ಗುರುವಾರ , ಜನವರಿ 21, 2021
21 °C
ನಿರ್ವಹಣೆ ಕೊರತೆ, ಜನರಿಗೆ ತೊಂದರೆ

ಬೈಲಹೊಂಗಲ: ‘ಶೋಚನೀಯ’ ಸ್ಥಿತಿಯಲ್ಲಿ ಶೌಚಾಲಯಗಳು

ರವಿ ಎಂ. ಹುಲಕುಂದ Updated:

ಅಕ್ಷರ ಗಾತ್ರ : | |

Prajavani

ಬೈಲಹೊಂಗಲ: ‘ಸಾಹೇಬ್ರ ಒಂದ್ ಸಾರ್ವಜನಿಕ ಶೌಚಾಲಯ ಕೂಡ ನೆಟ್ಟಗಿಲ್ಲರಿ ನಮ್ಮೂರಾಗ. ಹಿಂಗಾದ್ರ ಬಯಲು ಮಲ ಮೂತ್ರ ವಿಸರ್ಜನೆ ತಡೆಯೋದಾದರೂ ಹೇಗೆ?’... ಹೀಗೆ ಕೇಳುತ್ತಿರುವವರು ಗ್ರಾಮೀಣ ಭಾಗದ ಜನರಲ್ಲ. ಬೈಲಹೊಂಗಲ ಪಟ್ಟಣದವರು.

ವರ್ಷದಿಂದ ಸರಿಯಾದ ಸಾರ್ವಜನಿಕ ಶೌಚಾಲಯ ಇಲ್ಲದೆ ಜನರು ಪರದಾಡುವಂತಾಗಿದೆ. ಇರುವ ಒಂದೆರಡು ಶೌಚಾಲಯಗಳು ನಿರ್ವಹಣೆ ಇಲ್ಲದೆ ದುರ್ನಾತ ಸೂಸುತ್ತಿವೆ. ಬಳಸುವ ಸ್ಥಿತಿಯಲ್ಲಿ ಅವುಗಳು ಇಲ್ಲ. ಇದರಿಂದಾಗಿ ಮತ್ತಷ್ಟು ಹದಗೆಡುತ್ತಿವೆ.

ಮುರಗೋಡ ರಸ್ತೆಯ ತಹಶೀಲ್ದಾರ್ ಕಚೇರಿ ಎದುರು ಈ ಮೊದಲಿದ್ದ ಸಾರ್ವಜನಿಕ ಶೌಚಾಲಯ ಮಳೆಯಿಂದ ಕುಸಿದು ಬಿದ್ದು ಹಾಳಾಗಿದೆ. ಪಕ್ಕದಲ್ಲಿರುವ ಚಿಕ್ಕ ಶೌಚಾಲಯ ನಿರ್ವಹಣೆ ಕಂಡಿಲ್ಲ. ಆ ಪ್ರದೇಶದಲ್ಲಿ ಸರ್ಕಾರಿ ಕಚೇರಿಗಳಿವೆ. ನಿತ್ಯ ನೂರಾರು ಜನರು ಕಚೇರಿಗಳಿಗೆ ಬಂದು ಹೋಗುತ್ತಾರೆ. ಅವರು ಮಲ, ಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ.

ಶೌಚಾಲಯಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಗ್ಲಾಸ್, ಸಿಗರೇಟ್ ತುಂಡುಗಳು ಬಿದ್ದಿವೆ. ಒಳಗಡೆ ಹೋದರೆ ದುರ್ವಾಸನೆ. ಇದರಿಂದಾಗಿ ಆ ಪರಿಸರವೂ ಹಾಳಾಗುತ್ತಿದೆ.

ಬಜಾರ್ ರಸ್ತೆಯ ಕರೆಮ್ಮದೇವಿ ಮಂದಿರ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದಾಗಿ ಶೌಚಾಲಯ ಇದ್ದೂ ಇಲ್ಲದಂತಾಗಿವೆ. ಚನ್ನಮ್ಮನ ಸಮಾಧಿಯ ಜೋಡಿ ರಸ್ತೆ ಬದಿಯಿಂದ ಶೌಚಾಲಯಕ್ಕೆ ಹೋಗಲು ಮಾರ್ಗ ಸೂಚಿಸಲಾಗಿದೆ. ಆದರೆ, ಬಹುತೇಕರು ಅಲ್ಲಿಗೆ ಹೋಗುವುದಿಲ್ಲ. ಹೊರಗಡೆಯೇ ಮೂತ್ರ ವಿಸರ್ಜಿಸುವುದರಿಂದ ಆ ಪ್ರದೇಶ ಗಬ್ಬೆದ್ದು ನಾರುತ್ತಿದೆ.

ಕೇಂದ್ರ ಬಸ್ ನಿಲ್ದಾಣದ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ, ಅಲ್ಲಿಯೂ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೆ ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ. ಬೆಳಗಾವಿ ರಸ್ತೆಯ ಚನ್ನಮ್ಮ ವೃತ್ತದಿಂದ ರಾಯಣ್ಣ ವೃತ್ತದವರೆಗೆ ಒಂದೂ ಸಾರ್ವಜನಿಕ ಶೌಚಾಲಯವಿಲ್ಲ. ಬಜಾರ್‌ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಶೌಚಾಲಯಕ್ಕೆ ಪರದಾಡುವಂತಾಗಿದೆ.

ಅಂಬೇಡ್ಕರ್‌ ಉದ್ಯಾನದ ಬಳಿ ಹಳೆಯ ಸಾರ್ವಜನಿಕ ಆಸ್ಪತ್ರೆ ಕಟ್ಟಡಕ್ಕೆ ಹೊಂದಿಕೊಂಡಿರುವ ಶೌಚಾಲಯ ನಿರ್ವಹಣೆ ಕಂಡಿಲ್ಲ. ಮುಖ್ಯಾಧಿಕಾರಿ ಅಥವಾ ಆಡಳಿತಾಧಿಕಾರಿ ಇತ್ತ ಗಮನಿಸಿ, ಜನರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳಬೇಕು. ಇರುವಲ್ಲಿ ನಿರ್ವಹಣೆ ಮಾಡಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಹೊಸದಾಗಿ ನಿರ್ಮಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು