ಬುಧವಾರ, ಆಗಸ್ಟ್ 10, 2022
24 °C
ಮಳೆ–ಗಾಳಿಯಿಂದ ಕುರಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ

ಕೋವಿಡ್‌ ಕಾರಣಕ್ಕಲ್ಲ... ಜೀವನಕ್ಕಾಗಿ ಕುರಿಗಾಹಿಗಳ ವಲಸೆ!

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ‘ಕುರಿ ಸಾಕಿ ಕುಬೇರರಾಗಿ’ ಎನ್ನುವ ಮಾತೊಂದಿದೆ. ಆದರೆ, ಕುಬೇರರಾಗಲು ಕುರಿಗಳ ಪಾಲನೆ ಪೋಷಣೆಗಾಗಿ ಪಡುವ ಕಷ್ಟನಷ್ಟ, ನೋವುಗಳು ಈ ಕುರಿಗಾಹಿ ಕುಟುಂಬಗಳನ್ನು ಕಂಡಾಗ ಸ್ಪಷ್ಟವಾಗುತ್ತದೆ. ವರ್ಷದ ಕನಿಷ್ಠ ಆರು ತಿಂಗಳು ಅಲೆಮಾರಿ ಬದುಕು ನಡೆಸುವ ಈ ಕುಟುಂಬಗಳು ಪ್ರಸಕ್ತ ವರ್ಷ ಕೊರೊನಾ ಆತಂಕದ ಮಧ್ಯೆಯೂ ವಲಸೆ ಹೋಗುತ್ತಿವೆ.

ತಾಲ್ಲೂಕಿನ ಬಹುತೇಕ ಕುರಿಗಾಹಿಗಳು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕುರಿಮರಿಗಳೊಂದಿಗೆ ಸಂಸಾರಸಮೇತರಾಗಿ ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳತ್ತ ವಲಸೆ ಹೋಗುತ್ತಿದ್ದಾರೆ. ಕುರಿಗಳನ್ನು ತಮ್ಮ ಪಾಲಿನ ‘ಲಕ್ಷ್ಮಿ’ ಎಂದೇ ಪರಿಗಣಿಸುವ ಹಾಲುಮತ ಸಮಾಜದವರು ವರ್ಷದ ನಾಲ್ಕಾರು ತಿಂಗಳು ಅಲೆಮಾರಿಗಳಂತೆ ತಮ್ಮ ಕುರಿಗಳೊಂದಿಗೆ ವಲಸೆ ಹೋಗುವುದು ಈ ಭಾಗದಲ್ಲಿ ಸಾಮಾನ್ಯವಾಗಿದೆ.

ಈ ಭಾಗದ ಚಿಕ್ಕಳವಾಳ ಅಕ್ಕೋಳ, ಸಿದ್ನಾಳ, ಹುನ್ನರಗಿ, ವಾಳಕಿ, ಜೋಡಕುರಳಿ, ಕೇರೂರ, ಹಿರೇಕೋಡಿ, ಖಡಕಲಾಟ, ನವಲಿಹಾಳ, ಬೇಡಕಿಹಾಳ, ಕಾರದಗಾ ಮುಂತಾದ ಗ್ರಾಮಗಳ ನೂರಾರು ಜನ ಕುರಿಗಾರರು ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ವಲಸೆ ಹೋಗುವ ಪರಿಪಾಠವಿದೆ. ನಾಲ್ಕಾರು ತಿಂಗಳು ಊರೂರು ಸುತ್ತಿ ಕುರಿಗಳನ್ನು ಮೇಯಿಸಿಕೊಂಡು ಮಳೆಗಾಲ ಮುಗಿದ ನಂತರ ಸ್ವಗ್ರಾಮಗಳತ್ತ ಹೆಜ್ಜೆ ಹಾಕುತ್ತಾರೆ.

ದೇವರಲ್ಲಿ ಅಪಾರವಾದ ಶ್ರದ್ಧೆ ಮತ್ತು ನಂಬಿಕೆ ಹೊಂದಿರುವ ಹಾಲುಮತ ಕುಟುಂಬಗಳು ಕುರಿಗಳೊಂದಿಗೆ ಊರು ಬಿಡುವ ಮುನ್ನ ಆರಾಧ್ಯದೇವರಿಗೆ ‘ಕೌಲ’ ಹಚ್ಚಿ ದೇವರ ಅಪ್ಪಣೆ ಪಡೆದುಕೊಂಡೇ ಹೋಗುವ ಸಂಪ್ರದಾಯವಿದೆ. ದೇವರು ಕೌಲ (ಸೂಚಿಸಿದ ದಾರಿ) ನೀಡಿದ ಭಾಗಕ್ಕೇ ಕುರಿಗಳನ್ನು ತಗೆದುಕೊಂಡು ಹೋಗಲಾಗುತ್ತದೆ.

‘ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಈ ಭಾಗದಲ್ಲಿ ಮಳೆ ಜೋರಾಗಿ ಸುರಿಯುತ್ತದೆ. ಇಂತಹ ಮಳೆ–ಗಾಳಿಯಿಂದ ಕುರಿಗಳನ್ನು ರಕ್ಷಿಸುವುದು ಕಷ್ಟಕರವಾಗುತ್ತದೆ. ವಿಜಯಪುರ, ಬಾಗಲಕೋಟೆ ಕಡೆಗಳಲ್ಲಿ ಮಳೆ ಸ್ವಲ್ಪ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಬಿಳಿಜೋಳ ರಾಶಿಗಳು ಮುಗಿದು ಕುರಿಗಳಿಗೆ ಮೇಯಲು ಮೇವು ಸಿಗುತ್ತದೆ. ಅದಕ್ಕಾಗಿ ತಾವು ಸುಮಾರು ನಾಲ್ಕು ತಿಂಗಳು ಕುರಿಗಳನ್ನು ಹೊಡೆದುಕೊಂಡು ಅತ್ತ ಹೋಗುತ್ತೇವೆ’ ಎಂದು ಕಾರದಗಾ ಗ್ರಾಮದ ಬಾಬಾಸಾಹೇಬ್ ಸಾವಂತ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು