ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವದಂತಿಯಿಂದಾಗಿ ಚಲಾವಣೆಗೆ ತೊಡಕು: ಹತ್ತು ರೂಪಾಯಿಯ ನಾಣ್ಯ ಬ್ಯಾಂಕಲ್ಲೇ ಉಳಿದೈತಿ!

Last Updated 18 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಹತ್ತು ರೂಪಾಯಿಯ ನಾಣ್ಯ ಕಾನೂನುಬದ್ಧವಾಗಿದ್ದು, ಅದನ್ನು ಸ್ವೀಕರಿಸಲೇಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಲವು ಬಾರಿ ಸುತ್ತೋಲೆ ಹೊರಡಿಸಿದ್ದರೂ ಮತ್ತು ಎಚ್ಚರಿಕೆ ನೀಡಿದರೂ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಆ ನಾಣ್ಯ ನಿರಾಕರಿಸುವ ಘಟನೆಗಳು ನಡೆಯುತ್ತಲೇ ಇವೆ.

₹ 10 ಮುಖಬೆಲೆಯ ನಾಣ್ಯದ ಬಗೆಗಿನ ಅನುಮಾನ, ಗೊಂದಲಗಳು ಹಾಗೂ ವದಂತಿಗಳು ಇನ್ನೂ ದೂರವಾಗಿಲ್ಲ. ಅಂಗಡಿಕಾರರು, ವರ್ತಕರು ಆ ನಾಣ್ಯ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಪರಿಣಾಮ, ನಾಣ್ಯಗಳು ಬ್ಯಾಂಕ್‌ಗಳ ತಿಜೋರಿಯಲ್ಲೇ ಉಳಿಯುವಂತಾಗಿವೆ. ಚಲಾವಣೆಗೆ ಬರಬೇಕಾದ ನಾಣ್ಯಗಳು ಬ್ಯಾಂಕ್‌ಗಳಲ್ಲೇ ಉಳಿದಿದ್ದು, ಸರ್ಕಾರದ ಉದ್ದೇಶಕ್ಕೆ ಹಿನ್ನಡೆ ಆದಂತಾಗಿದೆ.

ನಾಣ್ಯ ಸ್ವೀಕರಿಸಲು ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುದು ಎಂಬ ಆರ್‌ಬಿಐ ಎಚ್ಚರಿಕೆಯ ಹೊರತಾಗಿಯೂ, ಜನರಿಂದ ಸ್ಪಂದನೆ ಸಿಗದಿರುವುದು ಬ್ಯಾಂಕ್‌ ಅಧಿಕಾರಿಗಳನ್ನೂ ಚಿಂತೆಗೀಡು ಮಾಡಿದೆ.

ನೋಟುಗಳಿಗಿಂತ ಸುರಕ್ಷಿತ:ನೋಟುಗಳು ದೀರ್ಘಾವಧಿಯವರೆಗೆ ಬಾಳಿಕೆ ಬರುವುದಿಲ್ಲ. ಚಲಾವಣೆ ಆದಂತೆ ಹಾಳಾಗುತ್ತವೆ. ಕೆಲವರು ಹೇಗ್ಹೇಗೋ ಬಳಸಿ ಅವುಗಳು ಬೇಗ ಹರಿದು ಹೋಗುವಂತೆ ಮಾಡುವುದೂ ಉಂಟು. ಏರುತ್ತಿರುವ ಕಾಗದದ ದರ, ಮುದ್ರಣ ವೆಚ್ಚ ತಗ್ಗಿಸುವ ಉದ್ದೇಶದಿಂದ ₹ 5ರ ನಾಣ್ಯದಂತೆ ₹ 10ರ ನಾಣ್ಯವನ್ನು ಚಲಾವಣೆಗೆ ತರಲಾಗಿದೆ ಎಂದು ಆರ್‌ಬಿಐ ಹೇಳಿದೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಬರುವ ವದಂತಿಗಳನ್ನು ನಂಬಿ ಜನರು ಆ ನಾಣ್ಯವನ್ನು ‘ಮಾನ್ಯ’ ಮಾಡುತ್ತಿಲ್ಲ. ಈ ವಿಷಯವಾಗಿ ಗ್ರಾಹಕರು–ವರ್ತಕರ ನಡುವೆ ಮಾತಿನ ಚಕಮಕಿ ನಡೆಯುವುದು ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ. ‘ನಾವು ಸ್ವೀಕರಿಸಲು ಸಿದ್ಧ. ಆದರೆ, ತೆಗೆದುಕೊಳ್ಳುವವರು ಬೇಕಲ್ಲವೇ?. ಸುಮ್ಮನೆ ಇಟ್ಟುಕೊಂಡು ನಾವೇನು ಮಾಡುವುದು? ಹೀಗಾಗಿ, ಚಲಾವಣೆಯಲ್ಲಿ ಇರುವುದನ್ನು ಮಾತ್ರವೇ ಪಡೆಯಬೇಕಾಗುತ್ತದೆ’ ಎನ್ನುವುದು ವರ್ತಕರ ಅಭಿಪ್ರಾಯವಾಗಿದೆ.

ಅನುಮಾನದಿಂದ ನೋಡ್ತಾರೆ:ಭಿಕ್ಷುಕರು ಕೂಡ ಆ ನಾಣ್ಯವನ್ನು ಅನುಮಾನದಿಂದ ನೋಡುತ್ತಾರೆ. ಚಲಾವಣೆ ಇಲ್ಲದಿರುವುದಕ್ಕೆ ‘ಬೆಲೆ’ ಇರುವುದಿಲ್ಲ ಎನ್ನುವ ಮಾತು ಈ ನಾಣ್ಯಕ್ಕೆ ಬಂದೊದಗಿದೆ.

‘ನಮ್ಮಿಂದ ಗ್ರಾಹಕರು ₹ 10ರ ನಾಣ್ಯ ಸ್ವೀಕರಿಸುವುದಿಲ್ಲ. ನಮ್ಮಲ್ಲಿ ₹50ಸಾವಿರ ಮೌಲ್ಯದ ₹10 ನಾಣ್ಯಗಳು ಉಳಿದಿವೆ. ಗ್ರಾಹಕರಿಗೆ ಕೊಡುವಂತೆ ಕೇಂದ್ರ ಕಚೇರಿಯಿಂದ ಸೂಚನೆ ಇದೆ. ಆದರೆ, ಗ್ರಾಹಕರು ಪಡೆಯಲು ಮುಂದಾಗುತ್ತಿಲ್ಲ. ಹೀಗಾಗಿ ವಿಲೇವಾರಿಯೇ ತಲೆನೋವಾಗಿ ಪರಿಣಮಿಸಿದೆ’ ಎಂದು ಬ್ಯಾಂಕೊಂದರ ವ್ಯವಸ್ಥಾಪಕರೊಬ್ಬರು ಪ್ರತಿಕ್ರಿಯಿಸಿದರು.

ಹೊಸದಾಗಿ ನಾಣ್ಯ ಬಿಡುಗಡೆ ಆದಾಗ ಚಲಾವಣೆ ಉತ್ತಮವಾಗಿತ್ತು. ಆಗ, ಹಲವರು ಶೇಖರಿಸಿಟ್ಟುಕೊಂಡಿದ್ದರು. ದಿನಗಳು ಕಳೆದಂತೆ ನಾಣ್ಯದ ಬಗೆಗಿನ ಅಪನಂಬಿಕೆಗಳು ಹೆಚ್ಚಾಗುತ್ತಾ ಹೋದವು. ಹಲವು ವದಂತಿಗಳು ಕೂಡ ಚಲಾವಣೆ ಮೇಲೆ ಪರಿಣಾಮ ಬೀರಿದೆ. ಕೆಲವು ಅಂಗಡಿಕಾರರು ₹ 2ಸಾವಿರ ಮುಖಬೆಲೆಯ ನೋಟು ಪಡೆಯುವುದಕ್ಕೂ ಹಿಂದೇಟು ಹಾಕುವುದು ಕಂಡುಬರುತ್ತಿದೆ. ಚಿಲ್ಲರೆಗಾಗಿ ಪರದಾಡಬೇಕಾಗುತ್ತದೆ ಎಂಬ ಸಮರ್ಥನೆ ಅವರದು. ಅಮಾನ್ಯಗೊಂಡರೆ ನಾವೇನು ಮಾಡೋಣ ಎಂಬ ಆತಂಕವೂ ಇದೆ ಎನ್ನುತ್ತಾರೆ.

‘ಜನ ಜಾಗೃತಿಗೆ ಪೋಸ್ಟರ್’
‘₹ 10ರ ನಾಣ್ಯ ಚಲಾವಣೆ ಆಗದೆ ಬ್ಯಾಂಕ್‌ ಶಾಖೆಗಳಲ್ಲೇ ಉಳಿದುಬಿಟ್ಟಿವೆ. ಜನರು ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅವು ಕಾನೂನುಬದ್ಧ ಆಗಿರುವುದರಿಂದ ಸ್ವೀಕರಿಸಲೇಬೇಕು ಎಂದು ಆರ್‌ಬಿಐನಿಂದ ಬಹಳಷ್ಟು ಬಾರಿ ತಿಳಿವಳಿಕೆ ನೀಡಲಾಗಿದೆ. ಆದರೂ ಚಲಾವಣೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ನೋಟುಗಳಾದರೆ ಬೇಗ ಹಾಳಾಗುತ್ತವೆ; ಹರಿದು ಹೋಗಬಹುದು. ಆದರೆ, ನಾಣ್ಯಗಳು ಬಹಳ ಸುರಕ್ಷಿತವಾಗಿರುತ್ತವೆ. ವಿನಿಮಯವೂ ಸುಲಭ. ಇದೆಲ್ಲವನ್ನೂ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವವ್ಥಾಪಕ ವಿ. ರಾಹುಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವದಂತಿ ದೂರಾಗಿಸಲು ಪ್ರಯತ್ನಿಸುತ್ತಿದ್ದೇವೆ. ನಾಣ್ಯಗಳನ್ನು ಹಿಂದಕ್ಕೆ ಪಡೆಯುವ ಯಾವುದೇ ಪ್ರಸ್ತಾವವಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಯಾರೂ ತಿರಸ್ಕರಿಸುವಂತಿಲ್ಲ. ಆದಾಗ್ಯೂ ಜನರಲ್ಲಿರುವ ಸಂಶಯಗಳನ್ನು ಹೋಗಲಾಡಿಸಲು ಭಿತ್ತಿಪತ್ರಗಳನ್ನು (ಪೋಸ್ಟರ್) ಮುದ್ರಿಸಿ ಬ್ಯಾಂಕ್‌ಗಳ ಶಾಖೆಗಳ ಬಳಿ ಮೊದಲಾದ ಕಡೆಗಳಲ್ಲಿ ಅಂಟಿಸಿ ಪ್ರಚಾರ ನೀಡಲು, ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

***
₹ 10ರ ನಾಣ್ಯಗಳನ್ನು ನನ್ನಿಂದ ಯಾರೂ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ನಾನು ಯಾರಿಂದಲೂ ಪಡೆಯುತ್ತಿಲ್ಲ. ಸುಮ್ಮನೆ ಇಟ್ಟುಕೊಂಡು ಕೂರುವುದಕ್ಕೆ ತೆಗೆದುಕೊಳ್ಳಬೇಕೇಕೆ?
-ಸುರೇಶ ಪಾಟೀಲ,ಚಿಲ್ಲರೆ ಅಂಗಡಿ ಮಾಲೀಕ, ಎಪಿಎಂಸಿ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT