ಶುಕ್ರವಾರ, ಮಾರ್ಚ್ 5, 2021
30 °C
ಪ್ಲಾನ್‌ ಇಲ್ಲದಿರುವುದು, ಅವೈಜ್ಞಾನಿಕ–ಅಡ್ಡಾದಿಡ್ಡಿ ಅಭಿವೃದ್ಧಿಯಿಂದ ಅನಾಹುತ

ಇನ್ನಾದರೂ ‘ಪಾಠ’ ಕಲಿಯಬೇಕಲ್ಲವೇ!?

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಧಾರಾಕಾರ ಮಳೆಗೆ ನಲುಗಿದ ನಗರದಲ್ಲಿನ ಸ್ಥಿತಿಯು ‘ಯೋಜಿತ ಅಭಿವೃದ್ಧಿಯಲ್ಲಿನ ಕೊರತೆ’ಗಳಿಗೆ ಕನ್ನಡಿ ಹಿಡಿದಿದೆ. ದೂರದೃಷ್ಟಿಯ ಪ್ಲಾನ್‌ ಇಲ್ಲದಿದ್ದರೆ ಏನೇನೆಲ್ಲಾ ಆಗಬಹುದು ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಕಲಿಯಬೇಕಾದ ‘ಪಾಠ’ವನ್ನೂ ಸೂಚ್ಯವಾಗಿ ತಿಳಿಸಿದೆ. ಎಚ್ಚರಿಕೆ ಕರೆಗಂಟೆಯನ್ನೂ ಬಾರಿಸಿದೆ.

ಹೌದು. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಪೈಕಿ ಪ್ರಮುಖ ಸ್ಥಾನದಲ್ಲಿರುವ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ವಾಣಿಜ್ಯ ನಗರವಾಗಿಯೂ ಗುರುತಿಸಿಕೊಂಡಿರುವ ಇಲ್ಲಿ ವ್ಯವಸ್ಥಿತ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳದಿರುವುದರಿಂದ ಮಳೆಯ ಅನಾಹುತಗಳು ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿದೆ.

ಸೇಫ್‌ ಸಿಟಿಯೂ ಆಗಬೇಕು: ಪ್ರಗತಿ ಆಗಬೇಕು ನಿಜ. ಆದರೆ, ಮುಂದಾಲೋಚನೆಯ ಕೊರತೆ ಇರಬಾರದು. ಸ್ಮಾರ್ಟ್‌ ಆಗುವುದರೊಂದಿಗೆ ಸೇಫ್‌ ಕೂಡ ಆಗಿರಬೇಕು ಎನ್ನುವುದನ್ನು ಹಿಂದಿನಿಂದಲೂ ಯೋಚಿಸಿಲ್ಲ. ಪರಿಣಾಮ, ಅಡ್ಡಾದಿಡ್ಡಿಯಾಗಿ ನಗರ ಬೆಳೆದಿದೆ. ಕಟ್ಟಡಗಳು ಮೈದಳೆದಿವೆ. ನೈಸರ್ಗಿಕವಾಗಿ ನೀರು ಹರಿಯುವ ಮಾರ್ಗಗಳು ಕೆಲವೆಡೆ ಮುಚ್ಚಿದ್ದರೆ, ಕೆಲವೆಡೆ ಒತ್ತುವರಿಯಾಗಿವೆ. ಇವುಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾದ ಕೆಲಸಗಳು ನಡೆದಿಲ್ಲ. ಸಂಬಂಧಿಸಿದ ನಗರಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ‘ತಮ್ಮ ಅನುಕೂಲಕ್ಕೆ ತಕ್ಕಂತೆ’ ನಿರ್ಲಕ್ಷ್ಯ ಮಾಡಿರುವ ಫಲವನ್ನು ನಗರದ ಜನರು ಉಣ್ಣಬೇಕಾಗಿದೆ.

ಹಲವು ಕಡೆಗಳಲ್ಲಿ ಸಾಂಪ್ರದಾಯಿಕ ನಾಲೆಗಳ ದಿಕ್ಕನ್ನು ಬದಲಾವಣೆ ಮಾಡಿರುವ ಬಗ್ಗೆ ದೂರುಗಳು ಕೇಳಿಬಂದರೂ ಕ್ರಮ ಕೈಗೊಂಡಿಲ್ಲ. ಸಣ್ಣನೀರಾವರಿ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆ ಬಳಿ ಇರುವ ಸಾಂಪ್ರದಾಯಿಕ ನಾಲೆಗಳ ನಕ್ಷೆಯನ್ನು ಪರಿಶೀಲಿಸುವ ಗೋಜಿಗೂ  ಹೋಗಿಲ್ಲ. ಇದರೊಂದಿಗೆ ಅವೈಜ್ಞಾನಿಕ ಹಾಗೂ ಪ್ಲಾನ್‌ ಇಲ್ಲದ ಕಾಮಗಾರಿಗಳೂ ಅಪಾರ ಕೊಡುಗೆ ನೀಡಿವೆ.

ಅವೈಜ್ಞಾನಿಕವಾದವು: ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ಚರಂಡಿ, ರಸ್ತೆ ಇಲ್ಲದಿರುವ ಅಕ್ರಮ ಬಡಾವಣೆಗಳಿಗೆ ಅನುಮತಿ ನೀಡಿರುವುದೂ ಇಡೀ ನಗರ ಜಲಾವೃತಗೊಳ್ಳಲು ಹಾಗೂ ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ. ಯಾರೋ ಕೆಲವು ‘ಫಲಾನುಭವಿ’ ಅಧಿಕಾರಿಗಳು, ಎಂಜಿನಿಯರ್‌ಗಳು ಮಾಡಿದ ತಪ್ಪಿಗೆ ಇಲ್ಲಿನ ಶೇ 70ರಷ್ಟು ಜನರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ನಾಲೆಗಳು ಹಾಗೂ ಚರಂಡಿಗಳನ್ನು ‘ನುಂಗಿದವರ’ ದುರಾಸೆಯ ಫಲವಾಗಿ ಇಲ್ಲಿ ಎಡವಟ್ಟುಗಳು ಕಂಡುಬರುತ್ತಿವೆ.

ಮಳೆ ಬರುವುದನ್ನು ತಡೆಯುವುದಕ್ಕೆ ಆಗುವುದಿಲ್ಲ. ಆದರೆ, ಅದು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕಾದ ಅವಕಾಶ ಸ್ಥಳೀಯ ಸಂಸ್ಥೆ ಕೈಯಲ್ಲಿಯೇ ಇದೆಯಲ್ಲವೇ? ಮಳೆ ನೀರು ಸರಾಗವಾಗಿ ಸಾಗಲು ಅನುವು ಮಾಡಿಕೊಡುವುದನ್ನು ಬಿಟ್ಟು ಮಳೆರಾಯನನ್ನು ಶಪಿಸಿದರೆ ಆಗುವ ಲಾಭವೇನು? ಯುದ್ಧ ಕಾಲದಲ್ಲಿನ ಶಸ್ತ್ರಾಭ್ಯಾಸ ಜಯ ತಂದುಕೊಡುವುದೇ?!

ಅನಾಹುತಗಳಿಗೆ ಕಾರಣ: ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ನಗರಪಾಲಿಕೆಯು ಸಿದ್ಧತೆ ಕೈಗೊಳ್ಳದಿರುವುದರಿಂದಾಗಿ ಹಲವು ಅನಾಹುತಗಳು ಎದುರಾಗುತ್ತಿವೆ. ಇರುವ ಚರಂಡಿ, ನಾಲೆಗಳನ್ನಾದರೂ ಸ್ವಚ್ಛಗೊಳಿಸುವ ಕೆಲಸ ಮಾಡುವುದಿಲ್ಲ. ಮಾಡಿದರೂ ಸಮರ್ಪಕವಾಗಿ ಇರುವುದಿಲ್ಲ. ಚರಂಡಿಗಳಲ್ಲಿನ ತ್ಯಾಜ್ಯ ತುಂಬಿದ್ದರೆ ನೀರು ಹರಿಯುವುದಾದರೂ ಹೇಗೆ, ಬಡಾವಣೆಗಳಿಗೆ ನುಗ್ಗುವುದನ್ನು ತಡೆಯುವುದಾದರೂ ಹೇಗೆ ಎನ್ನುವುದೇ ಪ್ರಶ್ನೆಯಾಗಿದೆ. ಜನರು ಹಾಗೂ ಜನಪ್ರತಿನಿಧಿಗಳು ಸೂಚನೆ ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಚರಂಡಿ, ನಾಲೆಗಳ ಸಮೀಪದವರು ‘ನಡುಗಡ್ಡೆ’ಯಲ್ಲಿ ಸಿಲುಕಬೇಕಾಗಿದೆ.

ಇಲ್ಲಿನ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 19 ವರ್ಷಗಳ ಪೈಕಿ 20 ಕಿ.ಮೀ.ನಷ್ಟು ನಾಲೆ, ಚರಂಡಿಗಳು ಒತ್ತುವರಿಯಾಗಿವೆ. ಇವುಗಳಲ್ಲಿ ಪ್ರಭಾವಿಗಳ ಕೈವಾಡವೂ ಇದೆ. ಕೆಲವು ಕಟ್ಟಡಗಳು ಅವರಿಗೇ ಸೇರಿದವಾಗಿವೆ! ಅಧಿಕಾರಿಗಳ ‘ಕೈಬಿಸಿ’ ಮಾಡಿ ಅನುಮತಿ ಪಡೆದುಕೊಂಡ ಉದಾಹರಣೆಗಳು ಗುಟ್ಟಾಗಿ ಉಳಿದಿಲ್ಲ.

ಯೋಜಿತವಲ್ಲದ ಪ್ರಗತಿ: ‘1980ರಲ್ಲಿ ನಾನು ಬೆಳಗಾವಿಗೆ ಬಂದಾಗಲೂ ಇಷ್ಟೇ ಮಳೆ ಬರುತ್ತಿತ್ತು. ಈಗಲೇ ಬರುತ್ತಿದೆ. ಆದರೆ, ಈಗ ಅನಾಹುತಗಳು ಹೆಚ್ಚಾಗಿವೆ. ಇದಕ್ಕೆ ಹಲವು ಕಾರಣಗಳಿವೆ. ನಗರ ಚಾಚಿದಂತೆಲ್ಲಾ ಸಮಸ್ಯೆಗಳು ಹೆಚ್ಚಾಗುತ್ತಿವೆ. 176 ಬಡಾವಣೆಗಳಲ್ಲಿ 125ಕ್ಕೂ ಹೆಚ್ಚಿನ ಬಡಾವಣೆಗಳು ಅಕ್ರಮವಾಗಿವೆ. ಕೃಷಿ ಜಮೀನುಗಳಲ್ಲಿ (ಎನ್‌ಎ ಆಗದಿದ್ದರೂ) ಬಡಾವಣೆಗಳು ಬಂದಿವೆ. ರಾಜಕಾರಣಿಗಳು ಮತಕ್ಕಾಗಿ ರಸ್ತೆ, ಬೀದಿದೀಪ ಮೊದಲಾದ ಸೌಲಭ್ಯ ಕಲ್ಪಿಸಿದರು. ರಾಜಕೀಯ ಆಶ್ರಯ ಒದಗಿಸಿದರು. ಯೋಜಿತವಲ್ಲದ ಪ್ರಗತಿಯೇ ಇದೆಲ್ಲ ಅವಾಂತರಗಳಿಗೆ ಕಾರಣವಾಗಿದೆ’ ಎಂದು ಹೋರಾಟಗಾರ ಅಶೋಕ ಚಂದರಗಿ ವಿಶ್ಲೇಷಿಸಿದರು.

‘ಖಾಸಗಿ ಬಡಾವಣೆಗಳಲ್ಲಿ ಕಡಿಮೆ ಹಣಕ್ಕೆ ನಿವೇಶನಗಳು ದೊರೆಯುತ್ತವೆಂದು ಜನರು ಖರೀದಿಸಿಬಿಟ್ಟಿದ್ದಾರೆ. ಅಲ್ಲಿ ರಸ್ತೆಗಳಿಲ್ಲ, ಪಾರ್ಕ್‌ಗಳಿಲ್ಲ, ಚರಂಡಿಗಳು ನಿರ್ಮಾಣವಾಗಿಲ್ಲ. ಅದೆಲ್ಲವನ್ನೂ ಸಂಬಂಧಿಸಿದ ಅಧಿಕಾರಿಗಳು ಗಮನಿಸಿಯೂ ಇಲ್ಲ. ಅನಾಹುತವಾಗದೇ ಇನ್ನೇನಾಗುತ್ತದೆ’ ಎಂದು ಅವರು ಪ್ರಶ್ನಿಸಿದರು.

ಈವರೆಗೆ ಆಗಿರುವ ತಪ್ಪುಗಳನ್ನು ಮುಂದೆಯೂ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ಮಳೆಗಾಲದಲ್ಲೂ ಅನಾಹುತಗಳು ಆಗುವುದನ್ನು ತಪ್ಪಿಸಲಾಗದು!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು