ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಸಿದ್ಧತೆ

ಅಲಂಕಾರದಿಂದ ಕಂಗೊಳಿಸುತ್ತಿರುವ ದೇಗುಲ
Last Updated 27 ಸೆಪ್ಟೆಂಬರ್ 2021, 15:34 IST
ಅಕ್ಷರ ಗಾತ್ರ

ಉಗರಗೋಳ (ಸವದತ್ತಿ ತಾ.): ಕೋವಿಡ್ ಪ್ರಕರಣಗಳು ತಗ್ಗಿದ ಹಿನ್ನೆಲೆಯಲ್ಲಿ ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ಭಕ್ತ ಸಮೂಹದಲ್ಲಿ ಸಂತಸ ತಂದಿದೆ. ಸೆ.28ರಂದು ಬೆಳಗ್ಗೆ 6.30ಕ್ಕೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರ ದರ್ಶನಕ್ಕೆ ದೇವಸ್ಥಾನ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭಕ್ತರ ಆಗಮನದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನು ತಳಿರು-ತೋರಣ, ಬಾಳೆ ಗರಿ ಹಾಗೂ ತರಹೇವಾರಿ ಪುಷ್ಪಗಳಿಂದ ಅಲಂಕರಿಸಲಾಗಿದೆ.

ಒಂದೂವರೆ ವರ್ಷದಿಂದ ದೇವಿ ದರ್ಶನವಿಲ್ಲದೆ ಭಕ್ತರು ನಿರಾಸೆಗೊಂಡಿದ್ದರು. ಇಷ್ಟುದಿನ ತಮ್ಮ ಮನೆಗಳಲ್ಲೇ ದೇವಿ ಆರಾಧಿಸಿದ್ದರು. ಈಗ ನಿಬಂಧ ತೆರವಾಗಿದ್ದು, ಶ್ರೀದೇವಿಯ ದರ್ಶನ ಪಡೆಯಲೆಂದು ಭಕ್ತರು ಸೋಮವಾರ ಸಂಜೆಯಿಂದಲೇ ಯಲ್ಲಮ್ಮನಗುಡ್ಡಕ್ಕೆ ಬಂದು ತಂಗಿದ್ದಾರೆ. ಭಕ್ತರಿಲ್ಲದೆ ಭಣಗುಡುತ್ತಿದ್ದ ಏಳುಕೊಳ್ಳದ ನಾಡಿನಲ್ಲೀಗ ಭಕ್ತಿಯ ಹೊಳೆ ಹರಿಯುತ್ತಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇರುವುದರಿಂದಾಗಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಲ್ಲಮ್ಮನಗುಡ್ಡಕ್ಕೆ ಸಂಪರ್ಕಿಸುವ ಉಗರಗೋಳ, ಜೋಗುಳಬಾವಿ, ಸವದತ್ತಿ ಮಾರ್ಗಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಒಂದೂವರೆ ವರ್ಷದಿಂದ ವ್ಯಾಪಾರ ಇಲ್ಲದೆ ಕಂಗಾಲಾಗಿದ್ದ ತೆಂಗಿನಕಾಯಿ, ಕುಂಕುಮ-ಭಂಡಾರ, ಹಣ್ಣಿನ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಸಕಲ ವ್ಯವಸ್ಥೆ: ‘ಜಿಲ್ಲಾಡಳಿತದ ಸೂಚಿಸಿದಂತೆ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಕೊರೊನಾ ನಿಯಂತ್ರಣ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಆದ್ಯತೆ ನೀಡಲಾಗಿದೆ. ಪರಸ್ಪರ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಯಲ್ಲಮ್ಮದೇವಿ ದರ್ಶನ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಥರ್ಮಲ್ ಸ್ಕ್ರೀನಿಂನ್‌ಗೆ ಒಳಪಡಿಸಿದ ನಂತರವೇ ದೇವಸ್ಥಾನದಲ್ಲಿ ಪ್ರವೇಶ ಕಲ್ಪಿಸಲಾಗುತ್ತದೆ. ಸ್ಯಾನಿಟೈಸರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಭಕ್ತರು ಸಹಕರಿಸಬೇಕು’ ಎಂದು ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಕೋರಿದರು.

‘ಭಕ್ತರು ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ದೇವಸ್ಥಾನ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಾಗ ನೂಕುನುಗ್ಗಲು ಉಂಟಾಗದಂತೆ ಎಚ್ಚರ ವಹಿಸಬೇಕು’ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಹಾಗೂ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಮಾಮನಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT