ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಾಭಿವೃದ್ಧಿಗೆ ಪತ್ರಿಕಾ ವಿತರಕರ ಕೊಡುಗೆ- ಆ ಶ್ರಮ ಜೀವಿಗಳ ದಿನಾಚರಣೆ ಇಂದು

Last Updated 3 ಸೆಪ್ಟೆಂಬರ್ 2021, 16:33 IST
ಅಕ್ಷರ ಗಾತ್ರ

ಬೆಳಗಾವಿ: ಮನೆ–ಮನೆಗಳಿಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಸೇರಿದಂತೆ ಹತ್ತು ಹಲವು ದಿನಪತ್ರಿಕೆಗಳನ್ನು ತಲುಪಿಸುವ ಮೂಲಕ ಓದುಗರ ಜ್ಞಾನಾಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಮಹತ್ವದ ಕಾರ್ಯದಲ್ಲಿ ಪತ್ರಿಕಾ ವಿತರಕರು ತೊಡಗಿದ್ದಾರೆ.

ಮಳೆ, ಚಳಿ, ಗಾಳಿ, ಇತ್ತೀಚೆಗೆ ಕೋವಿಡ್‌ನಂತಹ ಸೋಂಕಿನ ಭೀತಿ ಏನೇ ಇದ್ದರೂ ಕರ್ತವ್ಯ ಪ್ರಜ್ಞೆ ಮೆರೆಯುತ್ತಿರುವ ಅವರು ಅಸಂಘಟಿತ ಕಾರ್ಮಿಕರಾಗಿಯೇ ಉಳಿದಿದ್ದು, ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಕೋವಿಡ್ ಅಲೆಯ ನಡುವೆಯೂ ‘ಕೊರೊನಾ ಯೋಧ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದಿನಂತೆ ‘ಸುದ್ದಿ ಹಂಚುವ’ ಹಾಗೂ ‘ಜ್ಞಾನ ದಾಸೋಹ’ದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ನಿಲ್ಲಿಸಿಲ್ಲ.

ಸೊಂಪಾದ ನಿದ್ರೆಗೆ ಜಾರುವ ಸಮಯದಲ್ಲಿ ಅದನ್ನು ತ್ಯಜಿಸಿ, ಕ್ಷೇತ್ರ ಕಾರ್ಯಕ್ಕಿಳಿಯುತ್ತಾರೆ. ಈ ವೃತ್ತಿಯಲ್ಲಿ ಮುಂದುವರಿದು ತಮ್ಮ ಬದುಕು ಕಟ್ಟಿಕೊಂಡವರು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದವರು ಬಹಳಷ್ಟು ಮಂದಿ ಇದ್ದಾರೆ.

ಬೇಡಿಕೆ ಈಡೇರಿಲ್ಲ:ಜಿಲ್ಲೆಯಾದ್ಯಂತ 300ಕ್ಕೂ ಹೆಚ್ಚು ಪತ್ರಿಕಾ ವಿತರಕರು ಇದ್ದಾರೆ. ತಮ್ಮ ಶ್ರಮವನ್ನು ಸರ್ಕಾರ ಗುರುತಿಸದಿರುವ ಕೊರಗು ಅವರದು. ‘ನಮ್ಮನ್ನೂ ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ದೊರೆಯುವ ಸೌಲಭ್ಯಗಳನ್ನು ನಮಗೂ ಕಲ್ಪಿಸಬೇಕು’ ಎನ್ನುವ ಅವರ ಬಹಳ ವರ್ಷಗಳ ಬೇಡಿಕೆ ಇಂದಿಗೂ ಈಡೇರಿಲ್ಲ.

ದಿನಪತ್ರಿಕೆ ತಲುಪಿಸಿದ ನಂತರವೇ ನೆಮ್ಮದಿ ಕಾಣುವ ಕಾಯಕ ಜೀವಿಗಳನ್ನು ಗೌರವಿಸುವುದಕ್ಕಾಗಿಯೇ ಸೆ. 4ರಂದು ‘ಪತ್ರಿಕಾ ವಿತರಕರ ದಿನ’ ಆಚರಿಸಲಾಗುತ್ತಿದೆ. ಕೊರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸಿದ ಅವರನ್ನು ದಿನಾಚರಣೆ ನೆಪದಲ್ಲಿ ಗೌರವಿಸಲಾಗುತ್ತಿದೆ.

‘ಓದಿನ ಸಂಗಾತಿ’ ತರುವರು:ನಸುಕಿನಲ್ಲಿ ಪತ್ರಿಕೆಗಳ ಬಂಡಲ್‌ಗಳನ್ನು ಇಳಿಸಿಕೊಂಡು, ವ್ಯವಸ್ಥಿತವಾಗಿ ಜೋಡಿಸಿಕೊಂಡು ಸೈಕಲ್‌, ದ್ವಿಚಕ್ರವಾಹನಗಳ ಮೂಲಕ ಮನೆ-ಮನೆಗೆ ತಲುಪಿಸುತ್ತಾರೆ. ಬೆಳಿಗ್ಗೆ ಕಾಫಿ, ಚಹಾದೊಂದಿಗೆ ದಿನಪತ್ರಿಕೆ ಓದದಿದ್ದರೆ ಸಾವಿರಾರು ಮಂದಿಗೆ ಏನೋ ಕಳೆದುಕೊಂಡ ಅನುಭವ. ದಿನಪತ್ರಿಕೆ ಮನೆಗೆ ತಲುಪುವುದು ಸ್ವಲ್ಪ ತಡವಾದರೂ ಚಡಪಡಿಸುವ ಸಾವಿರಾರು ಓದುಗರಿದ್ದಾರೆ. ಅವರಿಗೆ ನಿತ್ಯವೂ ‘ಓದಿನ ಸಂಗಾತಿ’ ಪತ್ರಿಕೆಗಳನ್ನು ತಲುಪಿಸುವ ಕೆಲಸವನ್ನು ವಿತರಕರು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಕೆಲವೆಡೆ, ಮಹಿಳೆಯರೂ ಈ ಕಾಯಕದಲ್ಲಿ ತೊಡಗಿದ್ದಾರೆ.

‘ಸರ್ಕಾರ ಸ್ಪಂದಿಸಬೇಕು’

‘ಕೋವಿಡ್‌ ಭೀತಿಯ ಕಷ್ಟದ ಕಾಲದಲ್ಲೂ ಕರ್ತವ್ಯ ನಿಭಾಯಿಸಿದ ಸಂತೋಷವಿದೆ. ಪತ್ರಿಕಾ ವಿತರಣೆ ಇದು ಬಹುದೊಡ್ಡ ಉದ್ಯೋಗವೇನಲ್ಲ. ಆದರೆ, ನಿತ್ಯ ಇಡೀ ಗ್ರಾಮ ಸುತ್ತುವ ಹಾಗೂ ಮನೆ ಮನೆ ಸಂಪರ್ಕಿಸುವಅವಕಾಶ ಪತ್ರಿಕೆ ಹಂಚುವ ಮೂಲಕ ದೊರೆತಿದೆ. ಇದು ಲಾಭದಾಯಕ ಅಲ್ಲದಿದ್ದರೂ ಈ ಕೆಲಸದಲ್ಲಿನ ಸಂತೋಷ ಯಾವುದರಲ್ಲೂ ಇಲ್ಲ’ ಎನ್ನುತ್ತಾರೆ ತೆಲಸಂಗದ ಜಗದೀಶ ಖೊಬ್ರಿ.

‘ಮನೆಮನೆಗೆ ಪತ್ರಿಕೆಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿರುವವರಿಗೆ ಸರ್ಕಾರ ಕೈಹಿಡಿದು ಮೇಲೆತ್ತುವ ಅಗತ್ಯವಿದೆ. ಮಾಸಾಶನ ನೀಡಿದರೆ ಅನುಕೂಲ ಆಗುತ್ತದೆ’ ಎಂಬ ಮನವಿ ಅವರದು.

‘ಪತ್ರಿಕೆಯ ಬಂಡಲ್ ಹೊತ್ತು ತರುವ ವಾಹನಕ್ಕಾಗಿ ಮುಂಜಾನೆ ರಸ್ತೆ ಬದಿಯಲ್ಲಿ ನಿಂತು ಕಾಯಬೇಕು. ಹಂಚಲು ಸಜ್ಜಾಗಬೇಕು. ಮಳೆ, ಗಾಳಿ ಲೆಕ್ಕಕ್ಕಿಲ್ಲ. ಪತ್ರಿಕೆಯನ್ನು ಮನೆ ಮನೆಗೆ ಸರಿಯಾಗಿ ಮುಟ್ಟಿಸಬೇಕು; ತಡವಾಗುವಂತಿಲ್ಲ. ಕೋವಿಡ್ ಪ್ರಕರಣಗಳು ಬಹಳ ಇದ್ದ ದುರಿತ ದಿನಗಳಲ್ಲಿಯೂ ಮನೆ–ಮನೆಗೆ ಪತ್ರಿಕೆ ವಿತರಿಸಿದ ತೃಪ್ತಿ ಇದೆ’ ಎಂದು ಮೂಡಲಗಿಯ ಸಿದ್ದಪ್ಪ ಕಪ್ಪಲಗುದ್ದಿ ಹೇಳಿದರು.

‘ಹಣಕ್ಕಿಂತ ಜನರ ಪ್ರೀತಿ–ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯ ಎನಿಸುತ್ತದೆ. ಹಲವು ವರ್ಗದವರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಿದ ಸರ್ಕಾರವು ನಮ್ಮನ್ನೂ ಪರಿಗಣಿಸಲಿ’ ಎಂದು ಕೋರಿದರು.

4 ತಲೆಮಾರಿನಿಂದ ಇದೇ ಕಾಯಕ

ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಪತ್ರಿಕಾ ವಿತರಕರರೊಬ್ಬರ ಕಥೆ ಇದು. ನಲವತ್ತು ವರ್ಷದ ಹಿಂದೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೀರಪ್ಪ ರೇಶ್ಮಿ 10 ವರ್ಷಗಳ ಕಾಲ ನಿರಂತರವಾಗಿ ಜನತೆಗೆ ಪತ್ರಿಕೆಗಳನ್ನು ತಲುಪಿಸಿ ಸೇವೆ ಸಮರ್ಪಿಸಿದ್ದರು. ನಂತರ ಅವರ ಪುತ್ರ ದುಂಡಪ್ಪ ರೇಶ್ಮಿ 7 ಮಕ್ಕಳ ಸಂಸಾರ ಬಂಡಿ ನಡೆಸುತ್ತಾ 30 ವರ್ಷಗಳ ಕಾಲ ಈ ಕೆಲಸ ಮಾಡಿದ್ದರು. ಬಳಿಕ ಅವರ ಪುತ್ರ ಕುಮಾರ ದುಂಡಪ್ಪ ರೇಶ್ಮಿ ಹಾಗೂ ಅವರ ಮಕ್ಕಳಾದ ಅಮಿತ, ಸುಮಿತ ಈಗ ಓದುಗರ ಮನೆಗೆ ಪತ್ರಿಕೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಕುಟುಂಬ 4 ತಲೆಮಾರಿನಿಂದ ಶ್ಲಾಘನೀಯ ಕಾರ್ಯ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT