ಬೆಳಗಾವಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಾಗೂ ಪ್ರಚೋದನೆ ನೀಡಿದ 6 ಜನರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹10 ಸಾವಿರ ದಂಡ ವಿಧಿಸಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ರಾಯಬಾಗ ತಾಲ್ಲೂಕಿನ ನಸಲಾಪುರದ ಸಚಿನ ಬಾಬಾಸಾಹೇಬ ರಾಯಮಾನೆ, ರೂಪಾ ಬಾಬಾಸಾಹೇಬ ಮಾನೆ, ರಾಕೇಶ ಬಾಬಾಸಾಹೇಬ ರಾಯಮಾನೆ, ಚಿಕ್ಕೋಡಿ ತಾಲ್ಲೂಕಿನ ಗಳತಗಾದ ರೋಹಿಣಿ ಶ್ರೀಮಂತ ದೀಕ್ಷಿತ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲ್ಲೂಕಿನ ಕುಪ್ಪವಾಡದ ವಿನೋದ ಸುರೇಶ ರಾಯಮಾನೆ, ವಿಜಯ ತಾನಾಜಿ ಸಾಳುಂಕೆ ಶಿಕ್ಷೆಗೆ ಒಳಗಾದವರು.
ಮುಖ್ಯ ಆರೋಪಿ ಸಚಿನ್ ರಾಯಮಾನೆ, 2015ರ ಜೂನ್ 21ರಂದು ಬಾಲಕಿಯನ್ನು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗ್ರಾಮವೊಂದಕ್ಕೆ ಕರೆದೊಯ್ದು ಶೆಡ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಉಳಿದ ಆರೋಪಿಗಳು ಅವನಿಗೆ ಪ್ರಚೋದನೆ ನೀಡಿದ್ದರು. ಅಪ್ರಾಪ್ತೆ ಶೆಡ್‌ನಿಂದ ಹೊರಗೆ ಬರದಂತೆ ಕೂಡಿ ಹಾಕಿದ್ದರು. ₹3 ಲಕ್ಷ ಕೊಟ್ಟರೆ ಬಾಲಕಿಯನ್ನು ವಾಪಸ್ ತಂದುಬಿಡುವುದಾಗಿ ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದರು.
ಈ ಸಂಬಂಧ ತಂದೆ ದೂರು ನೀಡಿದ್ದರು. ಚಿಕ್ಕೋಡಿಯ ತನಿಖಾಧಿಕಾರಿ ಎಂ.ಎಸ್.ನಾಯ್ಕರ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ನೀಡಿದ್ದಾರೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಪರಿಹಾರ ಪಡೆಯುವಂತೆ ಸಂತ್ರಸ್ತೆಯ ತಂದೆಗೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.