಡಬೇಕು.

ಸುನೀಲ್ ಪರಶುರಾಮ ಕಾಂಗಲೆ, ಬೆಳಗಾವಿ

***********

ದಿನಪತ್ರಿಕೆಗಳನ್ನು ಹಂಚಲು ಕೊರೊನಾ ಸೋಂಕಿನ ಭಯದಿಂದಾಗಿ ಹುಡುಗರು ಸಿಗಲಿಲ್ಲ. ಸೀಲ್‌ಡೌನ್ ಪ್ರದೇಶದಲ್ಲಿ ಪತ್ರಿಕೆ ಹಂಚಿಕೆಗೆ ತೊಂದರೆಯಾಯಿತು. ಅಷ್ಟಾಗಿಯೂ ಹುಡುಗರೂ ಸೇರಿದಂತೆ ನಾವೆಲ್ಲರೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ವಿತರಕರು ಮತ್ತು ಹಂಚುವವರ ಆರೋಗ್ಯ ರಕ್ಷಣೆಗೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು.

ಪ್ರಕಾಶ ಘೋರ್ಪಡೆ, ರಾಮದುರ್ಗ

************

ಕೊರೊನಾ ಭೀತಿಯ ನಡುವೆಯೂ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇವೆ. ಲಾಕ್‌ಡೌನ್‌ ವೇಳೆಯಲ್ಲಿ ಹಲವು ತೊಂದರೆಗಳಾದವು. ಬಿಲ್ ಪಡೆದುಕೊಳ್ಳಲು ಕಷ್ಟವಾಯಿತು. ಮುಂದಿನ ತಿಂಗಳು ಬನ್ನಿ ಎಂದು ಹೇಳಿದ್ದೂ ಉಂಟು. ಪತ್ರಿಕೆ ಹಂಚುವ ಹುಡುಗರಿಗೆ ಮಾಸ್ಕ್ ಪೂರೈಸಿದೆವು. ಸುರಕ್ಷತೆಗೆ ಕ್ರಮ ಕೈಗೊಂಡೆವು. ಸರ್ಕಾರ ನಮಗೂ ಸೌಲಭ್ಯ ಕಲ್ಪಿಸಬೇಕು. ಉಚಿತ ಬಸ್‌ ಪಾಸ್‌ ಒದಗಿಸಬೇಕು.

ಕುಮಾರ ದಂಡ‍ಪ್ಪ ರೇಷ್ಮಿ, ಬೈಲಹೊಂಗಲ

************

ಕೆಲವೊಂದು ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ಕೊಂಚ ತೊಂದರೆಯಾಯಿತು. ಕೊರೊನಾ ನಡುವೆಯೂ ಕೆಲಸ ಮಾಡಿದೆವು. ಮಳೆ ಇದ್ದಾಗಲೂ ಹಿಂಜರಿಯದೆ ಕಾರ್ಯನಿರ್ವಹಿಸಿದ್ದೇವೆ. ಸರ್ಕಾರ ನಮ್ಮನ್ನು ಗುರುತಿಸಬೇಕು. ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಮೊದಲಾದ ಸುರಕ್ಷತಾ ಪರಿಕರಗಳನ್ನು ನಮಗೂ ಒದಗಿಸಿದರೆ ಅನುಕೂಲವಾಗುತ್ತದೆ.

ಪ್ರಕಾಶ ಪಾಟೀಲ, ಕಣಬರ್ಗಿ, ಬೆಳಗಾವಿ

***********

ಕೋವಿಡ್ ಲಾಕ್‌ಡೌನ್‌ ಇದ್ದಾಗ ಹಲವು ಓಣಿಗಳಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಆದರೂ ಸರ್ಕಸ್ ಮಾಡಿ ಕೆಲಸ ನಿರ್ವಹಿಸಿದೆವು. ಓದುಗರಿಗೆ ಪತ್ರಿಕೆಗಳು ಕೈತಪ್ಪಬಾರದು ಎಂದು ಕಾಳಜಿ ವಹಿಸಿದೆವು. ಆರೋಗ್ಯ ವಿಮೆ ಕಲ್ಪಿಸಬೇಕು. ಭದ್ರತೆ ಒದಗಿಸಬೇಕು. ಪಿಂಚಣಿ ವ್ಯವಸ್ಥೆ ಮಾಡಬೇಕು.

ದಿಲೀಪ್ ಹರಿಹರ, ಚಿಕ್ಕೋಡಿ

******

ಜನರಲ್ಲಿ ಆರಂಭದಲ್ಲಿ ಕೊರೊನಾ ಭಯ ಇತ್ತು. ಈಗ, ಸಹಜ ಸ್ಥಿತಿಗೆ ಬಂದಿದೆ. ಸರ್ಕಾರದಿಂದ, ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಮೊದಲಾದ ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು. ಚಿಕಿತ್ಸೆ ಸೌಲಭ್ಯ ಒದಗಿಸಬೇಕು.

ಗೌರೀಶ ನಾಗೇಂದ್ರ ಬಸರಕೋಡ, ಬೆಳಗಾವಿ

*************

ಸೀಲ್‌ಡೌನ್ ಪ್ರದೇಶದಲ್ಲಿ ಪತ್ರಿಕೆ ಹಂಚಲು ತೊಂದರೆಯಾಯಿತು. ಸಂಪೂರ್ಣ ಲಾಕ್‌ಡೌನ್‌ ಇದ್ದಾಗ ಬಿಲ್‌ ಸಂಗ್ರಹದಲ್ಲಿ ವ್ಯತ್ಯಯವಾಯಿತು. ಆತಂಕದ ಪರಿಸ್ಥಿತಿಯಲ್ಲೂ ಕೆಲಸ ನಿರ್ವಹಿಸಿದೆವು.

ಸಿದ್ದಪ್ಪ ಕಪ್ಪಲಗುದ್ದಿ, ಮೂಡಲಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT