ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 5,825 ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ

ಸರ್ಕಾರಿ ಹಾಸ್ಟೆಲ್‌, ವಸತಿಶಾಲೆಗಳಲ್ಲಿ ತರಬೇತಿ
Last Updated 7 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ವಿವಿಧ ವಸತಿನಿಲಯ ಮತ್ತು ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5,825 ವಿದ್ಯಾರ್ಥಿನಿಯರಿಗೆ ಶಿಕ್ಷಣದೊಂದಿಗೆ ಸ್ವರಕ್ಷೆ ಹಾಗೂ ಸುರಕ್ಷೆಗಾಗಿ ‘ಆತ್ಮರಕ್ಷಣಾ ಕಲೆ’ಯನ್ನು ಕಲಿಸಲಾಗುತ್ತಿದೆ.

ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ಕಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅರಂಭಿಸಿರುವ ‘ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದಾರೆ. ಕರಾಟೆಯ ಪಟ್ಟುಗಳನ್ನು ಕಲಿತುಕೊಂಡು ಆತ್ಮರಕ್ಷಣೆ ಮಾಡಿಕೊಳ್ಳುವ ಆತ್ಮವಿಶ್ವಾಸವನ್ನೂ ಪಡೆದುಕೊಳ್ಳುತ್ತಿದ್ದಾರೆ.

ಈ ಚಟುವಟಿಕೆಯು ಜ.1ರಿಂದಲೇ ಆರಂಭವಾಗಿದೆ. ಜಿಲ್ಲಾ ಮಟ್ಟದ ಅಧಿಕೃತ ಉದ್ಘಾಟನಾ ಕಾರ್ಯಕ್ರಮವು ಫೆ.8ರಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಕರಾಟೆ ಕೌಶಲವನ್ನು ಪ್ರದರ್ಶಿಸಲಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಏನಿದು ಕಾರ್ಯಕ್ರಮ?

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ವಸತಿನಿಲಯಗಳ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌)ದ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯ 9 ಹಾಸ್ಟೆಲ್‌ಗಳ 896 ವಿದ್ಯಾರ್ಥಿನಿಯರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 30 ಹಾಸ್ಟೆಲ್‌ಗಳ 3,540 ವಿದ್ಯಾರ್ಥಿನಿಯರು ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿರುವ 17 ವಸತಿಶಾಲೆಗಳ 1,389 ವಿದ್ಯಾರ್ಥಿನಿಯರಿಗೆ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ.

ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಲ್ಲಿ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಯರು ಈ ವಿಶೇಷ ತರಬೇತಿ ಪಡೆಯಲಿದ್ದಾರೆ. ವಸತಿ ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯ ಹೆಣ್ಣುಮಕ್ಕಳು ಆತ್ಮರಕ್ಷಣಾ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ತವಗ ವಸತಿಶಾಲೆಯಲ್ಲಿ ಮಾತ್ರ ಪಿಯುಸಿಯವರೂ ಇದ್ದಾರೆ. ಸಮವಸ್ತ್ರಗಳನ್ನು ಸರ್ಕಾರದಿಂದಲೇ ಉಚಿತವಾಗಿ ಒದಗಿಸಲಾಗಿದೆ.

ಈ ಹಾಸ್ಟೆಲ್‌ಗಳಿಗೆ ಬಡ, ಗ್ರಾಮೀಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿನಿಯರೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಲ್ಲಿ ಕೀಳರಿಮೆ ಹೋಗಲಾಡಿಸಿ ಸ್ಥೈರ್ಯ ತುಂಬುವುದಕ್ಕೆ ಈ ಉಪಕ್ರಮವನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ವಾರದಲ್ಲಿ 2 ತರಗತಿ

‘ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ’ ಕಾರ್ಯಕ್ರಮದಲ್ಲಿ ವಾರದಲ್ಲಿ 2 ದಿನ ತರಬೇತಿ ನಡೆಯುತ್ತಿದೆ. ಬ್ಯಾಚೊಂದರಲ್ಲಿ 50 ವಿದ್ಯಾರ್ಥಿನಿಯರು ಇರುತ್ತಾರೆ. ಒಂದು ತರಬೇತಿ ಅವಧಿಯನ್ನು 60 ನಿಮಿಷಗಳಿಗೆ ನಿಗದಿಪಡಿಸಲಾಗಿದೆ. ಒಟ್ಟು 6 ತಿಂಗಳು ತರಬೇತಿ ನಡೆಯಲಿದ್ದು, 48 ಬೋಧನಾ ಅವಧಿಗಳನ್ನು ನಿಗದಿಪಡಿಸಲಾಗಿದೆ. ಸ್ವಯಂ ರಕ್ಷಣಾ ಕೌಶಲಗಳ ತರಬೇತಿ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿನಿಯರಲ್ಲಿ ಧೈರ್ಯ, ಆತ್ಮಸ್ಥೈರ್ಯ ಮೂಡಿಸುವ ಉದ್ದೇಶ ಹೊಂದಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಲಾಕ್‌ ಬೆಲ್ಟ್‌ ಪಡೆದಿರುವ ತರಬೇತಿದಾರರಿಂದಲೇ ತರಬೇತಿ ಕೊಡಿಸಲಾಗುವುದು. ಅವರಿಗೆ ತರಗತಿ ಒಂದಕ್ಕೆ ₹ 600 ಸಂಭಾವನೆ ನಿಗದಿಪಡಿಸಲಾಗಿದೆ. ಅವರು ಕರಾಟೆಯ ವಿವಿಧ ತಂತ್ರಗಳನ್ನು ಕಲಿಸಿಕೊಡುತ್ತಿದ್ದಾರೆ. ಸರ್ಕಾರದ ಸೂಚನೆ ಪ್ರಕಾರ ಬಹುತೇಕ ಕಡೆ ಮಹಿಳಾ ತರಬೇತುದಾರರನ್ನೇ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಇರುವಲ್ಲಿ ಬ್ಯಾಚ್‌ಗಳನ್ನು ಮಾಡಲಾಗಿದೆ. ಪಠ್ಯದ ಅಭ್ಯಾಸಕ್ಕೆ ತೊಂದರೆ ಆಗದಂತೆ ಕಾರ್ಯಕ್ರಮ ರೂಪಿಸಲಾಗಿದೆ. ಬೆಳಿಗ್ಗೆ ಅಥವಾ ಸಂಜೆ ತರಬೇತಿ ನಡೆಯುತ್ತಿದೆ. ವಿದ್ಯಾರ್ಥಿನಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ವಿದ್ಯಾರ್ಥಿನಿಯರಿಗೆ ಈ ಅವಕಾಶ ಕಲ್ಪಿಸಿಲ್ಲ.

ಅವರಿಗೂ ಕೆಲಸ

50 ವಿದ್ಯಾರ್ಥಿನಿಯರಿಗೆ ಒಬ್ಬರಂತೆ ಟ್ರೇನರ್‌ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ತಾಲ್ಲೂಕಿನವರಿಗೆ ಆದ್ಯತೆ ಕೊಡಲಾಗಿದೆ. ಇದರಿಂದ ಅವರಿಗೂ ಕೆಲಸ ನೀಡಿದಂತಾಗಿದೆ.

–ಆರ್‌.ವೈ. ಗಂಗರಡ್ಡಿ, ಜಿಲ್ಲಾ ಸಮನ್ವಯ ಅಧಿಕಾರಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ

ಜೀವನಕ್ಕೂ ಅನುಕೂಲ

ಹಾಸ್ಟೆಲ್‌ಗಳಲ್ಲಿ ಸರ್ಕಾರದಿಂದ ಉಚಿತವಾಗಿ ಕಲಿಯುವ ಕಲೆಯು ವಿದ್ಯಾರ್ಥಿನಿಯರ ಮುಂದಿನ ಜೀವನದಲ್ಲೂ ಪ್ರಯೋಜನಕ್ಕೆ ಬರಲಿದೆ.

–ಉಮಾ ಸಾಲಿಗೌಡರ, ಜಂಟಿ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT