ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಪ್ಪಾಣಿ ರಾಮ ಮಂದಿರ ಸ್ಫೋಟಿಸುವ ಬೆದರಿಕೆ

ಫೆ.7 ಹಾಗೂ ಫೆ.28ರಂದು ಸಿಕ್ಕಿವೆ ಎರಡು ಪತ್ರಗಳು, ಮಾರ್ಚ್‌ 7ರಂದು ಎಫ್‌ಐಆರ್‌ ದಾಖಲು
Published 10 ಮಾರ್ಚ್ 2024, 1:09 IST
Last Updated 10 ಮಾರ್ಚ್ 2024, 1:09 IST
ಅಕ್ಷರ ಗಾತ್ರ

ನಿಪ್ಪಾಣಿ: ಇಲ್ಲಿನ ಐತಿಹಾಸಿಕ ಶ್ರೀರಾಮ ಮಂದಿರವನ್ನು ಬಾಂಬ್‌ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ ಎರಡು ಪತ್ರಗಳು ದೇವಸ್ಥಾನದಲ್ಲಿ ಸಿಕ್ಕಿವೆ. ಒಂದು ಪತ್ರ ಫೆಬ್ರುವರಿ 7ರಂದು, ಇನ್ನೊಂದು ಪತ್ರ ಫೆಬ್ರುವರಿ 28ರಂದು ಜನರ ಕೈಗೆ ಸಿಕ್ಕಿವೆ. ಆದರೆ, ಮಾರ್ಚ್‌ 7ರಂದು ನಿಪ್ಪಾಣಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಮಾರ್ಚ್‌ 20 ಅಥವಾ 21ರಂದು ಮಂದಿರವನ್ನು ಸ್ಫೋಟಿಸುವುದಾಗಿ ಪತ್ರದಲ್ಲಿ ಬರೆಯಲಾಗಿದೆ. ಇದರಿಂದ ನೂರು ವರ್ಷ ಹಳೆಯದಾದ ಈ ಮಂದಿರಕ್ಕೆ ಈಗ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಬೆದರಿಕೆ ಪತ್ರದ ಸಂಗತಿ ಶನಿವಾರ ಬಹಿರಂಗವಾಗಿದ್ದರಿಂದ ನಗರದ ಜನ ಕೆಲಕಾಲ ಆತಂಕಕ್ಕೆ ಒಳಗಾದರು.

‘ಮೊದಲ ಪತ್ರ ಫೆಬ್ರುವರಿ 7ರಂದು ಮಧ್ಯಾಹ್ನ 1.30ಕ್ಕೆ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಪಾಕೀಟ್‌ನಲ್ಲಿ ಮಂದಿರದ ಪೂಜಾರಿ ಸುರೇಶ ದೇಶಪಾಂಡೆ ಅವರಿಗೆ ಸಿಕ್ಕಿತ್ತು. ಎರಡನೇಯ ಪತ್ರ ಫೆಬ್ರುವರಿ 28ರಂದು ಬೆಳಿಗ್ಗೆ 6.30ಕ್ಕೆ ಶ್ರೀರಾಮ ಮಂದಿರದ ಎದುರು ಇರುವ ಹನುಮ ಮಂದಿರದ ಕಟ್ಟೆಯ ಮೇಲೆ ಸಿಕ್ಕಿದೆ’ ಎಂದು ಮಂದಿರದ ಸಮಿತಿಯ ಅಧ್ಯಕ್ಷ ಆನಂದ ಸೋಲಾಪೂರಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಶ್ರೀರಾಮ ಮಂದಿರದ ಎದುರು ಇರುವ ಹನುಮ ಮಂದಿರದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಮಾರ್ಚ್‌ 19 ಹಾಗೂ 20ರಂದು ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ಬೆದರಿಕೆ ಕಾರಣ 13 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಪೊಲೀಸ್‌ ಕಾವಲು ನಿಯೋಜಿಸಲಾಗಿದೆ. ಜನ ಆತಂಕಪಡುವ ಅಗತ್ಯವಿಲ್ಲ’ ಎಂದು ಸಿಪಿಐ ಬಿ.ಎಸ್‌.ತಳವಾರ ಹೇಳಿದ್ದಾರೆ.

‘ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಮೆ ಪ್ರತಿಷ್ಠಾಪನೆಯ ನಂತರ ಸ್ಥಳೀಯ ಶ್ರೀರಾಮ ಸೇವಾ ಹಿಂದೂಸ್ತಾನ್‌ ಹಾಗೂ ವಿವಿಧ ಸಂಘಟನೆಗಳು ಅದ್ದೂರಿಯಾಗಿ ಮೆರವಣಿಗೆ ನೆರವೇರಿಸಿದ್ದರು. ನಂತರದ ದಿನಗಳಲ್ಲಿ ಈ ಪತ್ರಗಳು ಸಿಕ್ಕಿವೆ. ತನಿಖೆ ನಡೆದಿದೆ’ ಎಂದು ಪೊಲೀಸರು ತಿಳಿಸಿದರು.

ಎರಡನೇ ಪತ್ರದಲ್ಲಿ ‘ಸಂಜಯ ಕುನ್ನೂರೆ’ ಒಳ್ಳೆಯ ಮನುಷ್ಯ ಇದ್ದಾನೆ’ ಎಂಬ ಸಾಲೂ ಇದೆ. ಪತ್ರಗಳು ಹಿಂದಿ ಭಾಷೆಯಲ್ಲಿವೆ. 

ನಿಪ್ಪಾಣಿಯ ಶ್ರೀರಾಮಮಂದಿರಕ್ಕೆ ಬಾಂಬ್ ಬೆದರಿಕೆ ಪತ್ರ ಬಂದಿರುವುದರಿಂದ ಎಲ್ಲಾ ದೇವಾಲಯಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಮುಜರಾಯಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದೇನೆ
ಸಚಿವ ರಾಮಲಿಂಗಾ ರೆಡ್ಡಿ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಪತ್ರಗಳಲ್ಲಿ ಏನಿದೆ?

‘ನಮ್ಮ ಬಾಬರಿ ಮಸೀದಿಯನ್ನು ನೀವು ನೆಲಸಮಗೊಳಿಸಿದ್ದೀರಿ. ನಾವು ಸುಮ್ಮನೆ ಹೇಗೆ ಕುಳಿತುಕೊಳ್ಳಲು ಸಾಧ್ಯ? ಮೋದಿ ಮೋದಿ ಎಂದು ಏಕೆ ಗುಂಗು ಹಚ್ಚಿಕೊಂಡಿದ್ದೀರಿ. ಅಲ್ಲಾಹ ಇಚ್ಛಿಸಿದಲ್ಲಿ ಭಾಷಣ ಮಾಡುವಾಗಲೇ ದಾಳಿಗೆ ತುತ್ತಾಗಿ ಮೋದಿ ಸಾಯುವನು. ನೀವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದೀರಿ. ಆದರೆ ಇಲ್ಲಿ ಮೆರವಣಿಗೆ ತೆಗೆದು ನಮ್ಮ ಗಲ್ಲಿಯಲ್ಲಿ ಬಂದು ‘ಜೈರಾಮ’ ಘೋಷಣೆಗಳನ್ನು ಕೂಗಿ ನಮ್ಮನ್ನೇಕೆ ರೇಗಿಸುತ್ತೀರಿ? ಈಗ ಸಾಕು ಮಾಡಿ. ಕರ್ನಾಟಕ ಪೂರ್ಣ ಭಾರತದ ವಿನಾಶ ನಿಪ್ಪಾಣಿಯಿಂದ ಆರಂಭಗೊಳ್ಳಲಿದೆ. ಈ ಮಂದಿರವನ್ನು ನಾವು ಸ್ಫೋಟಿಸುತ್ತೇವೆ. ಈ ಮಂದಿರದ ಸಮಿತಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ಕೇಳಿದ್ದೇವೆ. ಈ ಮಂದಿರದ ಎಲ್ಲರಿಗೂ ಗುಂಡು ಹಾರಿಸಲಿದ್ದೇವೆ. ಇದು ಬಿಜೆಪಿ ಆರ್‌ಎಸ್‍ಎಸ್‍ಗಳ ಅಡ್ಡೆಯಾಗಿದೆ. ನಿಮಗೆ ನಮ್ಮ 10 ನಿಮಿಷ ಅಜಾನ್‍ನ ಲೋಡ್‌ಸ್ಪೀಕರ್ ಇಷ್ಟ ಆಗುವುದಿಲ್ಲ. ನೀವು ದೊಡ್ಡ ಸೌಂಡ್‌ ಹಾಕಿ ಕುಣಿಯುವುದು ನಿಮಗೆ ಸರಿ ಅನಿಸುತ್ತದೆಯೇ? ದೇಶ ಸ್ವಾತಂತ್ರ್ಯ ಬಂದಾಗಿನಿಂದ ನಾವು ಇಲ್ಲೇ ಇದ್ದೇವೆ. ಈಗ ಏಕಾಏಕಿ ನಿಮಗೆ ಶತ್ರುಗಳು ಆಗಿದ್ದೇವೆಯೇ?’ ಎಂದು ಫೆ.7ರ ಪತ್ರದಲ್ಲಿ ಬರೆಯಲಾಗಿದೆ. ‘ಈಗ ಶುರುವಾಗಿದೆ. ಮುಂದೆ ಇನ್ನೂ ಧಮಾಕಾ ಆಗಲಿವೆ. ಮಂದಿರದ ಮುಖ್ಯಸ್ಥರಿಗೆ ನಾವು ನಿಧಾನವಾಗಿ ಸಾಯುವ ವಿಷ ಕೊಟ್ಟಿದ್ದೇವೆ. ಅವನಂತೂ ಸಾಯುತ್ತಾನೆ. ಬಾಕಿ ಜನರೂ ಸಿದ್ಧರಾಗಿ. ಮಂದಿರದ ಮುಖ್ಯಸ್ಥ ನಾಯಿ ಇದ್ದಹಾಗೆ. ಅವನಿಗೆ ಪೂಜಾರಿಗೆ ಕಮಿಟಿ ಸದಸ್ಯರಿಗೆ ಪ್ರಸಾದದಲ್ಲಿ ವಿಷ ಸೇರಿಸಿ ಕೊಡಲಾಗುವುದು. ಯಾರಿಗೂ ಗೊತ್ತೂ ಆಗುವುದಿಲ್ಲ. ಮಂದಿರ ಹತ್ತಿರದಲ್ಲೇ ಪೆಟ್ರೋಲ್‌ ಪಂಪ್‌ ಇದೆ. ಸ್ಫೋಟಗೊಂಡಾಗ ದೊಡ್ಡ ಧಮಾಕಾ ಆಗಲಿದೆ. ಅಲ್ಲಾಹನಿಗೆ ನಾವು ಕುರುಬಾನಿ ಕೊಡಬೇಕಿದೆ. ಅವರಿಗೆ ಬ್ರಾಹ್ಮಣ ಇಷ್ಟವಾಗುತ್ತಾರೆ. ಅವರನ್ನೇ ಕುರುಬಾನಿ ಕೊಡುತ್ತೇವೆ’ ಎಂದು ಎರಡನೇ ಪತ್ರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT