ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದ ಭೀತಿ ದೂರ; ಹಂಪಿ ಸ್ಮಾರಕಗಳಿಂದ ಹೊರಬಂದ ನೀರು

ತುಂಗಭದ್ರೆಯಲ್ಲಿ ನೀರಿನ ಹರಿವು ಇಳಿಮುಖ
Last Updated 20 ಆಗಸ್ಟ್ 2020, 8:26 IST
ಅಕ್ಷರ ಗಾತ್ರ
ADVERTISEMENT
""

ಹೊಸಪೇಟೆ: ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯದಿಂದ ನೀರು ಹರಿಸುವುದು ಕಡಿಮೆ ಮಾಡಿರುವುದರಿಂದ ಗುರುವಾರ ನದಿಯಲ್ಲಿ ನೀರಿನ ಹರಿವು ಭಾರಿ ಇಳಿಮುಖಗೊಂಡಿದೆ.

20 ಕ್ರಸ್ಟ್‌ಗೇಟ್‌ಗಳನ್ನು ತೆರೆದು 46,698 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. 10 ಗೇಟ್‌ಗಳನ್ನು ತಲಾ ಎರಡು ಅಡಿ, ಇನ್ನುಳಿದ 10 ಗೇಟ್‌ಗಳನ್ನು ತಲಾ ಒಂದು ಅಡಿ ಮೇಲಕ್ಕೆತ್ತಿ ನದಿಗೆ ನೀರು ಬಿಡಲಾಗುತ್ತಿದೆ.

ಬುಧವಾರ 30 ಕ್ರಸ್ಟ್‌ಗೇಟ್‌ಗಳನ್ನು ತಲಾ ಎರಡುವರೆ ಅಡಿ ಮೇಲಕ್ಕೆತ್ತಿ ಒಟ್ಟು 1,12,086 ಕ್ಯುಸೆಕ್‌ ನೀರು ನದಿಗೆ ಬಿಟ್ಟಿದ್ದರಿಂದ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಭಾಗಗಳಲ್ಲಿ ಪ್ರವಾಹದ ಭೀತಿ ಎದುರಾಗಿತ್ತು. ಹಂಪಿ ಪುರಂದರ ಮಂಟಪ, ವಿಜಯನಗರದ ಕಾಲು ಸೇತುವೆ, ಚಕ್ರತೀರ್ಥ ಸಂಪೂರ್ಣ ಮುಳುಗಿತ್ತು. ರಾಮ ಲಕ್ಷ್ಮಣ ದೇವಸ್ಥಾನದ ಆವರಣ, ಅದರ ಬಳಿಯ ಮಂಟಪದೊಳಕ್ಕೆ ಅಪಾರ ನೀರು ನುಗ್ಗಿತ್ತು.


ನದಿಯಲ್ಲಿ ನೀರಿನ ಹರಿವು ತಗ್ಗಿರುವ ಕಾರಣ ಹಂಪಿ ಚಕ್ರತೀರ್ಥ ಬಳಿಯ ಮಂಟಪಗಳು ಗೋಚರಿಸುತ್ತಿರುವುದು

ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲಿನಿಂದ ನೀರು ಹರಿಯುತ್ತಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕಲ್ಯಾಣ ಕರ್ನಾಟಕದ ಅನೇಕ ಊರುಗಳೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಈಗ ನದಿಯಲ್ಲಿ ನೀರಿನ ಹರಿವು ಭಾರಿ ಇಳಿಮುಖಗೊಂಡಿರುವುದರಿಂದ ಹಂಪಿ ಸ್ಮಾರಕದೊಳಗೆ ನುಗ್ಗಿದ ನೀರು ಹೊರ ಹೋಗಿದೆ. ಕಂಪ್ಲಿ–ಗಂಗಾವತಿ ಸೇತುವೆ ಮೇಲೆ ಪುನಃ ವಾಹನ ಸಂಚಾರ ಆರಂಭಗೊಂಡಿದೆ. ಪ್ರವಾಹದ ಆತಂಕ ಸದ್ಯಕ್ಕೆ ದೂರವಾಗಿದೆ.

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿದೆ. 75,510 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಬುಧವಾರ 77,927 ಕ್ಯುಸೆಕ್‌ ಒಳಹರಿವು ಇತ್ತು. ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದೆ. ತುಂಗಾ ಜಲಾಶಯದ ಹೊರಹರಿವು ಕೂಡ ಕಮ್ಮಿಯಾಗಿದೆ. ಸಹಜವಾಗಿಯೇ ಒಳಹರಿವು ಕಡಿಮೆಯಾಗುತ್ತಿದೆ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT