ಗುರುವಾರ , ಆಗಸ್ಟ್ 11, 2022
27 °C
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗೆ ಆಕ್ರೋಶ

ಬಂದ್ ಬೆಂಬಲಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ಕರೆ ನೀಡಲಾಗಿದ್ದ ಭಾರತ ಬಂದ್‌ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳವರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗ ರೈತ ಸಂಘದವರು ಚಹಾ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಹಳೆಯ ಟೈಯರ್‌ಗೆ ಬೆಂಕಿ ಹಚ್ಚಿ  ಆಕ್ರೋಶ ವ್ಯಕ್ತಪಡಿಸಿದರು. ಚಹಾ ಪಾತ್ರೆ ಕಸಿದುಕೊಳ್ಳಲು ಬಂದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಮಾನವ ಸರಪಳಿ

ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರಲಿಲ್ಲ. ಹೀಗಾಗಿ, ಬೆಳಿಗ್ಗೆ ಬಸ್‌ಗಳ ಕಾರ್ಯಾಚರಣೆ ಪ್ರಮಾಣ ಕಡಿಮೆ ಇತ್ತು. ಮಧ್ಯಾಹ್ನದ ನಂತರ ಎಂದಿನಂತೆ ಕಾರ್ಯಾಚರಣೆ ನಡೆಯಿತು. ಅಂಗಡಿಗಳು ಹಾಗೂ ಹೋಟೆಲ್‌ಗಳು ಎಂದಿನಂತೆ ತೆರೆದಿದ್ದವು. ರೈತರ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿ, ದೈನಂದಿನ ವ್ಯಾಪಾರ–ವಹಿವಾಟಿನಲ್ಲಿ ವರ್ತಕರು ಪಾಲ್ಗೊಂಡಿದ್ದರು. ವಿವಿಧ ಸಂಘಟನೆಗಳವರು ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ದರಿಂದ ಆ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಎಪಿಎಂಸಿ ಮತ್ತು ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಎಂದಿನಂತೆಯೇ ಇದ್ದವು.

ಗುಲಾಮರನ್ನಾಗಿ ಮಾಡಲು

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ‘ದೇಶದಲ್ಲಿ ರೈತರ ಸಂಖ್ಯೆ ಜಾಸ್ತಿ ಇದೆ. ಅವರಿಗೆ ಸಂಬಂಧಿಸಿದ ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನ ರೈತ ಮುಖಂಡರೊಂದಿಗೆ ಸರ್ಕಾರ ಚರ್ಚಿಸಬೇಕಿತ್ತು. ಈ ಕಾಳಜಿಯನ್ನು ತೋರಲಿಲ್ಲವೇಕೆ? ಎಂಎನ್‌ಸಿ ಕಂಪನಿಗಳಿಗೆ ರೈತರನ್ನು ಗುಲಾಮರನ್ನಾಗಿ ಮಾಡುವ ಕಾನೂನನ್ನು ಸರ್ಕಾರ ತಂದಿದೆ. ಬಂಡವಾಳಶಾಹಿಗಳು ಲಕ್ಷಗಟ್ಟಲೆ ಎಕರೆ ಖರೀದಿಸಲು ಅನುವು ಮಾಡಿಕೊಡಲಾಗಿದೆ. ಅವರೇನು ಅಲ್ಲಿ ಕೃಷಿ ಮಾಡುತ್ತಾರೆಯೇ? ರೆಸಾರ್ಟ್‌ ಅಥವಾ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸುತ್ತಾರೆ. ಫಲವತ್ತಾದ ಜಮೀನನ್ನು ಮೋಜು–ಮಸ್ತಿಗೆ ಪಡೆಯಲು ಅವಕಾಶ ಕೊಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡುವವರಾರು? ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಹೊಲದಲ್ಲಿ ಕೃಷಿ ಮಾಡಿದ  ಅನುಭವ ಇಲ್ಲ. ಹೀಗಾಗಿ ರೈತರ ಮರಣ ಶಾಸನ ಆಗುವಂತಹ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಕೃಷಿಕರಿಗೆ ಮಾರಕವಾಗಿರುವ ಇಂತಹ ಕ್ರಮಗಳನ್ನು ಕೈಬಿಡಬೇಕು’ ಎಂದು ಕಿಡಿಕಾರಿದರು.

ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ಚೂನಪ್ಪ ಪೂಜಾರಿ, ಜಯಶ್ರೀ ಗುರಣ್ಣವರ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ, ಕನ್ನಡಪರ ಹೋರಾಟಗಾರರಾದ ಮಹಾಂತೇಶ ರಣಗಟ್ಟಿಮಠ, ಶ್ರೀನಿವಾಸ ತಾಳೂಕರ, ಕಸ್ತೂರಿ ಬಾವಿ, ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ, ಎಐಕೆಎಂಎಸ್, ಎಐಡಿವೈಒ, ಆರ್‌ಕೆಎಸ್, ಸಿಐಟಿಯು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು