ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಕುಲಗೋಡ ಠಾಣೆ ವ್ಯಾಪ್ತಿಯಲ್ಲಿ ಪಂಪ್‌ಸೆಟ್ ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳಿಂದ ₹2.03 ಲಕ್ಷ ಬೆಲೆ ಬಾಳುವ 14 ಪಂಪ್‌ಸೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕೈತನಾಳ ಕುಮಾರ ರಮೇಶ ಕಂಬಾರ (21), ಯಲ್ಲಪ್ಪ ಮುದಕಪ್ಪ ನಂದಿ (35), ರವಿ ಅಜಿತ ಕಂಬಾರ (21), ಭೀಮಪ್ಪ ಹೊಳೆಪ್ಪ ಹಣಮಸಾಗರ (27) ಬಂಧಿತರು.
ಈ ಆರೋಪಿಗಳ ತಂಡವು ಕೈತನಾಳ, ವಡೇರಹಟ್ಟಿಯಲ್ಲಿ ತಲಾ ಎರಡು, ಸಜ್ಜಿಹಾಳ, ಖನಗಾಂವ, ತವಗ, ಬೆಣಚಿನಮರಡಿ, ಗಿಳಿಹೊಸೂರು, ಕೇಶಪ್ಪನಹಟ್ಟಿ, ಮೆಳವಂಕಿ, ಹಡಗಿನಾಳ, ಕೊಳವಿ, ಮಿಡಕನಟ್ಟಿಯಲ್ಲಿ ತಲಾ ಒಂದೊಂದು ಪಂಪ್‌ಸೆಟ್ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಂಪ್‌ಸೆಟ್ ಕಳವಾದ ಬಗ್ಗೆ ಹಡಗಿನಾಳದ ರೈತ ಮಲ್ಲಪ್ಪ ಯಮನಪ್ಪ ಲಾಡಿ ಎನ್ನುವವರು ಈಚೆಗೆ ಕುಲಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಜಿ.ಎಸ್.ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಲಾತಯಿತು.
ನಾಯಿ ಕಚ್ಚಿ ಬಾಲಕ ಗಾಯ: ಇಲ್ಲಿನ ಸಂಗಮೇಶ್ವರ ನಗರದಲ್ಲಿ ಭಾನುವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕನ್ನು ನಾಯಿಗಳ ಹಿಂಡು ಕಚ್ಚಿ ಗಾಯಗೊಳಿಸಿದೆ.
ರಿಯಾಜ್ ಅತ್ತಾರ ಅವರ ಪುತ್ರ ಅರ್ಕಾನ್ (8) ಗಾಯಗೊಂಡ ಬಾಲಕ, ಬಾಲಕನ ಬೆನ್ನು, ಕೈ, ತಲೆಯ ಭಾಗಕ್ಕೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ತೀವ್ರ ರಕ್ತಸ್ರಾವವಾದ ಬಾಲಕನನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.