ಸೋಮವಾರ, ಡಿಸೆಂಬರ್ 5, 2022
24 °C
ಉಪಾಯದಿಂದ ಕೊಲೆ ಮಾಡಿದ ಪತ್ನಿ, ಪುತ್ರಿ, ಪ್ರಿಯಕರ

‘ದೃಶ್ಯಂ’ ಸಿನಿಮಾ ನೋಡಿ ಉಪಾಯ, ಉದ್ಯಮಿ ಕೊಲೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಅವರ ಪತ್ನಿ, ಪುತ್ರಿ ಹಾಗೂ ಪುತ್ರಿಯ ಪ್ರಿಯಕರನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಇಲ್ಲಿನ ಕ್ಯಾಂಪ್ ಪ್ರದೇಶದ ಮದ್ರಾಸ್‌ ಓಣಿಯ ನಿವಾಸಿ ಸುಧೀರ ಭಗವಾನದಾಸ ಕಾಂಬಳೆ (57) ಎನ್ನುವವರನ್ನು ಸೆ. 17ರಂದು ಅವರ ಮನೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಭೇದಿಸಿದ ನಗರ ಪೊಲೀಸರು ಸುಧೀರ ಪತ್ನಿ ರೋಹಿಣಿ, ಪುತ್ರಿ ಸ್ನೇಹಾ ಹಾಗೂ ಆಕೆಯ ಪ್ರಿಯಕರ ಅಕ್ಷಯ ಮಹಾದೇವ ವಿಠಕರ ಅವರನ್ನು ಬಂಧಿಸಿದ್ದಾರೆ.


ಸುಧೀರ (ಕೊಲೆಯಾದ ಉದ್ಯಮಿ)

‘ಸುಧೀರ ಅವರು ಹಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ, ಪುತ್ರಿ ಬೆಳಗಾವಿಯಲ್ಲೇ ಇದ್ದರು. ಕೋವಿಡ್‌ ಸಂದರ್ಭದಲ್ಲಿ ಲಾಕ್‌ಡೌನ್‌ ಕಾರಣ ಮರಳಿ ಬೆಳಗಾವಿಗೆ ಬಂದಿದ್ದ ಸುಧೀರ, ಕುಟುಂಬದ ಜತೆ ವಾಸವಾಗಿದ್ದರು. ಇತ್ತೀಚಿನ ದಿನಗಳಲ್ಲಿ ಪ‌ತ್ನಿ ಹಾಗೂ ಪುತ್ರಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಸಂಶಯದಿಂದ ಕುಟುಂಬದಲ್ಲಿ ಪದೇಪದೇ ಜಗಳ ನಡೆಯುತ್ತಿತ್ತು. ಹೀಗಾಗಿ, ದುಬೈನಿಂದ ಗಳಿಸಿ ತಂದಿದ್ದ ಹಣವನ್ನು ಅವರು ಕುಟುಂಬಕ್ಕೆ ನೀಡಲಿಲ್ಲ. ಇತರರಿಗೆ ಬಡ್ಡಿಯಂತೆ ಸಾಲ ಕೊಡುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಅವರ ಪತ್ನಿ, ಪುತ್ರಿ ಹಾಗೂ ಪ್ರಿಯಕರ ಸೇರಿಕೊಂಡು ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಡಿಸಿಪಿ ರವೀಂದ್ರ ಗಡಾದಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೊಲೆ ನಡೆದಿದ್ದು ಹೇಗೆ?:

‘ಸೆ. 17ರಂದು ಸುಧೀರ ಊಟ ಮಾಡಿ ಮಲಗಿದ್ದರು. ಮೂವರೂ ಸೇರಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಅವರ ಕೊಲೆ ಮಾಡಿದ್ದರು. ಏನೂ ಗೊತ್ತಿಲ್ಲ ಎಂಬಂತೆ ಪತ್ನಿ ಹಾಗೂ ಪುತ್ರಿ ರಾತ್ರಿಯಿಡೀ ಪಕ್ಕದ ಕೋಣೆಯಲ್ಲಿ ಮಲಗಿದ್ದರು. ನಸುಕಿನ 5ರ ಸುಮಾರಿಗೆ ಎದ್ದು ರಂಪಾಟ ಮಾಡಿದ್ದರು. ರಾತ್ರಿ ಯಾರೋ ಮನೆಗೆ ನುಗ್ಗಿ ಹಣಕ್ಕಾಗಿ ಕೊಲೆ ಮಾಡಿದ್ದಾರೆ’ ಎಂದು ನಾಟಕವಾಡಿದ್ದರು.

‘ದೃಶ್ಯಂ’ ಸಿನಿಮಾ ನೋಡಿ ಉಪಾಯ:

ಕೆಲ ವರ್ಷಗಳ ಹಿಂದೆ ತೆರೆಕಂಡ ‘ದೃಶ್ಯಂ’ ಚಲನಚಿತ್ರವನ್ನು ಆರೋಪಿಗಳು ನೋಡಿದ್ದರು. ಕೊಲೆ ಆರೋ‍ಪಿ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ ಎಂಬ ಸಂಗತಿ ಮನಗಂಡಿದ್ದರು. ಅದೇ ರೀತಿ ಕೊಲೆ ಮಾಡಿ, ತಮಗೇನೂ ಗೊತ್ತಿಲ್ಲ ಎಂಬಂತೆ ನಾಟಕ ಮಾಡಿದರು ಎಂದು ಡಿಸಿಪಿ ಮಾಹಿತಿ ನೀಡಿದರು.

‘ಸುಧೀರ ಮೈಮೇಲೆ ಆದ ಗಾಯ ಹಾಗೂ ಪಕ್ಕೆಲಬುಗಳು ಮುರಿದಿದ್ದನ್ನು ಕಂಡಾಗ, ಕೊಲೆಯಲ್ಲಿ ಪುರುಷನ ಕೈವಾಡ ಇರುವುದು ಖಚಿತವಾಗಿತ್ತು. ಪತ್ನಿ, ಪುತ್ರಿಯ ನಾಟಕೀಯ ಹೇಳಿಕೆಗಳಿಂದ ಸಂಶಯಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪ್ರಕರಣ ಬಯಲಿಗೆ ಬಂತು’ ಎಂದು ಅವರು ಹೇಳಿದರು.

‘ಕೊಲೆಯಾದ ಮರುದಿನ ಪೊಲೀಸರು ಸ್ಥಳ ಪರಿಶೀಲನೆ ನಡೆಸುವ ವೇಳೆ, ಆರೋಪಿ  ಅಕ್ಷಯ ಕೂಡ ಅಮಾಯಕನಂತೆ ಬಂದು ನಿಂತಿದ್ದ. ಆರೋಪಿ ರೋಹಿಣಿಯ ತವರೂರು ಪುಣೆ. ಅವರ ಪುತ್ರಿ ಸ್ನೇಹಾ ಕೂಡ ಕೆಲ ವರ್ಷಗಳ ಹಿಂದೆ ಪುಣೆಯಲ್ಲಿ ವೃತ್ತಿಪರ ಕೋರ್ಸ್‌ ಓದುತ್ತಿದ್ದರು. ಅಕ್ಷಯ ಬೆಳಗಾವಿ ಮೂಲದವನಾಗಿದ್ದರೂ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಸ್ನೇಹಾ ಜೊತೆಗೆ ಪ್ರೇಮ ಸಂಬಂಧ ಬೆಳೆಸಿದ್ದ. ಆತನಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ಕೊಲೆ ಮಾಡುವ ಉದ್ದೇಶದಿಂದಲೇ ಬೆಳಗಾವಿಗೆ ಬಂದು ನೆಲೆಸಿದ್ದ’ ಎಂದೂ ರವೀಂದ್ರ ಗಡಾದಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು