ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಂಚಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ

ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ರೈತರಿಂದ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಆಕ್ರೋಶ
Published 11 ಜೂನ್ 2024, 6:37 IST
Last Updated 11 ಜೂನ್ 2024, 6:37 IST
ಅಕ್ಷರ ಗಾತ್ರ

ಬೆಳಗಾವಿ: ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ರೈತರಿಗೆ ಮಂಜೂರಾಗಿದ್ದ ಅನುದಾನ ನೀಡದೆ ರೈತರನ್ನು ವಂಚಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಇಲ್ಲಿನ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರತಿಭಟಿಸಿದ ಅವರು, ತೋಟಗಾರಿಕೆ ಇಲಾಖೆ ಬಾಗಲಕೋಟೆ ಉಪನಿರ್ದೇಶಕ (ಆಗ ಬೆಳಗಾವಿ ಉಪನಿರ್ದೇಶಕರಾಗಿದ್ದ) ರವೀಂದ್ರ ಹಕಾಟಿ, ಅಥಣಿಯ ಹಿರಿಯ ಸಹಾಯಕ ನಿರ್ದೇಶಕ ಮಾರುತಿ ಕಳ್ಳಿಮನಿ, ರಾಯಬಾಗದ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕ  ಅಶೋಕ ಕರೆಪ್ಪಗೋಳ, ಅರಭಾವಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಾನಂದ ಸವಸುದ್ದಿ ಹಾಗೂ ರಾಯಬಾಗ ಪ್ರಥಮ ದರ್ಜೆ ಸಹಾಯಕ ಕಲ್ಲಪ್ಪ ಗುಡಿಮನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಕುರಬೂರ ಶಾಂತಕುಮಾರ, ‘ರಾಯಬಾಗ ತಾಲ್ಲೂಕಿನ ಬಸ್ತವಾಡದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೂವರು ಫಲಾನುಭವಿಗಳಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ತಲಾ ₹19 ಲಕ್ಷದಂತೆ ₹57 ಲಕ್ಷ ಅನುದಾನ ಮಂಜೂರಾಗಿತ್ತು. ತೋಟಗಾರಿಕೆ ಇಲಾಖೆಯ ಐವರು ಅಧಿಕಾರಿಗಳು, ಬ್ಯಾಂಕ್‌ ಸಿಬ್ಬಂದಿ ಮತ್ತು ಏಜೆಂಟರು ಸೇರಿಕೊಂಡು ಅದನ್ನು ಲಪಟಾಯಿಸಿದ್ದಾರೆ. ರೈತರನ್ನು ವಂಚಿಸಲು ನಕಲಿ ಸಹಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮವಾಗಬೇಕು’ ಎಂದು ಆಗ್ರಹಿಸಿದರು.

‘ಈ ಅವ್ಯವಹಾರದ ಕುರಿತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತೋಟಗಾರಿಕೆ ಇಲಾಖೆಯ ಸರ್ಕಾರ ಪ್ರಧಾನ ಕಾರ್ಯದರ್ಶಿಗಳಿಗೆ ವಿಚಾರಣೆ ವರದಿ ಸಲ್ಲಿಸಿದ್ದಾರೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮವಾಗಿಲ್ಲ’ ಎಂದು ದೂರಿದರು.
ಮುಖಂಡರಾದ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯ್ಕ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT