ಶನಿವಾರ, ಡಿಸೆಂಬರ್ 7, 2019
21 °C
ಉತ್ತರ ಕರ್ನಾಟಕ ಹೋರಾಟ ಸಮಿತಿ

ಪ್ರಮುಖ ಇಲಾಖೆಗಳ ಕಚೇರಿ ಸ್ಥಳಾಂತರ: ಉ.ಕ. ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪ್ರಮುಖ ಇಲಾಖೆಗಳ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸಬೇಕೆಂದು ಒತ್ತಾಯಿಸಿ ಚಳಿಗಾಲದ ವಿಧಾನಮಂಡಲ ಅಧಿವೇಶನದ ಮೊದಲ ದಿನ, ಇದೇ ತಿಂಗಳ 10ರಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಲಾಗುವುದು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೇ ಪ್ರತ್ಯೇಕ ರಾಜ್ಯ ನೀಡಬೇಕು ಎಂದು ಆಗ್ರಹಿಸಿ ಕಳೆದ ಜುಲೈನಲ್ಲಿ ಸುವರ್ಣ ವಿಧಾನಸೌಧದ ಎದುರು ಮಠಾಧೀಶರ ನೇತೃತ್ವದಲ್ಲಿ ಧರಣಿ ನಡೆಸಲಾಗಿತ್ತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 15 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸುತ್ತೇನೆಂದು ಭರವಸೆ ನೀಡಿದ್ದರು. ಆದರೆ, ಅವರ ಭರವಸೆ ಇದುವರೆಗೆ ಈಡೇರಲಿಲ್ಲ’ ಎಂದರು.

ಮಾತಿಗೆ ತಪ್ಪಿರುವ ಮುಖ್ಯಮಂತ್ರಿ ಅವರಿಗೆ ಬಿಸಿ ಮುಟ್ಟಿಸಲು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಚಳಿಗಾಲ ಅಧಿವೇಶನದ ಮೊದಲ ದಿನವೇ ಸುವರ್ಣ ವಿಧಾನಸೌಧದ ಬಳಿ ಪ್ರತ್ಯೇಕ ಧ್ವಜವನ್ನು ಹಾರಿಸುತ್ತೇವೆ. ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ಈ ಹಿಂದೆ ಸುವರ್ಣಸೌಧದ ಎದುರು ಧರಣಿ ನಡೆಸಿದಾಗ ಸ್ವಾಮೀಜಿಗಳು ಗೊಂದಲ ಮೂಡಿಸಿ, ಹೋರಾಟವನ್ನು ನಿಲ್ಲಿಸುವಂತೆ ಮಾಡಿದರು. ಈಗಲಾದರೂ ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಗಳು ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.

ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ 13 ಜಿಲ್ಲೆಗಳ ಜನರು ಬೆಂಬಲ ವ್ಯಕ್ತಪಡಿಸಿದ್ದು, ಸಮಿತಿಯಿಂದ ನಡೆಸಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಈವರೆಗೆ 87 ಲಕ್ಷ ಜನರು ತಮ್ಮ ಹಸ್ತಾಕ್ಷರ ನೀಡಿದ್ದಾರೆ. ಸರ್ಕಾರ ಅಧಿವೇಶನದ ಒಳಗಾಗಿ ತನ್ನ ನಿರ್ಧಾರ ಪ್ರಕಟಿಸಬೇಕು ಇಲ್ಲದಿದ್ದರೇ ಹೋರಾಟ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.

ಸಂಘಟನೆಯ ಸದಸ್ಯರಾದ ಶ್ರೀಶೈಲ ಪ್ರಸಾದ, ವಿಲೀಂದ್ರಕುಮಾರ ತಾರಳೆ ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು