ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಂಗಿ: ನವ ಅವತಾರಗಳಲ್ಲೂ ಕಾಳಿ ದರ್ಶನ

ಪುರಾಣ ಪ್ರಸಿದ್ಧ ಶಿರಸಂಗಿ ಕ್ಷೇತ್ರ, ಅಸುರ ಸಂಹಾರಿಣಿಯ ಸನ್ನಿಧಿಯಲ್ಲಿ ಸಡಗರ
Last Updated 29 ಸೆಪ್ಟೆಂಬರ್ 2022, 10:47 IST
ಅಕ್ಷರ ಗಾತ್ರ

ಶಿರಸಂಗಿ: ರಾಜ್ಯದಲ್ಲಿರುವ ಪೌರಾಣಿಕ ಶಕ್ತಿ ಕೇಂದ್ರಗಳಲ್ಲಿ ಸವದತ್ತಿ ತಾಲ್ಲೂಕಿನ ಶಿರಸಂಗಿ ಕೂಡ ಒಂದು. ರಾಕ್ಷಸ ಸಂಹಾರಿಣಿ ಕಾಳಿಕಾ ಮಾತೆಯ ಸ್ವಯಂಭು ಮೂರ್ತಿ ಇರುವ ರಾಜ್ಯದ ಏಕಮಾತ್ರ ದೇವಸ್ಥಾನವಿದು. ತೇಜೋಮಯವಾದ ದೇವಿಮೂರ್ತಿಗೆ ನವರಾತ್ರಿ ಅಂಗವಾಗಿ ನವ ಅಲಂಕಾರಗಳನ್ನೂ ಮಾಡಲಾಗುತ್ತಿದೆ.

ಶಿರಸಂಗಿ ಊರಿನ ಪುರಾಣ ಹಾಗೂ ಇತಿಹಾಸಗಳೇ ರೋಚಕ. ಶೃಂಗಋಷಿ ಇಲ್ಲಿ ತಪಸ್ಸು ಮಾಡುತ್ತಿದ್ದರು. ಶೃಂಗ ಎಂದರೆ ತಲೆಯಲ್ಲಿ ಒಂದು ಕೊಂಬು ಹೊಂದಿದವರು ಎಂಬ ಅರ್ಥವಿದೆ. ಅವರ ಹೆಸರನ್ನೇ ಆಧರಿಸಿ ಶಿರಸಂಗಿ ಎಂದು ಈ ಕ್ಷೇತ್ರವನ್ನು ಕರೆಯಲಾಗಿದೆ ಎನ್ನುತ್ತಾರೆ ಇತಿಹಾಸಕಾರರು.

ಶೃಂಗಋಷಿ ಲೋಕ ಕಲ್ಯಾಣಕ್ಕಾಗಿ ಯಜ್ಞ, ಯಾಗಾದಿಗಳನ್ನು ಮಾಡುತ್ತಿದ್ದರು. ಅವುಗಳನ್ನು ಹಾಳು ಮಾಡಲು ರಾಕ್ಷಸರು ದಾಳಿ ಇಟ್ಟರು. ಅವರ ಸಂಹಾರಕ್ಕಾಗಿ ಋಷಿ– ಮುನಿಗಳು ಕಾಳಿಕಾದೇವಿ ಮೊರೆ ಹೋದರು. ಅವರ ತಪಸ್ಸಿಗೆ ಮೆಚ್ಚಿದ ಕಾಳಿಯು ಎಟ್ಟಾಸುರ, ಬೆಟ್ಟಾಸುರ, ನಲುಂದ, ನರುಂದ, ಚಿಕ್ಕುಂಬ, ಹಿರೇಕುಂಬ ಎಂಬ ಆರು ರಾಕ್ಷಸರನ್ನು ಸಂಹಾರ ಮಾಡಿದಳು.

ಈಗ ಇರುವ ಎಡಸೂರ (ಎಟ್ಟಾಸುರ), ಬೆಡಸೂರ (ಬೆಟ್ಟಾಸುರ), ನವಲಗುಂದ (ನಲುಂದ), ನರಗುಂದ (ನರುಂದ), ಚಿಕ್ಕುಂಬಿ (ಚಿಕ್ಕುಂಬ), ಹಿರೇಕುಂಬಿ (ಹಿರೇಕುಂಬ) ಎಂಬ ಊರುಗಳ ಹೆಸರುಗಳು ಇದೇ ಐತಿಹ್ಯದಲ್ಲಿ ಬಂದಿವೆ. ಆರು ಅಸುರರೇ ಈಗಿರುವ ಆರು ಬೆಟ್ಟಗಳಾದರು ಎಂಬುದು ಪ್ರತೀತಿ ಎಂಬ ಮಾಹಿತಿಯನ್ನು ದೇವಸ್ಥಾನದವರು ನೀಡುತ್ತಾರೆ.

ರಾಕ್ಷಸ ಸಂಹಾರ ಮಾಡಿದ ಖಡ್ಗವನ್ನು ದೇವಿ ಬೆಟ್ಟದಲ್ಲಿ ಹೊಂಡದಲ್ಲಿ ತೊಳೆದಳು. ಈಗ ಆ ಸ್ಥಳವನ್ನು ಖಡ್ಗತೀರ್ಥ ಎಂದು ಕರೆಯಲಾಗುತ್ತದೆ. ಪ್ರತಿ ದಿನ ಅಲ್ಲಿಂದಲೇ ತೀರ್ಥ ತಂದು ಪೂಜೆ ಮಾಡುವುದು ವಾಡಿಕೆ. ಋಷಿ ಗಳು ತಪಸ್ಸು ಮಾಡಿದ ಜಾಗ, ದೇವಿ ಹೆಜ್ಜೆ ಇಟ್ಟ ಸ್ಥಳ ಎಂದು ಕೆಲವನ್ನು ಗುರುತಿಸಲಾಗಿದೆ.

ಮಂದಿರದಲ್ಲಿ ಶಿಲಾ ಶಾಸನವಿದ್ದು, ಸಂಸ್ಕೃತದಲ್ಲಿ ದೇವಿಯ ಈ ಮಹಿಮೆಯನ್ನು ಕೆತ್ತಲಾಗಿದೆ. ಶಾಸನವು ಈಗಲೂ ಸುಭದ್ರವಾಗಿದ್ದು ಓದಲು ಸಿಗುತ್ತದೆ.

ಇತಿಹಾಸವೇನು?: ಶಿರಸಂಗಿ ಕಾಳಿಕಾ ದೇವಸ್ಥಾನವನ್ನು ಕ್ರಿ.ಶ. 8ನೇ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಿದ ಬಗ್ಗೆ ದಾಖಲೆಗಳು ಹೇಳುತ್ತವೆ. ಅಂದರೆ ಅದಕ್ಕೂ ನೂರಾರು ವರ್ಷಗಳ ಮುಂಚೆಯೇ ಈ ದೇವಸ್ಥಾನ ನಿರ್ಮಿಸಲಾಗಿತ್ತು. ಜೀರ್ಣೋದ್ಧಾರ ಮಾಡಿದ ರಾಜ ಯಾರು ಹಾಗೂ ಅದಕ್ಕೂ ಮುಂಚೆ ಎಷ್ಟು ವರ್ಷಗಳ ಹಿಂದೆ ಇದನ್ನು ಕಟ್ಟಲಾಗಿತ್ತು ಎಂಬ ಬಗ್ಗೆ ಉಲ್ಲೇಖಗಳು ಸಿಕ್ಕಿಲ್ಲ.

ಇತಿಹಾಸಕಾರ ಎಸ್.ಕೆ. ಜೋಶಿ ಎನ್ನುವವರು ಈ ದೇವಸ್ಥಾನದ ಪುರಾಣೈತಿಹಾಸಿಕ ಅಧ್ಯಯನ ನಡೆಸಿದ್ದಾರೆ. ಅವರು ಬರೆದ ಪುಸ್ತಕದಲ್ಲಿ ಸಂ‍ಪೂರ್ಣ ದಾಖಲೆಗಳ ಸಮೇತ ಮಾಹಿತಿ ಇದೆ.

ಯುಗಾದಿ ಹಾಗೂ ನವರಾತ್ರಿ ವೇಳೆ ದಕ್ಷಿಣ ಭಾರತದಿಂದ ಅಪಾರ ಭಕ್ತರು ಬರುತ್ತಾರೆ. ಅನ್ನದ ಉಂಡಿ ಪ್ರಸಾದವನ್ನು ಗಾಳಿಯಲ್ಲಿ ತೂರುವುದು ಇಲ್ಲಿನ ವಿಶೇಷ. ಇಲ್ಲಿನ ದೇವತೆಯೇ ಕಂಚಿ ಕಾಮಾಕ್ಷಿಯಲ್ಲಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ.

*

ನವರಾತ್ರಿ ವಿಶೇಷ ಪೂಜೆ

ಕ್ಷೇತ್ರದ ಅಧಿದೇವತೆ ಕಾಳಿಕಾದೇವಿಯ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಗುರುವಾರ (ಸೆ. 29) ಕೂಡ ವಿಶೇಷ ಪೂಜೆ ನಡೆಯಲಿದೆ. ದೇವಿಯು ಹಳದಿ ವರ್ಣದಲ್ಲಿ ಕಂಗೊಳಿಸುತ್ತಾಳೆ.

ಕೂಷ್ಮಾಂಡ ಅವತಾರದ ಪೂಜೆಯು ವಿಶ್ವನಾಥ ಆಚಾರ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ವಿಧಾನ ಪರಿಷತ್‌ ಸದಸ್ಯ, ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳದ್ದಾರೆ.

ಧರ್ಮದರ್ಶಿಗಳಾದ ಪ್ರಕಾಶ ಆಚಾರ್ಯ ಶಹಾಪೂರಕರ, ಮೌನೇಶ ಆಚಾರ್ಯ ಪೂಜಾರ, ನಾಗೇಂದ್ರ ಆಚಾರ್ಯ ಗಂಗನೈನವರ, ಮೌನೇಶ ಆಚಾರ್ಯ ಮೂಕಿ ಅವರು ಪೂಜಾ ಕಾರ್ಯ ನಿರ್ವಹಿಸುವರು.

*

ಸುವರ್ಣ ಸಾಲಿಗ್ರಾಮದ ಮೂರ್ತಿ

ಕಾಳಿಕಾದೇವಿಯು ವಿಶ್ವಕರ್ಮರ ಕುಲದೇವತೆ. ಇಲ್ಲಿರುವ ಮೂರ್ತಿಯು ಪೀಠವನ್ನು ಬಿಟ್ಟು ಏಳೂವರೆ ಅಡಿ ಎತ್ತರವಿದೆ. ಮೈಮೇಲೆ ಸುವರ್ಣ ರೇಖೆಗಳಿರುವ ಕಾರಣ ಸುವರ್ಣ ಸಾಲಿಗ್ರಾಮ ಮೂರ್ತಿ ಎನ್ನುತ್ತಾರೆ. ಹಾಗಾಗಿ, ಇತಿಹಾಸಕಾರರು ಈ ದೇವಸ್ಥಾನವನ್ನು ‘ಗೋಲ್ಡ್‌ಸ್ಮಿತ್‌ ಟೆಂಪಲ್‌’ ಎಂದು ಬರೆದಿದ್ದಾರೆ.

‘ಮೂರ್ತಿಯ ಮೇಲೆ ಸುರಿಯುವ ಬಹುಪಾಲು ಹಾಲು ಮೂರ್ತಿಯ ಒಳಗೇ ಇಂಗಿ ಹೋಗುವುದು ಇಲ್ಲಿನ ಚಮತ್ಕಾರ. ಶೃಂಗಋಷಿ ನಮ್ಮ ಪೂರ್ವಜರು. ಆನುವಂಶಿಕವಾಗಿ ನಾವು ಟ್ರಸ್ಟ್‌ ನಡೆಸಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ವಿಶ್ವನಾಥ ಆಚಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT