ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಮ್ಮೆಗಳಿಗೂ ಬ್ಯೂಟಿ ಪಾರ್ಲರ್‌!

Published : 22 ಸೆಪ್ಟೆಂಬರ್ 2024, 0:15 IST
Last Updated : 22 ಸೆಪ್ಟೆಂಬರ್ 2024, 0:15 IST
ಫಾಲೋ ಮಾಡಿ
Comments

ಇಲ್ಲೊಂದು ಬ್ಯೂಟಿ ಪಾರ್ಲರ್‌ ಇದೆ. ಒಳಗೆ ಹೋದ ತಕ್ಷಣ ಘಮಘಮ ಎನ್ನುವ ಸೋಪು ಹಾಕಿ ಸ್ನಾನ ಮಾಡಿಸುತ್ತಾರೆ. ಅನಗತ್ಯ ಮೈಗೂದಲು ತೆಗೆಯುತ್ತಾರೆ. ಮೈತುಂಬ ಎಣ್ಣೆ ಹಚ್ಚಿ ಮಾಲೀಶ್‌ ಮಾಡುತ್ತಾರೆ. ಕಾಲುಗಳಿಗೆ ಗೆಜ್ಜೆ ಕಟ್ಟಿ, ಕಿವಿಯೋಲೆ ಹಾಕಿ ಅಲಂಕಾರ ಮಾಡುತ್ತಾರೆ. ಇಷ್ಟಾದ ಮೇಲೆ ವಯ್ಯಾರಿ ಬಿಂಕ ಬಿನ್ನಾಣದಿಂದ ಹೊರಬರುತ್ತಾಳೆ.

ಅರೆರೇ! ಇದೇನು ಮದುವಣಿಗಿತ್ತಿಯನ್ನು ತಯಾರು ಮಾಡುತ್ತಿದ್ದಾರೆಯೇ ಎಂದು ಕೇಳಬೇಡಿ. ಇಲ್ಲಿ ಸುಂದರಿಯಂತೆ ಅಲಂಕಾರಗೊಳ್ಳುತ್ತಿರುವುದು ಎಮ್ಮೆ! ಹೌದು, ಇದು ಎಮ್ಮೆಗಳ ಪಾರ್ಲರ್‌..!

ಮಹಾರಾಷ್ಟ್ರದ ಕೊಲ್ಹಾಪುರದ ವಿಜಯ ಸೂರ್ಯವಂಶಿ ಇಂಥ ವಿಶಿಷ್ಟ, ವಿನೂತನ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಕೊಲ್ಹಾಪುರ ಮಹಾನಗರ ಪಾಲಿಕೆ ಸದಸ್ಯರೂ ಆಗಿರುವ ಅವರು, ಪಾಲಿಕೆ ಅನುದಾನದಲ್ಲೇ ಈ ಪಾರ್ಲರ್‌ ತೆರೆದಿದ್ದಾರೆ. 

ಪಾರ್ಲರ್‌ ಒಳಗೆ ಬಂದರೆ ಸಾಕು, ಎಮ್ಮೆಗಳಿಗೆ ಉಚಿತವಾಗಿ ಅಲಂಕಾರ ಮಾಡಿಸಿಕೊಂಡು ‘ಯಾರೇ ಕೂಗಾಡಲಿ, ಊರೇ ಹೋರಾಡಲಿ, ಎಮ್ಮೆ ನಿನಗೆ ಸಾಟಿ ಇಲ್ಲ, ನಿನ್ನ ನೆಮ್ಮದಿಗೆ ಭಂಗವಿಲ್ಲ...’ ಎಂದು ಹಾಡುತ್ತ ಹೋಗಬಹುದು.

ಹೇಳಿ ಕೇಳಿ ಕೊಲ್ಹಾಪುರ ಗೌಳಿಗರ ಊರು. ಇಡೀ ನಗರದಲ್ಲಿ ಎಲ್ಲಿ ನೋಡಿದರೂ ಎಮ್ಮೆಗಳ ಹಿಂಡೇ ಕಾಣಿಸುತ್ತದೆ. ಇಲ್ಲಿ ಉದ್ಯೋಗಿ, ವ್ಯಾಪಾರಿಗಳಂತೆ ಗೌಳಿಗರ ಸಂಖ್ಯೆಯೂ ದೊಡ್ಡದಿದೆ. ಎಮ್ಮೆಗಳು ಮೈ ಗಲೀಜು ಮಾಡಿಕೊಂಡಾಗ ನದಿ, ಕೆರೆ–ಕಟ್ಟೆಗಳಲ್ಲಿ ಅವುಗಳ ಮೈತೊಳೆದು ಸ್ವಚ್ಛ ಮಾಡಲಾಗುತ್ತಿತ್ತು. ಇದರಿಂದ ಜೀವಜಲ ಕಲುಷಿತವಾಗುತ್ತಿತ್ತು. ಈ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಬೇಕು. ಎಮ್ಮೆಗಳನ್ನು ನೋಡಿ ಯಾರೂ ಅಸಹ್ಯಪಟ್ಟುಕೊಳ್ಳದಂತೆ ಏನಾದರೂ ಮಾಡಬೇಕು ಎಂಬ ಆಲೋಚನೆ ವಿಜಯ ಅವರಲ್ಲಿ ಬಂದಿತು. ಅದರ ಪ್ರತಿಫಲವೇ ಈ ಪಾರ್ಲರ್‌.

‘ಎಮ್ಮೆಗಳಿಗೂ ಪಾರ್ಲರ್‌ ತೆಗೆದಿದ್ದಾರಾ?’, ‘ಒಂದು ದೊಡ್ಡ ಕಟ್ಟೆಕಟ್ಟಿ, ಪ್ರತಿದಿನ ಎಮ್ಮೆಗಳಿಗೆ ಮೈತೊಳೆದರೆ, ಕೂದಲು ಕತ್ತರಿಸಿದರೆ ಅದಕ್ಕೆ ಪಾರ್ಲರ್‌ ಅಂತಾರೆಯೇ’... ಹೀಗೆ ನಾನಾ ರೀತಿಯಲ್ಲಿ ಜನರು ಗೇಲಿ ಮಾಡಿದ್ದುಂಟು. ಆದರೆ, ಇಂಥ ವ್ಯಂಗ್ಯದ ಮಾತುಗಳಿಗೆ ಕಿವಿಗೊಡದ ವಿಜಯ, ಇಂಥದ್ದೊಂದು ವಿಶಿಷ್ಟ ಯೋಜನೆ ಕಾರ್ಯಗತಗೊಳಿಸಿದ್ದಾರೆ. 

ತಮ್ಮ ವಾರ್ಡಿಗೆ ಬಂದ ₹14.95 ಲಕ್ಷ ವಿಶೇಷ ಅನುದಾನದಲ್ಲಿ ವಿಜಯ ಅವರು ಎಮ್ಮೆಗಳ ಪಾರ್ಲರ್‌ ತೆರೆದಿದ್ದಾರೆ. 2019ರಲ್ಲಿ ಆರಂಭಗೊಂಡ ಈ ಪಾರ್ಲರ್‌, ವರ್ಷದಿಂದ ವರ್ಷಕ್ಕೆ ‘ಎಮ್ಮೆಪ್ರಿಯ’ವಾಗುತ್ತಲೇ ಇದೆ. ಈಗಂತೂ ಪ್ರತಿದಿನ ಇಲ್ಲಿ ಎಮ್ಮೆಗಳು ಸಾಲುಗಟ್ಟಿ ನಿಲ್ಲುತ್ತಿವೆ. ಪಾಲಿಕೆ ಸದಸ್ಯರೊಬ್ಬರ ವಿಭಿನ್ನ ಆಲೋಚನೆ ಗೌಳಿ ಸಮುದಾಯಕ್ಕೆ ವರವಾಗಿದೆ. ಚುಚ್ಚುಮದ್ದು ಹಾಕಲು, ಔಷಧೋಪಚಾರ ಮಾಡಲು, ಚಿಕಿತ್ಸೆಗೆ ಕೂಡ ಈ ಪಾರ್ಲರ್‌ ಬಳಕೆಯಾಗುತ್ತಿದೆ.

‘ನಾನು ಹದಿನೈದು ಎಮ್ಮೆಗಳನ್ನು ಸಾಕಿದ್ದೇನೆ. ಅವು ಆಗಾಗ ಅನಾರೋಗ್ಯಕ್ಕೆ ಈಡಾಗುತ್ತಿದ್ದವು. ಪಾರ್ಲರ್‌ನಲ್ಲಿ ಮೈ ತೊಳೆಯಿಸಿ, ವಾರಕ್ಕೊಮ್ಮೆ ಎಣ್ಣೆಯಿಂದ ಮಾಲೀಶ್‌ ಮಾಡಿಸುತ್ತೇನೆ. ಈಗ ಅವುಗಳ ಆರೋಗ್ಯ ಚೆನ್ನಾಗಿದೆ. ಹೆಚ್ಚು ಹಾಲು ಕೊಡುತ್ತಿವೆ. ಪಾರ್ಲರ್‌ನಿಂದ ಹೊರಬಂದ ಎಮ್ಮೆಗಳು ಲಕಲಕ ಅಂಥ ಲಕ್ಷಣವಾಗಿ ಕಾಣುತ್ತವೆ. ಅದನ್ನು ನೋಡುವುದೇ ಖುಷಿ’ ಎಂದರು ಮನೋಜ್‌ ಮಾಳಿ.

ಮಂಗೇಶಕರ್‌ ನಗರದಿಂದ ಎರಡು ಕಿಲೊಮೀಟರ್‌ ದೂರದಲ್ಲಿ ಕೋಟಿತೀರ್ಥ ಕೆರೆ ಇದೆ. ಮೊದಲು ಅಲ್ಲಿ ಮೈ ತೊಳೆಯುತ್ತಿದ್ದರು. ಸಂಚಾರ ದಟ್ಟಣೆಯಿಂದ ಎಮ್ಮೆಗಳನ್ನು ಸಂಬಾಳಿಸುವುದು ಸವಾಲಾಗಿತ್ತು. ವಾಹನ ಸವಾರರಿಗೂ ಕಿರಿಕಿರಿ ಆಗುತ್ತಿತ್ತು. ಅಲ್ಲದೇ ಕೆರೆ ನೀರು ಕಲುಷಿತಗೊಂಡಿತ್ತು. ಅದೇ ನೀರಿನಲ್ಲಿ ಪದೇಪದೇ ಮೈ ತೊಳೆಯುವುದರಿಂದ ಎಮ್ಮೆಗಳು ಮತ್ತು ಗೌಳಿಗರ ಆರೋಗ್ಯ ಹದಗೆಡುತ್ತಿತ್ತು. ಪಾರ್ಲರ್‌ನಿಂದ ಈ ಸಮಸ್ಯೆ ತಪ್ಪಿದೆ ಎಂದು ಗೌಳಿಗರು ಖುಷಿಯಿಂದ ಹೇಳಿದರು.

‘ಹತ್ತು ಎಮ್ಮೆಗಳಿವೆ. ಮೊದಲು ಎಲ್ಲ ಸೇರಿ ನಲವತ್ತು ಲೀಟರ್‌ ಹಾಲು ಕೊಡುತ್ತಿದ್ದವು. ‍‍ಪಾರ್ಲರ್‌ ಆರಂಭದ ನಂತರ ಉತ್ತಮ ಆರೈಕೆ ಸಿಗುತ್ತಿದೆ. ಈಗ ಹಾಲಿನ ಪ್ರಮಾಣ ಐವತ್ತು ಲೀಟರ್‌ಗೆ ಹೆಚ್ಚಿದೆ’ ಎಂದರು ರವೀಂದ್ರ ಜಾಧವ.

ಕೊಲ್ಹಾಪುರದ ಮಂಗೇಶಕರ್‌ ನಗರದಲ್ಲಿ ಶತಮಾನದ ಹಿಂದಿನ ಬಾವಿ ಇದೆ. ನಿರುಪಯುಕ್ತವಾಗಿದ್ದ ಈ ಬಾವಿಯಿಂದ ಪಾರ್ಲರ್‌ಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸುಸಜ್ಜಿತ ಕಟ್ಟಡದಲ್ಲಿ ಎರಡು ಬದಿಗೆ ಎಮ್ಮೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಪ್ರತಿದಿನ ಬೆಳಿಗ್ಗೆ 6.30ರಿಂದ 8.30ರವರೆಗೆ ಮತ್ತು ಸಂಜೆ 4.30ರಿಂದ 6.30ರವರೆಗೆ 50ಕ್ಕೂ ಅಧಿಕ ಎಮ್ಮೆಗಳಿಗೆ ಇಲ್ಲಿ ಮಜ್ಜನ, ಮಸಾಜ್‌ ಮಾಡಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಕ್ಷೌರಿಕರೇ ಇಲ್ಲಿಗೆ ಬಂದು, ಕೂದಲು ಕತ್ತರಿಸಿ ಎಮ್ಮೆಗಳ ಅಂದ ಹೆಚ್ಚಿಸುತ್ತಾರೆ. ನಿಯಮಿತವಾಗಿ ಪಶುವೈದ್ಯರು ಬಂದು ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿ ಲಸಿಕೆ ಹಾಕುತ್ತಾರೆ. ಮೈ ತೊಳೆಯಲು ಬಳಕೆಯಾದ ನೀರು ಹಾಗೂ ಎಮ್ಮೆಗಳು ಹಾಕಿದ ಸಗಣಿ, ಗಂಜಲದಿಂದ ಗೊಬ್ಬರ ತಯಾರು ಮಾಡಲಾಗುತ್ತದೆ. ಅದನ್ನು ಪಾಲಿಕೆಯ ಉದ್ಯಾನಗಳಿಗೆ ಬಳಸಲಾಗುತ್ತದೆ.

ಇಂಥದ್ದೇ ಪಾರ್ಲರ್‌ ಅನ್ನು ತಮ್ಮ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರೆಯಬೇಕೆಂಬ ಉದ್ದೇಶದಿಂದ ಪುಣೆ, ಬೆಳಗಾವಿ, ಮತ್ತಿತರ ಕಡೆಗಳ ಜನಪ್ರತಿನಿಧಿಗಳ ದಂಡು ಇಲ್ಲಿಗೆ ಬಂದು ವಿವರ ಪಡೆದುಕೊಂಡು ಹೋಗಿವೆ. ಕೊಲ್ಹಾಪುರ ಪಾಲಿಕೆ ವ್ಯಾಪ್ತಿಯಲ್ಲೂ ಐದಾರು ಕಡೆ ಎಮ್ಮೆಗಳ ಪಾರ್ಲರ್‌ ತೆರೆಯಲು ಯೋಜನೆ ಸಿದ್ಧವಾಗಿದೆ.

ಯಾರಿಗಾದರೂ ‘ಎಮ್ಮೆ ತರ ಗಲೀಜು’ ಅನ್ನಬೇಡಿ. ಎಮ್ಮೆಗಳೇನಾದರೂ ಈ ಮಾತನ್ನು ಕೇಳಿಸಿಕೊಂಡರೆ, ತಮಗೂ ಒಂದು ಬ್ಯೂಟಿ ಪಾರ್ಲರ್‌ ಬೇಕು ಎಂದು ಮುಷ್ಕರ ಹೂಡಿಯಾವು!

ದೂದ್‌ ಕಟ್ಟಾ

ಕೊಲ್ಹಾಪುರ ನಗರ ಪಂಚಗಂಗಾ ನದಿ ದಡದಲ್ಲಿದೆ. ಎಮ್ಮೆಗಳಿಗೆ ಭರಪೂರ ಪೌಷ್ಠಿಕ ಮೇವು ಸಿಗುತ್ತದೆ. ಹೀಗಾಗಿ ಇಲ್ಲಿನ ಎಮ್ಮೆಗಳು ಗಟ್ಟಿಮುಟ್ಟು. ಅವು ನೀಡುವ ಹಾಲು ಸಹ ಗಟ್ಟಿ. ಮಹಾರಾಷ್ಟ್ರದ ಪುಣೆ, ಪಂಜಾಬ್‌, ದೆಹಲಿ, ಹರಿಯಾಣದಿಂದ ಬರುವ ಪೈಲ್ವಾನರಿಗೂ ಇಲ್ಲಿನ ಎಮ್ಮೆಗಳ ಹಾಲು ಬಲುಇಷ್ಟ.

ಈ ನಗರದಲ್ಲಿ ಹಲವು ದೂದ್‌ ಕಟ್ಟಾ (ಹಾಲಿನ ಕಟ್ಟೆ)ಗಳಿವೆ. ಎಮ್ಮೆಗಳನ್ನು ಅಲ್ಲಿಗೆ ಕರೆತಂದು ಹಾಲು ಹಿಂಡಿ ತಾಜಾವಾಗಿಯೇ ಕೊಡುವುದು ರೂಢಿ.

ಕೊಲ್ಹಾಪುರ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿನ ರೈತರು ಕೃಷಿಯೊಂದಿಗೆ ಹೈನುಗಾರಿಕೆಗೆ ಒತ್ತು ಕೊಡುತ್ತ ಬಂದಿದ್ದಾರೆ. ರೈತರು ಹಾಗೂ ಗೌಳಿಗರು ಹಾಲು ಮಾರಾಟ ಮಾಡಿ, ಅದರಲ್ಲಿ ಬರುವ ಆದಾಯದಲ್ಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಪ್ರತಿ ಊರಿನಲ್ಲೂ ಹೈನುಗಾರಿಕೆ ಖ್ಯಾತಿ ಪಡೆದಿದೆ. ಇಲ್ಲಿ ಅಂದಾಜು ನಾಲ್ಕು ಲಕ್ಷದಷ್ಟು ಎಮ್ಮೆಗಳಿದ್ದು, 20 ಲಕ್ಷ ಲೀಟರ್‌ ಹಾಲು ಪ್ರತಿದಿನ ಉತ್ಪಾದನೆ ಆಗುತ್ತದೆ. ಎಂಟರಿಂದ ಹತ್ತು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ.

ಎಮ್ಮೆಗಳಿಗೂ ಸೌಂದರ್ಯ ಸ್ಪರ್ಧೆ

ದೀಪಾವಳಿ ಹಬ್ಬ ಬಂತೆಂದರೆ ಗೌಳಿಗರಿಗೆ ಎಲ್ಲಿಲ್ಲದ ಸಡಗರ. ಬಲಿಪಾಡ್ಯಮಿಯಂದು ಎಮ್ಮೆಗಳಿಗೆ ಕಿವಿಯೊಲೆ, ಹಾರ, ತುರಾಯಿ ಮೊದಲಾದ ಆಲಂಕಾರಿಕ ವಸ್ತುಗಳಿಂದ ಸಿಂಗರಿಸಿ, ಇಡೀ ನಗರದಲ್ಲಿ ಓಡಿಸುತ್ತಾರೆ. ಗೌಳಿಗರು ವೇಗವಾಗಿ ಬೈಕ್‌ ಓಡಿಸಿಕೊಂಡು ಮುಂದೆ ಹೋಗುತ್ತಿದ್ದರೆ, ಎಮ್ಮೆಗಳೂ ಅಷ್ಟೇ ವೇಗವಾಗಿ ಓಡುತ್ತ ಹಿಂಬಾಲಿಸುತ್ತವೆ. ಅಲಂಕಾರ, ಓಟದಲ್ಲಿ ಗೆದ್ದ ಎಮ್ಮೆ ಮತ್ತು ಕೋಣಗಳ ಮಾಲೀಕರಿಗೆ ಬಹುಮಾನ ನೀಡಿ ಬೆನ್ನು ತಟ್ಟಲಾಗುತ್ತದೆ. ಇದರಲ್ಲಿ ಗೆಲ್ಲಲು ವರ್ಷವಿಡೀ ತಯಾರಿ ನಡೆಯುತ್ತದೆ. ಈ ಸ್ಪರ್ಧೆ ಅಷ್ಟೊಂದು ಪ್ರತಿಷ್ಠಿತ ಮತ್ತು ತುರುಸು!

ಬ್ಯೂಟಿ ಪಾರ್ಲರ್‌ನಲ್ಲಿ ಎಮ್ಮೆಗಳಿಗೆ ‘ಫೇಸ್‌ ಮಸಾಜ್‌’
ಬ್ಯೂಟಿ ಪಾರ್ಲರ್‌ನಲ್ಲಿ ಎಮ್ಮೆಗಳಿಗೆ ‘ಫೇಸ್‌ ಮಸಾಜ್‌’
ಕೊಲ್ಹಾಪುರದ ಮಂಗೇಶಕರ್‌ ನಗರದಲ್ಲಿರುವ ಎಮ್ಮೆಗಳ ಪಾರ್ಲರ್‌
ಕೊಲ್ಹಾಪುರದ ಮಂಗೇಶಕರ್‌ ನಗರದಲ್ಲಿರುವ ಎಮ್ಮೆಗಳ ಪಾರ್ಲರ್‌
ಕೊಲ್ಹಾಪುರದಲ್ಲಿ ದೀಪಾವಳಿ ಪ್ರಯಕ್ತ ಅಲಂಕೃತಗೊಂಡ ಎಮ್ಮೆ
ಕೊಲ್ಹಾಪುರದಲ್ಲಿ ದೀಪಾವಳಿ ಪ್ರಯಕ್ತ ಅಲಂಕೃತಗೊಂಡ ಎಮ್ಮೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT