ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜನರ ನಿದ್ದೆಗೆಡಿಸಿರುವ ಬೈಕ್‌ ವ್ಹೀಲಿಂಗ್‌...!

Last Updated 15 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿಯಲ್ಲಿ ರಾತ್ರಿ ವೇಳೆ ಪ್ರಮುಖ ರಸ್ತೆಗಳಲ್ಲಿ ಬೈಕ್‌ ವ್ಹೀಲಿಂಗ್‌ ಹಾಗೂ ರೇಸಿಂಗ್‌ ಕಂಡುಬರುತ್ತಿದೆ. ಕರ್ಕಶ ಶಬ್ದ ಮಾಡುತ್ತ, ಮೈ ಮೇಲೆ ಏರಿ ಬರುವ ಬೈಕ್‌ಗಳು ಯಮರೂಪಿಯಂತಾಗಿವೆ. ಬೈಕ್‌ ವ್ಹೀಲಿಂಗ್‌ ಹಾಗೂ ರೇಸಿಂಗ್‌ನಿಂದ ಜನರು ಅನುಭವಿಸುತ್ತಿರುವ ಸಂಕಟದ ಬಗ್ಗೆ ‘ನಮ್ಮ ನಗರ– ನಮ್ಮ ಧ್ವನಿ’ ಬೆಳಕು ಚೆಲ್ಲಿದೆ. ಪ್ರತಿಕ್ರಿಯಿಸಿ– 9980204200

ಬೆಳಗಾವಿ: ರ್ರುಂ... ರ್ರುಂ... ರ್ರುಂ... ಬೈಕ್‌ಗಳ ಆರ್ಭಟ. ರಾತ್ರಿಯೆಲ್ಲ ಕಿವಿಗಡಚ್ಚಿಕುವ ಶಬ್ದ. ನಗರದ ಪ್ರಮುಖ ರಸ್ತೆಗಳಲ್ಲೆಲ್ಲ ಈಗ ‘ಬೈಕ್‌ ವ್ಹೀಲಿಂಗ್‌’ ಸದ್ದು ಜೋರಾಗಿದೆ. ಬೈಕ್‌ ಸವಾರರಿಗೆ ಇದು ಮೋಜು– ಮಸ್ತಿಯಾದರೆ, ಅಕ್ಕಪಕ್ಕದ ನಿವಾಸಿಗಳಿಗೆ ನರಕಯಾತನೆ. ನಿದ್ದೆ ಇಲ್ಲದೇ ರಾತ್ರಿಯೆಲ್ಲ ನರಳಾಡುತ್ತಿದ್ದಾರೆ. ನೆಮ್ಮದಿಯೂ ಕಳೆದುಕೊಂಡಿದ್ದಾರೆ...!

ಹೌದು, ನಗರ ‘ಸ್ಮಾರ್ಟ್‌’ ಆಗುತ್ತಿದ್ದಂತೆ, ಹೊಸ ಹೊಸ ನಾಗರಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಜನರ ಸಂಚಾರಕ್ಕೆಂದು ನಗರದ ಪ್ರತಿಯೊಂದು ದಿಕ್ಕಿನಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ಅಗಲವನ್ನೂ ಹೆಚ್ಚಿಸಲಾಗಿದೆ. ಝಗಮಗಿಸುವ ಬಣ್ಣ ಬಣ್ಣದ ವಿದ್ಯುದ್ದೀಪಗಳನ್ನೂ ಹಾಕಿಸಲಾಗಿದೆ. ಜನರ ಒಳಿತಿಗಾಗಿ ಮಾಡಿರುವ ಇವೇ ಸೌಲಭ್ಯಗಳು ಈಗ ‘ವ್ಹೀಲಿಂಗ್‌’ ಕೋರರಿಗೂ ಪ್ರೇರೇಪಿಸುತ್ತಿರುವುದು ವಿಪರ್ಯಾಸವಾಗಿದೆ.

ಇಲ್ಲಿನ ಕೊಲ್ಹಾಪುರ ರಸ್ತೆ, ಖಾನಾಪುರ ರಸ್ತೆ, ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಹಿಂಡಲಗಾ ರಸ್ತೆ, ಬಿ.ಎಸ್‌. ಯಡಿಯೂರಪ್ಪ ಮಾರ್ಗ, ಕಾಲೇಜು ರಸ್ತೆ, ಬಾಕ್ಸೈಟ್‌ ರಸ್ತೆ, ಹಾಸ್ಟೇಲ್‌ಗಳಿರುವ ಪ್ರದೇಶ ಹಾಗೂ ಇತರ ರಸ್ತೆಗಳಲ್ಲಿ ‘ವ್ಹೀಲಿಂಗ್‌’ ಹುಚ್ಚಾಟ ಕಂಡುಬರುತ್ತಿದೆ. ರಾತ್ರಿ ವೇಳೆ ವಿಶೇಷವಾಗಿ ಶನಿವಾರ, ಭಾನುವಾರ ರಾತ್ರಿ ಇದು ಹೆಚ್ಚಾಗಿರುತ್ತದೆ.

ಮೋಜು– ಮಸ್ತಿ, ಸ್ಪರ್ಧೆ:ಬೈಕ್‌ ಓಡಿಸುವುದರಲ್ಲಿ ತಾವೆಷ್ಟು ನಿಪುಣರು ಎನ್ನುವುದನ್ನು ಸಾಬೀತು ಪಡಿಸಲು ಸವಾರರು ಇಂತಹ ಕಸರತ್ತಿಗೆ ಮುಂದಾಗುತ್ತಾರೆ. ಕೆಲವರು ಮೋಜು– ಮಸ್ತಿಗಾಗಿ, ಬಾಜಿಗಾಗಿ ರಸ್ತೆಗೆ ಇಳಿಯುತ್ತಾರೆ. ಸ್ನೇಹಿತರೇ ಸೇರಿಕೊಂಡು, ಸಣ್ಣ ಸಣ್ಣ ಗುಂಪು ಕಟ್ಟಿಕೊಂಡು ವ್ಹೀಲಿಂಗ್‌ಗೆ ಕೈ ಜೋಡಿಸುತ್ತಿದ್ದಾರೆ.

ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು, ಸ್ನೇಹಿತರು, ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಹುಡುಗರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವರಿಗೆ 18 ವರ್ಷ ಕೂಡ ತುಂಬಿರುವುದಿಲ್ಲ. ‘ಬೈಕ್‌ ಕ್ರೇಜ್‌’ಗೆ ಒಳಗಾಗಿ ಅಪಾಯದ ಆಟದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ವಿವಿಧ ರೀತಿಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ನಿಗದಿತ ಗುರಿಯನ್ನು ಮೊದಲು ತಲುಪುವುದು, ಬೈಕಿನ ಮುಂದಿನ ಚಕ್ರವನ್ನು ಎತ್ತಿ, ವೇಗವಾಗಿ ಮುನ್ನುಗುವುದು. ಹಿಂಬದಿ ಸವಾರನನ್ನು ಕೂರಿಸಿಕೊಂಡು ಮುಂದಿನ ಚಕ್ರ ಎತ್ತಿ ಸಾಗುವುದು, ಹ್ಯಾಂಡಲ್‌ ಕೈ ಬಿಟ್ಟು ಬೈಕ್‌ ಓಡಿಸುವುದು, ರಸ್ತೆಯ ಮೇಲೆ ಇಟ್ಟ ಕೊಲ್ಡ್‌ಡ್ರಿಂಕ್ಸ್‌ ಬಾಟಲಿಯನ್ನು ಬೈಕ್‌ ಸವಾರಿ ಮಾಡುತ್ತಲೇ ಎತ್ತಿಕೊಳ್ಳುವುದು, ₹ 500, ₹ 2,000 ನೋಟು ಮೇಲೆತ್ತುವುದು... ಹೀಗೆ ವಿವಿಧ ರೀತಿಯ ಸ್ಪರ್ಧೆಗಳು ನಡೆಯುತ್ತವೆ. ಕೆಲವರು ಮೋಜಿಗಾಗಿ ಇದರಲ್ಲಿ ಭಾಗಿಯಾದರೆ, ಇನ್ನುಳಿದ ಕೆಲವರು ದುಡ್ಡು ಸಂಪಾದಿಸಲೂ ತೊಡಗಿಕೊಳ್ಳುತ್ತಾರೆ.

ವಾಟ್ಸ್ಆ್ಯಪ್‌ ಹುಚ್ಚು:ವ್ಹೀಲಿಂಗ್‌ ಮಾಡುವುದನ್ನು ‘ಹಿರೋಯಿಸಂ’ ಎನ್ನುವಂತೆ ಸವಾರರು ಬಿಂಬಿಸುತ್ತಾರೆ. ಇದನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನೋಡಿ, ಇತರರು ಕೂಡ ಅನುಸರಿಸುತ್ತಿರುವುದು ಆತಂಕ ಹುಟ್ಟುಹಾಕಿದೆ.

ಅಪಾಯ:ಸಾರ್ವಜನಿಕರು ಹಾಗೂ ಪೊಲೀಸರ ಭಯದಿಂದಾಗಿ ಹಗಲು ಹೊತ್ತು ‘ವ್ಹೀಲಿಂಗ್‌’ ಆಟ ನಡೆಯುವುದಿಲ್ಲ. ರಾತ್ರಿ ವೇಳೆಯನ್ನೇ ಆಯ್ದುಕೊಳ್ಳುತ್ತಾರೆ. ರೇಸ್‌ ನಡೆಯುವ ವೇಳೆ ಬೈಕ್‌ಗಳಿಂದ ಹೊರಹೊಮ್ಮುವ ಶಬ್ದ ಇನ್ನಷ್ಟು ಕರ್ಕಶವಾಗಿರಲಿ ಎಂದು ಸೈಲೆನ್ಸರ್‌ ತೆಗೆದುಹಾಕಿರುತ್ತಾರೆ. ಇದರ ಶಬ್ದಕ್ಕೆ ಪಕ್ಕದಲ್ಲಿ ಸಾಗುವ ಜನರು, ವಾಹನಗಳ ಸವಾರರು ಬೆಚ್ಚಿ ಬೀಳುವಂತಾಗುತ್ತದೆ.

ವ್ಹೀಲಿಂಗ್‌ ಮಾಡುವ ವೇಳೆ ಸ್ವಲ್ಪ ಯಾಮಾರಿದರೂ, ನಿಯಂತ್ರಣ ತಪ್ಪಿದರೂ ಅಪಘಾತ ಶತಸಿದ್ಧ. ಸವಾರರಲ್ಲದೇ, ಅಕ್ಕಪಕ್ಕದ ಜನರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಅವಘಡಗಳು ಸಂಭವಿಸಿದಾಗ ಪೊಲೀಸ್‌ ಠಾಣೆ ಮೆಟ್ಟಿಲೇರುವುದು ತೀರ ಅಪರೂಪ. ಹೀಗಾಗಿ ಬೆಳಕಿಗೆ ಬರುವುದು ಕಡಿಮೆ ಎನ್ನಬಹುದು.

ನಿವಾಸಿಗಳ ಪರದಾಟ:80 ಅಡಿ ಅಗಲ, ದ್ವಿ ಪಥ– ಚತುಷ್ಪಥ ರಸ್ತೆಗಳ ಪಕ್ಕದಲ್ಲಿ ವಾಸವಾಗಿರುವ ನಿವಾಸಿಗಳ ಸಂಕಟವಂತೂ ಹೇಳತೀರದು. ಮಧ್ಯೆರಾತ್ರಿ ವೇಳೆ ನಿದ್ರೆ ಜಂಪಿನಲ್ಲಿರುವಾಗ ಬೈಕ್‌ಗಳ ಕಿರುಚಾಟಕ್ಕೆ ಹೈರಾಣಾಗುತ್ತಾರೆ. ಸವಾರರನ್ನು ಹಿಡಿದು ಬುದ್ಧಿ ಕಲಿಸಬೇಕೆಂದರೆ, ಕೈಗೆ ಸಿಗದೇ ಗಾಳಿಯ ಜೊತೆ ತೇಲಿಹೋಗಿಬಿಡುತ್ತಾರೆ. ಮಿಂಚಿನಂತೆ ಬಂದು ಹೋಗುವವರನ್ನು ಗುರುತಿಸುವುದಾದರೂ ಹೇಗೆ ಎಂದು ಕೊಂಡು ಅವರು ಕೂಡ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಿಲ್ಲ.

ರಾತ್ರಿ ಗಸ್ತು ಹೆಚ್ಚಿಸಲಿ:‘ಬೈಕ್‌ ರೇಸ್‌ ಹಾಗೂ ವ್ಹೀಲಿಂಗ್‌ ಮಾಡುವವರು ಕೈಗೆ ಸಿಗುವುದಿಲ್ಲ. ಹೀಗೆ ಬಂದು, ಹಾಗೇ ಹೋಗಿಬಿಡುತ್ತಾರೆ. ರಾತ್ರಿ ವೇಳೆ ಅವರನ್ನು ಗುರುತಿಸುವುದು ಕಷ್ಟ. ಹೀಗಾಗಿ ನಾವು ಪೊಲೀಸರಿಗೆ ದೂರು ನೀಡಿಲ್ಲ. ನಗರದಲ್ಲಿ ಪೊಲೀಸ್‌ ಗಸ್ತನ್ನು ಹೆಚ್ಚಿಸಬೇಕು. ಮುಖ್ಯವಾಗಿ ಅಗಲವಾದ ಹಾಗೂ ನೇರವಾದ ರಸ್ತೆಗಳಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ಸಹ್ಯಾದ್ರಿ ನಗರದ ನಿವಾಸಿಯೊಬ್ಬರು ಹೇಳಿದರು.

ಪೊಲೀಸರಿಗೆ ಸವಾಲು: ಐಪಿಸಿ ಪ್ರಕಾರ ಹೇಳುವುದಾದರೆ, ವ್ಲೀಲಿಂಗ್‌ ಮಾಡುವುದು ಅಪರಾಧ. ಇದಕ್ಕೆ ದಂಡ, ಶಿಕ್ಷೆಯೂ ಉಂಟು. ಇದನ್ನು ತಡೆಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾತ್ರಿ ಪೊಲೀಸರು ಗಸ್ತು ತಿರುಗುತ್ತಾರೆ. ದಿನದ 24 ತಾಸೂ ಸಹಾಯವಾಣಿ ಕೆಲಸ ನಿರ್ವಹಿಸುತ್ತಿದ್ದರೂ, ಇದನ್ನು ತಡೆಯಲಾಗುತ್ತಿಲ್ಲ.

ಇತ್ತೀಚೆಗೆ ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದರಡಿ ರ‍್ಯಾಷ್‌ ಡ್ರೈವಿಂಗ್‌ಗೆ ₹ 1,000 ದಂಡ ವಿಧಿಸಲು ಅವಕಾಶವಿದೆ. ಇನ್ನಾದರೂ ವ್ಹೀಲಿಂಗ್‌ ಹುಚ್ಚಾಟ ತಹಬಂದಿಗೆ ಬರುವುದೇ ಎನ್ನುವುದನ್ನು ಕಾದುನೋಡಬೇಕಾಗಿದೆ.

*
‘ಬೈಕ್‌ ವ್ಹೀಲಿಂಗ್‌ ಮಾಡುವುದು ಅಪರಾಧ. ಐಪಿಸಿ ಪ್ರಕಾರ, ದಂಡ ಹಾಗೂ ಶಿಕ್ಷೆ ವಿಧಿಸಲೂ ಅವಕಾಶವಿದೆ. ಯಾರೂ ಈ ಅಪಾಯದ ಕ್ರೀಡೆಯಲ್ಲಿ ಪಾಲ್ಗೊಳ್ಳಬಾರದು. ಪಾಲ್ಗೊಂಡರೆ, ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು. ವ್ಹೀಲಿಂಗ್‌ ನಡೆಯುತ್ತಿದ್ದರೆ ಅಕ್ಕಪಕ್ಕದ ಜನರು ಪೊಲೀಸ್‌ ಸಹಾಯವಾಣಿ– 100 ಅಥವಾ ನನ್ನ ಮೊಬೈಲ್‌ ಸಂಖ್ಯೆಗೆ 9480800650 ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ಕೊಡಬಹುದು. ನಾವು ಕ್ರಮಕೈಗೊಳ್ಳುತ್ತೇವೆ’
– ಬಿ.ಎಸ್‌. ಲೋಕೇಶಕುಮಾರ್‌, ನಗರ ಪೊಲೀಸ್‌ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT