ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಾಮಾಜಿಕ ಕಳಕಳಿ ಹೊಂದಿದ್ದ ಶಿವಶರಣೆಯರು’

Published 8 ಜೂನ್ 2024, 15:04 IST
Last Updated 8 ಜೂನ್ 2024, 15:04 IST
ಅಕ್ಷರ ಗಾತ್ರ

ಮೂಡಲಗಿ: ‘12ನೇ ಶತಮಾನದಲ್ಲಿಯ ಶಿವಶರಣೆಯರು ತಾತ್ವಿಕ ಚಿಂತನೆಯ ಜೊತೆಗೆ ವೈಯಕ್ತಿಕ ನೆಲೆಯಲ್ಲಿ ಮತ್ತು ಸಮುದಾಯದ ಧ್ವನಿಯಾಗಿ ಲೌಕಿಕದೊಂದಿಗೆ ಪರದೈವದಲ್ಲಿ ಅಂತರಗತವಾಗುವ ಒಲವು ಮತ್ತು ನಿಲುವು ಆಗಿತ್ತು’ ಎಂದು ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಹೇಳಿದರು.

ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭವ ಚಿಂತನ ಗೋಷ್ಠಿಯಲ್ಲಿ ‘ಶಿವಶರಣೆಯರ ಒಲವು– ನಿಲುವು’ ವಿಷಯ ಕುರಿತು ಮಾತನಾಡಿದರು.

‘ಶಿವಶರಣೆಯರಾದ ರಾಯಮ್ಮ, ಅಕ್ಕಮ್ಮ, ಸತ್ಯಕ್ಕ, ಸಂಕವ್ವೆ, ಕಾಳವ್ವೆಯರಂಥ ಕೆಳವರ್ಗದ ಶರಣೆಯರು ಸಮಾಜವನ್ನು ಮುಖಾಮುಖಿಯಾಗಿ ಎದುರಿಸಿದರು. ಕಾಯಕ, ದಾಸೋಹ ತತ್ವಕ್ಕೆ ವ್ರತನಿಷ್ಠರಾಗಿ ಅನುಭಾವ, ಸಮಾನತೆಗೆ ಆದ್ಯತೆ ನೀಡಿ ಅದಕ್ಕೆ ಬದ್ಧರಾಗಿ ಹೋರಾಟ ಮತ್ತು ಬಂಡಾಯದ ಧ್ವನಿಯಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು’ ಎಂದರು.

33 ಶರಣೆಯರು 1,104 ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಮತ್ತು ಸಮಾಜಕ್ಕೆ ಬಹದೊಡ್ಡ ಕಾಣಿಕೆಯನ್ನು ನೀಡಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದ ಶಿವಶರಣೆಯರು ವೈರಾಗ್ಯದ ನಿಲುವು ಹೊಂದಿದ್ದು, ಆತ್ಮಸಾಕ್ಷಾತ್ಕಾರ ಹೊಂದುವುದು ಅವರ ಜೀವನದ ಧ್ಯೇಯವಾಗಿತ್ತು’ ಎಂದರು.

ಸವದತ್ತಿ ವಲಯ ಅರಣ್ಯ ಅಧಿಕಾರಿ ಶಂಕರ ಅಂತರಗಟ್ಟಿ, ಭಾರತೀಯ ಸೇನೆಯ ಸುಭೇದಾರ ರಾಯಪ್ಪ ಬಡಾಯಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಅಪ್ಪಾಸಾಹೇಬ ಕುರುಬರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ದುರದುಂಡಿಯ ದುರದುಂಡೀಶ್ವರ ತೋಟದ ಭಕ್ತರು ದಾಸೋಹ ಸೇವೆ ಮಾಡಿದರು. ವಿ.ಕೆ. ನಾಯಿಕ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT