ಹಾಂಗ್‌ಝೌ: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಮೇಲೆ ಕಣ್ಣಿಟ್ಟಿರುವ ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿದೆ. ಭಾನುವಾರ ನಡೆಯುವ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ, ಕೆಳ ಕ್ರಮಾಂಕದ ಉಜ್ಬೇಕಿಸ್ತಾನ ತಂಡದ ವಿರುದ್ಧ ದೊಡ್ಡ ಗೆಲುವಿನ ಮೂಲಕ ಅಭಿಯಾನ ಆರಂಭಿಸುವ ವಿಶ್ವಾಸದಲ್ಲಿದೆ.
ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ, ಏಷ್ಯಾದಲ್ಲಿ ಪ್ರಬಲ ಶಕ್ತಿ. ಕಳೆದ ಬಾರಿ ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತ ತಂಡ ಇತ್ತೀಚಿನ ಪ್ರದರ್ಶನ ಮತ್ತು ಫಾರ್ಮ್ ಆಧಾರದಲ್ಲಿ ಚಿನ್ನದ ಪದಕಕ್ಕೆ ‘ಫೆವರೀಟ್’ ಎನಿಸಿದೆ.
2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತ, ಈ ವರ್ಷ ಕೋಚ್ ಆಗಿ ನೇಮಕಗೊಂಡಿರುವ ಕ್ರೆಗ್ ಫುಲ್ಟನ್ ಅವರ ಮಾರ್ಗದರ್ಶನದಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಚೆನ್ನೈನಲ್ಲಿ ಕಳೆದ ತಿಂಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಜಯಭೇರಿ ಬಾರಿಸಿದ್ದ ಭಾರತ ವಿಶ್ವ ರ್‍ಯಾಂಕಿಂಗ್‌ನಲ್ಲೂ ಬಡ್ತಿ ಪಡೆದಿತ್ತು. ಏಷ್ಯನ್ ಗೇಮ್ಸ್‌ಗೆ ಪೂರ್ವಭಾವಿಯಾಗಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಕಿರೀಟ ಧರಿಸಿದೆ. ಹರ್ಮನ್‌ಪ್ರೀತ್ ಸಿಂಗ್ ಬಳಗದ ಮೇಲೆ ನಿರೀಕ್ಷೆ ಸಹಜವಾಗಿ ಹೆಚ್ಚಿದೆ.
ವಿಶ್ವದರ್ಜೆಯ ಡ್ರ್ಯಾಗ್ ಫ್ಲಿಕರ್ ಹರ್ಮನ್‌ಪ್ರೀತ್ ಜೊತೆ ಸಂಜಯ್, ವರುಣ್ ಕುಮಾರ್, ಅಮಿತ್ ರೋಹಿದಾಸ್ ಅಂಥ ಅನುಭವಿಗಳು ತಂಡದಲ್ಲಿದ್ದಾರೆ. ಮಿಡ್‌ಫೀಲ್ಡ್‌ನಲ್ಲಿ ಮನ್‌ಪ್ರೀತ್, ಉಪನಾಯಕ ಹಾರ್ದಿಕ್ ಸಿಂಗ್, ಯುವ ಉತ್ಸಾಹಿ ವಿವೇಕ್ ಸಾಗರ್ ಪ್ರಸಾದ್ ಅವರ ಬಲ ಇದೆ. ಮುಂಚೂಣಿಯಲ್ಲಿ ಶಂಷೇರ್ ಸಿಂಗ್, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಮೊದಲಾದ ಅನುಭವಿಗಳಿದ್ದಾರೆ. ಅನುಭವಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಜೊತೆ ಕ್ರಿಶನ್ ಬಹಾದೂರ್ ಪಾಠಕ್ ಕೂಡ ನಂಬಿಕಾರ್ಹರೇ.
ಭಾರತ ಪುರುಷರ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಮೂರು ಬಾರಿ ಚಿನ್ನ ಗೆದ್ದಿದೆ. ಆದರೆ ಈ ವಿಷಯದಲ್ಲಿ ಪಾಕಿಸ್ತಾನ (8) ಮತ್ತು ಕೊರಿಯಾ (4) ಭಾರತಕ್ಕಿಂತ ಹೆಚ್ಚು ಸಾಧನೆ ದಾಖಲಿಸಿದೆ.
‘ಎ’ ಗುಂಪಿನಲ್ಲಿ ಭಾರತ, ಉಜ್ಬೇಕಿಸ್ತಾನದ ಜೊತೆ ಪ್ರಬಲ ಎದುರಾಳಿ ಪಾಕಿಸ್ತಾನ, ಸಿಂಗಪುರ, ಜಪಾನ್ ಮತ್ತು ಬಾಂಗ್ಲಾದೇಶ ತಂಡಗಳಿವೆ. ‘ಬಿ’ ಗುಂಪಿನಲ್ಲಿ ದಕ್ಷಿಣ ಕೊರಿಯಾ, ಮಲೇಷ್ಯಾ, ಚೀನಾ, ಒಮಾನ್, ಥಾಯ್ಲೆಂಡ್ ಮತ್ತು ಇಂಡೊನೇಷ್ಯಾ ತಂಡಗಳಿವೆ.
ಭಾರತದ ಉಳಿದ ಪಂದ್ಯಗಳು: ಸೆ. 28: ಜಪಾನ್, ಸೆ. 30: ಪಾಕಿಸ್ತಾನ, ಅ. 2: ಬಾಂಗ್ಲಾದೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.