ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್’ ಯೋಜನೆ ಜಾರಿ

ಸಾಮಾಜಿಕ ಭದ್ರತೆ ಕಲ್ಪಿಸಲು ಸಹಕಾರಿ: ಜಿಲ್ಲಾಧಿಕಾರಿ
Last Updated 13 ಡಿಸೆಂಬರ್ 2019, 9:14 IST
ಅಕ್ಷರ ಗಾತ್ರ

ಬೆಳಗಾವಿ: ‘ರೈತರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಎನ್ನುವ ವಂತಿಕೆ ಆಧಾರಿತ ಪಿಂಚಣಿ ಯೋಜನೆಯನ್ನು ಭಾರತ ಸರ್ಕಾರವು ಜಾರಿಗೆ ತಂದಿದ್ದು, ಇದರಿಂದ ಸಮಾಜಿಕ ಭದ್ರತೆ ಲಭಿಸಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾರ್ಮಿಕರ ಜೊತೆ ಹೆಚ್ಚಿನ ಪ್ರಮಾಣದಲ್ಲಿ ರೈತ ಕೂಲಿ ಕಾರ್ಮಿಕರನ್ನು ಸೇರಿಸಿಕೊಳ್ಳಬೇಕು. ಅವರಿಗೂ ಕೂಡ ಅನುಕೂಲವಾಗಬೇಕು’ ಎಂದು ಹೇಳಿದರು.

‘ಕಾರ್ಮಿಕರಿಗೆ ದುಡಿಮೆಯಲ್ಲದೇ ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ವಯಸ್ಸಾದಾಗ ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆ ಪೂರಕವಾಗಿದೆ’ ಎಂದರು.

ಕಾರ್ಮಿಕ ಉಪ ಆಯುಕ್ತ ವೆಂಕಟೇಶ ಮಾತನಾಡಿ, ‘ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಕಮಿಷನ್ ಏಜೆಂಟರು, ರಿಯಲ್ ಎಸ್ಟೇಟ್‌ ಬ್ರೋಕರ್‌ಗಳು, ಸಣ್ಣ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು, ಇತರ ಸಣ್ಣ ವ್ಯಾಪಾರಿಗಳಲ್ಲಿ ತೊಡಗಿಸಿಕೊಂಡ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಫಲಾನುಭವಿಗಳಾಗುತ್ತಾರೆ’ ಎಂದು ಮಾಹಿತಿ ನೀಡಿದರು.

‘60 ವರ್ಷ ವಯಸ್ಸು ಪೂರ್ಣಗೊಂಡ ನಂತರ ವಂತಿಕೆದಾರರು ತಿಂಗಳಿಗೆ ₹ 3ಸಾವಿರ ಪಿಂಚಣಿ ಪಡೆಯಲು ಅರ್ಹರಿರುತ್ತಾರೆ. 10 ವರ್ಷದೊಳಗೆ ಅವರು ಯೋಜನೆಯಿಂದ ಹೊರಹೋದರೆ ಅವರು ಪಾವತಿಸಿದ ವಂತಿಕೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುವುದು. ಈ ಯೋಜನೆಯಲ್ಲಿ ತೊಡಗಿಸಿಕೊಂಡ ಫಲಾನುಭವಿಯ ವಯಸ್ಸಿನ ಆಧಾರದ ಮೇಲೆ ವಂತಿಕೆ ನಿಗದಿಪಡಿಸಲಾಗಿದೆ. ಕನಿಷ್ಠ ₹ 55 ಹಾಗೂ ಗರಿಷ್ಠ ₹ 200 ಆಗಿದೆ. ಪಿಂಚಣಿ ಆರಂಭಗೊಂಡ ನಂತರ ವಂತಿಕೆದಾರರು ಮೃತಪಟ್ಟಪಲ್ಲಿ ಅವರ ಪತ್ನಿ ಅಥವಾ ಪತಿಯು ಶೇ.50ರಷ್ಟು ಪಿಂಚಣಿ ಪಡೆಯಲು ಅರ್ಹರಿರುತ್ತಾರೆ’ ಎಂದು ತಿಳಿಸಿದರು.

ಅಸಂಘಟಿತ ಕಾರ್ಮಿಕರ ಸಂಘಗಳ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT