ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕೃಷ್ಣನೂ ಇಲ್ಲ, ಜೀರ್ಣೊದ್ಧಾರವೂ ಇಲ್ಲ!

ಯುದ್ಧದಲ್ಲಿ ಗೆದ್ದ ಸವಿನೆನಪಿನಲ್ಲಿ ಸುಂದರ ದೇವಸ್ಥಾನ ನಿರ್ಮಿಸಿದ್ದ ಕೃಷ್ಣದೇವರಾಯ; ಎರಡು ದಶಕದಿಂದ ಕೆಲಸ ನನೆಗುದಿಗೆ
Last Updated 27 ಅಕ್ಟೋಬರ್ 2020, 15:17 IST
ಅಕ್ಷರ ಗಾತ್ರ
ADVERTISEMENT
"ಶ್ರೀಮಂತ ವಾಸ್ತುಶಿಲ್ಪ ಹೊಂದಿರುವ ಕೃಷ್ಣ ದೇಗುಲ"

ಹೊಸಪೇಟೆ: ಎರಡು ದಶಕ ಕಳೆಯುತ್ತ ಬಂದರೂ ವಿಶ್ವ ಪ್ರಸಿದ್ಧ ಹಂಪಿಯ ಹೃದಯ ಭಾಗದಲ್ಲಿರುವ ಕೃಷ್ಣ ದೇವಸ್ಥಾನದ ಜೀರ್ಣೊದ್ಧಾರ ಕೆಲಸ ಪೂರ್ಣಗೊಂಡಿಲ್ಲ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎಎಸ್‌ಐ) 2000ನೇ ಇಸ್ವಿಯಲ್ಲಿ ಈ ದೇವಸ್ಥಾನದ ಜೀರ್ಣೊದ್ಧಾರ ಕೆಲಸ ಕೈಗೆತ್ತಿಕೊಂಡಿತ್ತು. ದೇಗುಲದ ಪ್ರವೇಶ ದ್ವಾರ, ಅದರ ಗೋಪುರ, ಪ್ರಾಂಗಣ ಸೇರಿದಂತೆ ಇಡೀ ದೇವಸ್ಥಾನವನ್ನು ಅದರ ಮೂಲ ಸ್ವರೂಪಕ್ಕೆ ಚ್ಯುತಿಯಾಗದ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಮುಂದಾಗಿತ್ತು. ಅದಕ್ಕಾಗಿ ತಮಿಳುನಾಡಿನ ನುರಿತ ಕಲಾವಿದರಿಗೆ ಕೆಲಸ ಒಪ್ಪಿಸಿತ್ತು.

ದೇವಸ್ಥಾನದ ಗೋಡೆ, ಗೋಪುರಗಳಿಗೆ ಕಬ್ಬಿಣದ ರಾಡುಗಳನ್ನು ಅಳವಡಿಸಲಾಗಿತ್ತು. ಇನ್ನೇನು ಕೆಲಸ ಆರಂಭಗೊಂಡಿತ್ತು ಎಂದು ಅನೇಕ ಜನ ಖುಷಿ ಪಟ್ಟಿದ್ದರು. ಆದರೆ, ಕೆಲಸ ಮಾತ್ರ ಶುರುವಾಗಲೇ ಇಲ್ಲ. ಈಗಲೂ ಕಬ್ಬಿಣದ ರಾಡುಗಳು ಹಾಗೆಯೇ ಉಳಿದುಕೊಂಡಿವೆ.

ರಾಡುಗಳು ಇರುವುದರಿಂದ ದೇವಸ್ಥಾನದ ಜೀರ್ಣೊದ್ಧಾರ ಕಾರ್ಯ ನಡೆಯುತ್ತಿದೆ ಎಂದು ಭಾವಿಸಿ ಹೊರಗಿನಿಂದ ಬರುವ ಪ್ರವಾಸಿಗರು ಅದನ್ನು ನೋಡದೆಯೇ ಮುಂದೆ ಹೋಗುತ್ತಾರೆ. ಈ ವಿಷಯವನ್ನು ಸ್ಥಳೀಯ ಮಾರ್ಗದರ್ಶಿಗಳು (ಗೈಡ್‌ಗಳು), ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

‘ಹಂಪಿಯ ಪ್ರಮುಖ ಸ್ಮಾರಕಗಳಲ್ಲಿ ಕೃಷ್ಣ ದೇವಸ್ಥಾನವೂ ಒಂದು. ಹಂಪಿಯ ಉಗ್ರ ನರಸಿಂಹ, ಸಾಸಿವೆ ಕಾಳು ಗಣಪ ಸ್ಮಾರಕದ ಬಳಿಯೇ ಇದು ಇರುವುದರಿಂದ ಎಲ್ಲರ ಚಿತ್ತ ಅದರತ್ತ ಹರಿಯುವುದು ಸಹಜ. ಆದರೆ, ಇಪ್ಪತ್ತು ವರ್ಷಗಳಾದರೂ ಜೀರ್ಣೊದ್ಧಾರ ಮಾಡಿಲ್ಲ. ಅದರ ಸುತ್ತಲೂ ರಾಡ್‌ಗಳನ್ನು ಅಳವಡಿಸಿರುವ ಕಾರಣ ದುರಸ್ತಿ ನಡೆಯುತ್ತಿದೆ ಎಂದು ಭಾವಿಸಿ ಪ್ರವಾಸಿಗರು ಒಳ ಹೋಗುವುದಿಲ್ಲ. ಜತೆಗೆ ಗೈಡ್‌ಗಳಿದ್ದರಷ್ಟೇ ಒಳ ಹೋಗಿ ತೋರಿಸುತ್ತಾರೆ’ ಎಂದು ಹಂಪಿ ಹಿರಿಯ ಮಾರ್ಗದರ್ಶಿ ಗೋಪಾಲ್‌ ಬೆಳಕು ಚೆಲ್ಲಿದರು.

‘ದ್ರಾವಿಡ ಶೈಲಿಯ ಕೃಷ್ಣ ದೇವಸ್ಥಾನ ವಿಶಿಷ್ಟ ವಿನ್ಯಾಸದಿಂದ ಕೂಡಿದೆ. ಹಜಾರರಾಮ ದೇವಸ್ಥಾನ ಬಿಟ್ಟರೆ ಉತ್ಕೃಷ್ಟ ವಾಸ್ತುಶಿಲ್ಪದ ಕೆತ್ತನೆಗಳು ಈ ದೇಗುಲದಲ್ಲಿವೆ. ಈ ದೇವಸ್ಥಾನದ ನಂತರ ಅನೇಕ ಸ್ಮಾರಕಗಳನ್ನು ಜೀರ್ಣೊದ್ಧಾರಗೊಳಿಸಲಾಗಿದೆ. ಆದರೆ, ಇದನ್ನು ಹಾಗೆಯೇ ಬಿಡಲಾಗಿದೆ. ಕಾರಣವೇನು ಎನ್ನುವುದೇ ಗೊತ್ತಾಗುತ್ತಿಲ್ಲ. ಇದು ಪ್ರವಾಸಿಗರಿಗೆ ಮಾಡುವ ಅನ್ಯಾಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀಮಂತ ವಾಸ್ತುಶಿಲ್ಪ ಹೊಂದಿರುವ ಕೃಷ್ಣ ದೇಗುಲ

ಕೃಷ್ಣದೇವರಾಯ ನಿರ್ಮಾಣ:

ಕೃಷ್ಣ ದೇವಸ್ಥಾನ ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯ 1,517ರಲ್ಲಿ ನಿರ್ಮಿಸಿದ್ದ. 1,513ರಲ್ಲಿ ಕೃಷ್ಣದೇವರಾಯ ಒರಿಸ್ಸಾ ರಾಜ್ಯದ ದೊರೆ ಗಜಪತಿಯನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಉದಯಗಿರಿಯಿಂದ ಬರುವಾಗ ತನ್ನ ಜತೆಗೆ ಸುಂದರವಾದ ಬಾಲಕೃಷ್ಣನ ಮೂರ್ತಿ ತೆಗೆದುಕೊಂಡು ಬರುತ್ತಾನೆ. ಅದಕ್ಕಾಗಿ ಕೃಷ್ಣ ದೇವಸ್ಥಾನ ನಿರ್ಮಿಸುತ್ತಾನೆ. 1,513ರಲ್ಲಿ ಆರಂಭವಾದ ದೇಗುಲ ನಿರ್ಮಾಣ ಕೆಲಸ 1,517ರಲ್ಲಿ ಪೂರ್ಣಗೊಳ್ಳುತ್ತದೆ. ಬಳಿಕ ಅಲ್ಲಿ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ದೇವಸ್ಥಾನದಲ್ಲಿ ಯಜ್ಞ ಮಂಟಪ, ಮಹಾಮಂಟಪ, ಅಡುಗೆ ಮಂಟಪ, ಚಿಕ್ಕ ಉಗ್ರಾಣ, ಸಭಾ ಮಂಟಪ, ಯಾತ್ರಿಕರಿಗೆ ಉಳಿದುಕೊಳ್ಳಲು ಸಾಲು ಮಂಟಪ, ವಿಷ್ಣು ದಶವತಾರ ಸೇರಿದಂತೆ ಸುಂದರವಾದ ಕೆತ್ತನೆಗಳಿವೆ. ದೇಗುಲದ ಎದುರಲ್ಲಿ ವಿಶಾಲವಾದ ಬಜಾರ ನಿರ್ಮಿಸುತ್ತಾರೆ. ಅದಕ್ಕೆ ಕೃಷ್ಣ ಬಜಾರ ಅಥವಾ ಪ್ರತಿ ಸೋಮವಾರ ವಾರದ ಸಂತೆ ನಡೆಯುವ ಕಾರಣಕ್ಕಾಗಿ ಅದಕ್ಕೆ ‘ಸೋಮವಾರಪೇಟೆ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಸೋಮವಾರಪೇಟೆಯು ದವಸ ಧಾನ್ಯ, ಪಿಂಗಾಣಿ ವಸ್ತುಗಳ ಮಾರಾಟಕ್ಕಷ್ಟೇ ಸೀಮಿತವಾಗಿತ್ತು. ಜನ ಬೇರೆ ಬೇರೆ ಕಡೆಗಳಿಂದ ಚಕ್ಕಡಿಗಳಲ್ಲಿ ಬಂದು ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಿಗಳೆಲ್ಲ ಕೃಷ್ಣ ದೇವಸ್ಥಾನಕ್ಕೆ ತೆರಿಗೆ ಕೂಡ ತುಂಬುತ್ತಿದ್ದರು.

‘ರಕ್ಕಸತಂಗಡಿ ಯುದ್ಧದ ನಂತರ ದೇವಸ್ಥಾನದ ಗೋಪುರಕ್ಕೆ ಶತ್ರುಗಳು ಹಾನಿ ಮಾಡುತ್ತಾರೆ. ಬಳಿಕ ಅದು ಸೂಕ್ತ ನಿರ್ವಹಣೆಯಿಲ್ಲದೆ ಕೊಂಪೆಯಾಗುತ್ತದೆ. ನಂತರದ ದಿನಗಳಲ್ಲಿ ಪುರಾತತ್ವ ಇಲಾಖೆಯವರು ಅಲ್ಲಿ ಉತ್ಖನನ ನಡೆಸುತ್ತಿದ್ದಾಗ ಕೃಷ್ಣನ ಮೂರ್ತಿ ದೊರೆಯುತ್ತದೆ. ಸದ್ಯ ಆ ಮೂರ್ತಿ ಚೆನ್ನೈನಲ್ಲಿರುವ ಪುರಾತತ್ವ ಇಲಾಖೆಗೆ ಸೇರಿದ ವಸ್ತು ಸಂಗ್ರಹಾಲಯದಲ್ಲಿದೆ. ಆದರೆ, ದೇವಸ್ಥಾನವನ್ನು ಕಡೆಗಣಿಸಿರುವುದರಿಂದ ಅದು ಅಭಿವೃದ್ಧಿ ಕಂಡಿಲ್ಲ’ ಎನ್ನುತ್ತಾರೆ ಗೈಡ್‌ ಗೋಪಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT