ಸೋಮವಾರ, ಮಾರ್ಚ್ 8, 2021
24 °C
ಗುರ್ಲಾಪುರ ಶಾಲೆಯಲ್ಲಿ ಅಪರೂಪದ ಕಾರ್ಯಕ್ರಮ

ಗೆಳೆಯರ ಮಿಲನ, ಗುರುಗಳಿಗೆ ನಮನ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಗುರ್ಲಾಪುರ (ಮೂಡಲಗಿ): ‘ನಾವು ಎಳೆಯರು, ನಾವು ಗೆಳೆಯರು. ಹೃದಯ ಹೂವಿನ ಹಂದರ. ನಾವೇ ನಾಳೆ ನಾಡ ಹಿರಿಯರು. ನಮ್ಮ ಕನಸದು ಸುಂದರ’ ಎಂದು ಹಾಡುತ್ತಾ ಬೆಳೆದ ಬಾಲ್ಯದ ದಿನಗಳು ಯಾರಿಗೆ ತಾನೆ ಇಷ್ಟವಿಲ್ಲ? ಬಾಲ್ಯವು ಎಲ್ಲರಿಗೂ ಸ್ಮರಣೀಯವಾದ ದಿನಗಳು. ಅಂಥ ಅಪರೂಪದ ಕ್ಷಣಗಳಿಗೆ ಇಲ್ಲಿಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಗೆಳೆಯರ ಮಿಲನ, ಗುರುಗಳಿಗೆ ನಮನ’ ಕಾರ್ಯಕ್ರಮ ಸಾಕ್ಷಿಯಾಯಿತು.

ಮೂರು ದಶಕಗಳ ಹಿಂದೆ 7ನೇ ತರಗತಿಯಲ್ಲಿ ಕಲಿತ ಗೆಳೆಯರೆಲ್ಲ ಮತ್ತೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಆಗಿನ ಚಿನ್ನಾಟಗಳನ್ನು ನನಪಿಸಿಕೊಂಡರು. ಕುಳಿತುಕೊಳ್ಳುತ್ತಿದ್ದ ಕೊಠಡಿಗಳನ್ನೆಲ್ಲ ಸುತ್ತಾಡಿ ಬಾಲ್ಯದ ದಿನಗಳಿಗ ಜಾರಿ ಸಂಭ್ರಮಿಸಿದರು.

30 ವರ್ಷಗಳ ಹಿಂದೆ ಅಕ್ಷರ ಜ್ಞಾನ ಬಿತ್ತಿದ್ದ ಶಿಕ್ಷಕರನ್ನು ವಾದ್ಯ ಮೇಳಗಳೊಂದಿಗೆ ವೇದಿಕೆಗೆ ಕರೆ ತಂದು ಕೂರಿಸಿ, ಅವರ ಪಾದ ಪೂಜೆ ಮಾಡಿ ಗೌರವಿಸುವ ಮೂಲಕ ಗುರುವಂದನೆಯನ್ನು ಅರ್ಥಪೂರ್ಣವಾಗಿ ನೆರವೇರಿಸಿದರು. ನಿಧನರಾದ ಶಿಕ್ಷಕರು ಮತ್ತು ಗೆಳೆಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಕೆಲವರು ಶಿಕ್ಷಕರು, ವಕೀಲರು, ಬ್ಯಾಂಕ್ ನೌಕರಿ, ಕೃಷಿ, ವ್ಯಾಪಾರ ಮೊದಲಾದ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ದಂಪತಿ ಸಹಿತ ಸೇರಿದ್ದರಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದಿತ್ತು.

1928ರಲ್ಲಿ ಪ್ರಾರಂಭವಾದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಅತ್ಯಂತ ಹಳೆಯ ಶಾಲೆಯಾಗಿದೆ. ಮುಂದೆ ಶಾಸಕರ ಮಾದರಿ ಶಾಲೆಯಾಗಿ ಪರಿವರ್ತನೆಯಾಗಿದೆ. ಅಲ್ಲಿ ಕಲಿತ ಸಾವಿರಾರು ಮಕ್ಕಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಇದೇ ಶಾಲೆಯಲ್ಲಿದ್ದ ದಿ. ಬಸವರಾಜ ನಿಡಸೋಸಿ ಹಾಗೂ ಎಸ್.ಡಿ. ಡೇಳಿಜ್‌ ಇಬ್ಬರು ಶಿಕ್ಷಕರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದು ಶಾಲೆಯ ಹೆಗ್ಗಳಿಕೆಯಾಗಿದೆ.

ಕಾರ್ಯಕ್ರಮ ಉದ್ಘಾಟಿಸಿದ ಬಿಇಒ ಅಜಿತ್ ಮನ್ನಿಕೇರಿ, ‘ಜೀವ ಕೊಟ್ಟ ತಂದೆ, ತಾಯಿ ಮತ್ತು ಅಕ್ಷರ ಕಲಿಸಿದ ಗುರುಗಳು ಈ ಭೂಮಿಯ ಮೇಲಿನ ನಿಜವಾದ ದೇವರು‘ ಎಂದು ಬಣ್ಣಿಸಿದರು.

ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ, ‘ಮಗುವಿನ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಗುರುವಿನ ಮಾರ್ಗದರ್ಶನವು ಮಹತ್ವದಾಗಿದೆ. ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಗುರುಗಳನ್ನು ನೆನಪಿಸಿಕೊಂಡು ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ’ ಎಂದರು.

ಗುರುವಂದನೆ ಸ್ವೀಕರಿಸಿದ ಎಸ್.ವೈ. ಕೌಜಲಗಿ, ಐ.ಆರ್. ಅಂಬಿಗೇರ, ಬಿ.ಕೆ. ಮಂಗಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಾಹಿತಿ ಚಂದ್ರಶೇಖರ ಮುಳವಾಡ ಹಳೆಯ ವಿದ್ಯಾರ್ಥಿಗಳ ಪರವಾಗಿ ವಕೀಲ ಮಲ್ಲಪ್ಪ ನೇಮಗೌಡರ, ಶಿವಾನಂದ ಮರಾಠೆ, ಸಾನ್ನಿಧ್ಯ ವಹಿಸಿದ್ದ ಬೆಂಡವಾಡದ ಗುರುಸಿದ್ಧ ಸ್ವಾಮೀಜಿ ಮಾತನಾಡಿದರು. ಲಕ್ಷ್ಮಣ ನೇಮಗೌಡರ ಅಧ್ಯಕ್ಷತೆ ವಹಿಸಿದ್ದರು.

ರುದ್ರಯ್ಯ ಹಿರೇಮಠ, ಶಿವಾನಂದ ಹಿರೇಮಠ, ಭೀಮಪ್ಪ ದೇವರಮನಿ, ಗೀತಾ ಕರಗಣ್ಣಿ, ಎಂ. ಮಂಜುನಾಥ, ಆರ್.ಬಿ. ನೇಮಗೌಡರ, ಡಾ.ಎಂ.ಎನ್. ಮುಗಳಖೋಡ, ಕೆ.ಆರ್. ದೇವರಮನಿ, ಆನಂದ ಟಪಾಲದಾರ, ಸಿದ್ದು ಶಾಬಣ್ಣವರ, ಶಿವಬಸು ನೇಮಗೌಡರ, ಟಿ.ಡಿ. ಗಾಣಿಗೇರ, ಆರ್.ಸಿ. ಸತ್ತಿಗೇರಿ, ಯಲ್ಲಪ್ಪ ಕುಲಗೋಡ, ಎ.ಜಿ. ಶರಣಾರ್ಥಿ, ಮಲ್ಲಪ್ಪ ಮದಗುಣಕಿ, ಮಲ್ಲಪ್ಪ ಗಾಣಿಗೇರ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು