ಸೋಮವಾರ, ಜನವರಿ 25, 2021
23 °C
ಜನಸೇವಕ ಸಮಾವೇಶದಲ್ಲಿ ನೂತನ ಪಂಚಾಯಿತಿ ಸದಸ್ಯರಿಗೆ ಕಿವಿಮಾತು

ಪ್ರತಿ ಪಂಚಾಯಿತಿ ಸದಸ್ಯ ಮೋದಿಯಾಗಲಿ: ಸಚಿವ ಜಗದೀಶ ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪ್ರಧಾನಿ ನರೇಂದ್ರ ಮೋದಿಯವರಂತೆ ಆಗಬೇಕು’ ಎಂದು ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನಸೇವಕ ಸಮಾವೇಶ, ನೂತನ ಪಂಚಾಯಿತಿ ಸದಸ್ಯರ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಮೋದಿಯವರು ಆರು ವರ್ಷಗಳಿಂದ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೆ ಉತ್ತಮ ಆಡಳಿತ ಕೊಡುತ್ತಿದ್ದಾರೆ. ಜಗತ್ತಿನಲ್ಲೇ ಅತ್ಯಂತ ಪ್ರಭಾವಿ, ಜನಪ್ರಿಯ ನಾಯಕ. ಅಂತಹ ಪಕ್ಷದ ಬೆಂಬಲದಿಂದ ಗೆದ್ದು ಬಂದಿರುವ ಪಂಚಾಯಿತಿ ಸದಸ್ಯರು ಮೋದಿಯವರಂತೆ ಉತ್ತಮ ಕೆಲಸ ಮಾಡಿ ಅವರಂತೆ ಆಗಬೇಕು’ ಎಂದು ಕಿವಿಮಾತು ಹೇಳಿದರು.

‘ಪಂಚಾಯಿತಿ ಸದಸ್ಯರು ಹಳ್ಳಿಗಳಲ್ಲಿ ಯಾರಿಗೆ ಸೂರಿಲ್ಲವೋ ಅಂತಹವರನ್ನು ಗುರುತಿಸಬೇಕು. ನೀವು ಆಯ್ಕೆ ಮಾಡಿ ಕಳುಹಿಸಿದ ಫಲಾನುಭವಿಗಳ ಹೆಸರು ಅಂತಿಮಗೊಳಿಸುವುದಷ್ಟೇ ನಮ್ಮ ಕೆಲಸ. ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆ ಸೇರಿದಂತೆ ಸರ್ಕಾರದ ಇತರೆ ಅನುದಾನ ಬಳಸಿಕೊಂಡು ಗ್ರಾಮವನ್ನು ಉದ್ಧಾರ ಮಾಡಬೇಕು. ಪಾರದರ್ಶಕ, ಪ್ರಾಮಾಣಿಕ ಆಡಳಿತ ಕೊಟ್ಟರೆ ನಿಮಗೂ ಒಳ್ಳೆಯ ಹೆಸರು, ಬಿಜೆಪಿಗೂ ಒಳ್ಳೆಯ ಹೆಸರು ಬರುತ್ತದೆ’ ಎಂದರು.

‘ಪಂಚಾಯಿತಿ ಚುನಾವಣೆಗೂ ಮುನ್ನ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶಗಳಿಂದ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಸೇವಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜ. 17ರಂದು ಬೆಳಗಾವಿಯಲ್ಲಿ ಇದರ ಸಮಾರೋಪ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಷಾ ಪಾಲ್ಗೊಳ್ಳುವರು. ಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಇದೇ ರೀತಿ ಪಕ್ಷ ಜಯಭೇರಿ ಬಾರಿಸಬೇಕು. ಪಕ್ಷ ತಳಮಟ್ಟದಲ್ಲಿ ಸಂಘಟಿತವಾಗಬೇಕು’ ಎಂದು ತಿಳಿಸಿದರು.

‘ಎಲ್ಲೆಲ್ಲಿ ಬಿಜೆಪಿ ಸಮಾವೇಶ ಮಾಡಲಾಗಿದೆಯೋ ಅಲ್ಲೆಲ್ಲ ಪಕ್ಷ ದೊಡ್ಡ ಮಟ್ಟದಲ್ಲಿ ಜಯಶಾಲಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಗೆ ಸಮಾವೇಶ ಸಂಘಟಿಸಲು ಆಗುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಆಂತರಿಕ ಕಲಹದಿಂದ ಕಾಂಗ್ರೆಸ್ ಬಡವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷಕ್ಕೆ ಹೇಳಿಕೊಳ್ಳುವ ನಾಯಕತ್ವ ಇಲ್ಲ. ಬರುವ ದಿನಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ’ ಎಂದು ಭವಿಷ್ಯ ನುಡಿದರು.

‘ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಈ ಭಾಗದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈಗಾಗಲೇ ಕೊಪ್ಪಳ, ಯಾದಗಿರಿಯಲ್ಲಿ ಆ ನಿಟ್ಟಿನಲ್ಲಿ ಕೆಲಸ ಶುರುವಾಗಿದೆ. ಮಿಕ್ಕುಳಿದ ಜಿಲ್ಲೆಗಳಲ್ಲಿ ಇಷ್ಟರಲ್ಲೆ ಕೆಲಸ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.

ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಮಾತನಾಡಿ, ‘ಕಾಂಗ್ರೆಸ್‌ ಈಗ ಖಾಲಿ ಮನೆ. ಇನ್ನೂ 20 ವರ್ಷ ಕಾಂಗ್ರೆಸ್‌ ಈ ದೇಶದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. 50 ವರ್ಷ ಈ ದೇಶವಾಳಿದ ಕಾಂಗ್ರೆಸ್‌ ದೇಶ ಲೂಟಿ ಮಾಡಿದೆ. ಇಬ್ಭಾಗ ಮಾಡಿದೆ’ ಎಂದು ಟೀಕಿಸಿದರು. ‌‌

ಅರಣ್ಯ ಸಚಿವ ಆನಂದ್‌ ಸಿಂಗ್‌ ಮಾತನಾಡಿ, ‘ದೇಶ ಕಟ್ಟುವುದೇ ನಮ್ಮ ಕೆಲಸ ಎಂದು ಪಕ್ಷದ ಹಿರಿಯರು, ಕಾರ್ಯಕರ್ತರಿಗೆ ಹೇಳಿಕೊಡುತ್ತಿದ್ದಾರೆ. ಇದು ಶಿಸ್ತಿಗೆ ಹೆಸರಾಗಿರುವ ಬಿಜೆಪಿ ಪಕ್ಷ ಇತರೆ ಪಕ್ಷಗಳಿಗಿಂತ ಭಿನ್ನವಾದುದು ಎನ್ನುವುದಕ್ಕೆ ಸಾಕ್ಷಿ’ ಎಂದರು.

ಸಂಸದ ವೈ.ದೇವೇಂದ್ರಪ್ಪ, ಶಾಸಕ ಸೋಮಲಿಂಗಪ್ಪ, ಪಕ್ಷದ ಮಖಂಡರಾದ ಮಹೇಶ ತೆಂಗಿನಕಾಯಿ, ಸಿದ್ದೇಶ್ ಯಾದವ್, ಮಾಲೀಕಯ್ಯ ಗುತ್ತೇದಾರ್‌, ಚನ್ನಬಸವಗೌಡ ಪಾಟೀಲ, ಸಂದೀಪ್ ಕುಮಾರ್, ಬಸವರಾಜ ನಾಲತ್ವಾಡ, ವಿರೂಪಾಕ್ಷ ಗೌಡ, ನೇಮರಾಜ ನಾಯ್ಕ, ಕೃಷ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು