ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ಬೆಂಬಲಿಸಿ ಬೈಕ್‌, ಆಟೊ ರ್‍ಯಾಲಿ

Last Updated 26 ಜನವರಿ 2021, 8:57 IST
ಅಕ್ಷರ ಗಾತ್ರ

ಹೊಸಪೇಟೆ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿ ರೈತರು ದೇಶದಾದ್ಯಂತ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೃಹತ್‌ ಬೈಕ್‌, ಆಟೊ ರ್‍ಯಾಲಿ ನಡೆಸಿದರು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡ ರ್‍ಯಾಲಿ ಟಿ.ಬಿ. ಡ್ಯಾಂ ರಸ್ತೆ, ಸಾಯಿಬಾಬಾ ವೃತ್ತ, ಅಮರಾವತಿ ಅತಿಥಿ ಗೃಹ, ಕಾಲೇಜು ರಸ್ತೆ ಮೂಲಕ ಹಾದು ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಕೊನೆಗೊಂಡಿತು. ರ್‍ಯಾಲಿಯಲ್ಲಿ ಸಾಂಕೇತಿಕವಾಗಿ ಒಂದು ಟ್ರಾಕ್ಟರ್‌, ಎತ್ತಿನ ಬಂಡಿ ಇತ್ತು. ಉಳಿದಂತೆ ನೂರಾರು ಬೈಕ್‌, ಆಟೊಗಳು ಭಾಗವಹಿಸಿದ್ದವು.

ದಲಿತ ಹಕ್ಕುಗಳ ಸಮಿತಿ, ಸಿಪಿಎಂ, ಸಿಪಿಐ, ಸಿಐಟಿಯು, ಪ್ರಾಂತ ರೈತ ಸಂಘ, ಡಿವೈಎಫ್‌ಐ, ಕಾರ್ಮಿಕರ ಸಂಘ, ಆಟೊ ಫೆಡರೇಶನ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು.

ರ್‍ಯಾಲಿಗೂ ಮುನ್ನ ಮಾತನಾಡಿದ ಮುಖಂಡ ಮರಡಿ ಜಂಬಯ್ಯ ನಾಯಕ, ‘ಇಂದು ಸಂವಿಧಾನ ಉಳಿಸಿ ಭಾರತ ರಕ್ಷಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ತಿಂಗಳಿಂದ ರೈತರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಕಾರ್ಪೋರೇಟ್ ಪರವಾದ ಕೇಂದ್ರಕ್ಕೆ ರೈತರ ಕುರಿತು ಚಿಂತೆಯಾಗಲಿ, ಕಾಳಜಿಯಾಗಲಿ ಇಲ್ಲ’ ಎಂದು ಟೀಕಿಸಿದರು.

‘ಸಂವಿಧಾನ ಇಲ್ಲದಿದ್ದರೆ ದೇಶ ಒಡೆದು ಹೋಗುತ್ತದೆ. ಅದರ ಉಳಿವಿಗೆ ಕಾರ್ಮಿಕರು, ದಲಿತರು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ನವದೆಹಲಿಯಲ್ಲಿ ರೈತರು ಟ್ರಾಕ್ಟರ್‌ ಪರೇಡ್‌ ನಡೆಸುತ್ತಿದ್ದಾರೆ. ಅದನ್ನು ಬೆಂಬಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಮೂಲಕ ರೈತರ ಋಣ ಕೂಡ ತೀರಿಸಬೇಕು’ ಎಂದು ಹೇಳಿದರು.

ಮುಖಂಡರಾದ ಕೆ.ಎಂ. ಸಂತೋಷ್‌ ಕುಮಾರ್‌, ಭಾಸ್ಕರ್ ರೆಡ್ಡಿ, ಬಿಸಾಟಿ ಮಹೇಶ್, ಎಂ.ಮುನಿರಾಜು ಸೇರಿದಂತೆ ವಿವಿಧ ಸಂಘಟನೆಗಳವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT