ಬುಧವಾರ, ಮಾರ್ಚ್ 29, 2023
25 °C
ಕೋವಿಡ್‌ ಮೂರನೇ ಅಲೆ ಕರಿಛಾಯೆ ನಡುವೆ ಡೆಂಗಿ, ಮಲೇರಿಯಾ ಪ್ರಕರಣ ಹೆಚ್ಚಳ

ವಿಜಯನಗರ, ಬಳ್ಳಾರಿಯಲ್ಲಿ ಸಾಂಕ್ರಾಮಿಕ ರೋಗಗಳ ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ/ಬಳ್ಳಾರಿ: ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗಗಳದ್ದೇ ಆರ್ಭಟ... ಅದರಲ್ಲೂ, ಹೊಂಡಕೊಂಡಗಳಲ್ಲಿ ನೀರು ನಿಂತರೆ ಕಥೆ ಮುಗಿಯಿತು... ಸೊಳ್ಳೆಗಳು ಮೊಟ್ಟೆಯಿಟ್ಟು ಮರಿಮಾಡಿ, ರೋಗಗಳನ್ನು ಹರಡುತ್ತವೆ. ಜಿಲ್ಲೆಯಲ್ಲಿ ಸಮಸ್ಯೆ ತುಸು ಹೆಚ್ಚೆಂದೇ ಹೇಳಬಹುದು.

ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿವೆ. ಡೆಂಗಿ, ಚಿಕೂನ್‌ಗುನ್ಯ, ಮಲೇರಿಯಾ, ವೈರಾಣು ಜ್ವರಗಳು ಪತ್ತೆಯಾಗಿವೆ. ಜುಲೈ ಎರಡನೇ ವಾರ ಮೋಕಾ ಹೋಬಳಿಯ ಬಸರಕೋಡು ಗ್ರಾಮದಲ್ಲಿ 300ಕ್ಕೂ ಹೆಚ್ಚು ವಾಂತಿ, ಭೇದಿ ಹಾಗೂ ವೈರಾಣು ಜ್ವರ ಕಾಣಿಸಿಕೊಂಡಿದ್ದವು. 16 ಜನರ ರಕ್ತದ ಮಾದರಿ ‍ಪರೀಕ್ಷಿಸಿದಾಗ, ಒಂದು ಡೆಂಗಿ ಪ್ರಕರಣ ಪತ್ತೆಯಾಗಿತ್ತು ಎಂದು ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಇದಾದ ಒಂದೇ ವಾರದಲ್ಲಿ ಜನವರಿಯಿಂದ ಇದುವರೆಗೆ 1,112 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. 87 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದವು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿ ಮೂಲಗಳು ತಿಳಿಸಿದ್ದವು. ಅಚ್ಚರಿಯ ಸಂಗತಿ ಎಂದರೆ ಬಹಳ ದಿನಗಳಿಂದ ಇದೇ ಅಂಕಿ–ಅಂಶ ನೀಡಲಾಗುತ್ತಿದೆ!

ಡೆಂಗಿ, ಚಿಕೂನ್‌ಗುನ್ಯ, ಮಲೇರಿಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಖರ ಅಂಕಿ–ಅಂಶಗಳನ್ನು ಅಧಿಕಾರಿಗಳು ಕೊಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಪಾರದರ್ಶಕವಾಗಿಲ್ಲ. ‘ಕಳೆದ ವರ್ಷಕ್ಕಿಂತ ಈ ವರ್ಷ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ’ ಎಂಬ ಒಂದೇ ರೀತಿಯ ಸಾಮಾನ್ಯ ಉತ್ತರ ಎಲ್ಲರಿಂದಲೂ ಬರುತ್ತದೆ!

‘ಜಿಲ್ಲೆಯಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗ ಪ್ರಕರಣ ವರದಿಯಾಗುತ್ತಿವೆ. ಖಾಸಗಿ ಆಸ್ಪತ್ರೆಗಳಿಗೂ ಸಾಕಷ್ಟು ಜನ ಬರುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಕನ್ಸಲ್ಟೆನ್ಸಿ ಇದೆ. ತಿಂಗಳಿಗೆ ಸರಾಸರಿ 2,500 ಜನರನ್ನು ಪರೀಕ್ಷೆ ಮಾಡಲಾಗುತ್ತಿದ್ದು, ತಿಂಗಳಿಗೆ ಕನಿಷ್ಠ 100 ಡೆಂಗಿ, ಬ್ಯಾಕ್ಟಿರಿಯಲ್‌ ನಿಮೋನಿಯಾ, ವೈರಲ್‌ ಫೀವರ್‌ ಪ್ರಕರಣ ಪತ್ತೆಯಾಗುತ್ತಿವೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಘಟಕದ ಅಧ್ಯಕ್ಷ ಡಾ. ರವಿಶಂಕರ್‌ ಎಸ್‌. ಹೇಳುತ್ತಾರೆ.

‘ಎರಡು ವಾರದ ಹಿಂದೆ ಡೆಂಗಿಯಿಂದ ನರಳುತ್ತಿದ್ದ ಸಾಕಷ್ಟು ಮಕ್ಕಳು ವಿಮ್ಸ್‌ಗೆ ದಾಖಲಾಗಿದ್ದರು. ಹಾಸಿಗೆ ಸಮಸ್ಯೆಯಿಂದಾಗಿ, ಪ್ರತಿ ಹಾಸಿಗೆಯಲ್ಲೂ ಇಬ್ಬಿಬ್ಬರು ಮಕ್ಕಳನ್ನು ಮಲಗಿಸಲಾಗಿತ್ತು. ಸದ್ಯ, ಹೊಸ ದಂತವೈದ್ಯ ಕಾಲೇಜಿನಲ್ಲಿ ವೈರಾಣು ಜ್ವರದ ಚಿಕಿತ್ಸೆಗಾಗಿ 160 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಶುಕ್ರವಾರದಿಂದ (ಸೆ.3) ಇವು ಚಿಕಿತ್ಸೆಗೆ ಲಭ್ಯವಾಗಿವೆ’ ಎಂದು ವಿಮ್ಸ್‌ ನಿರ್ದೇಶಕ ಡಾ. ಗಂಗಾಧರಗೌಡ ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಕೂಡ್ಲಿಗಿಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಹೊಸದಾಗಿ ಡೆಂಗಿ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಹಗರಿಬೊಮ್ಮನಹಳ್ಳಿಯಲ್ಲಿ ಎಂಟು, ಹೂವಿನಹಡಗಲಿಯಲ್ಲಿ ಎರಡು ಪ್ರಕರಣ ವರದಿಯಾಗಿದ್ದವು. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗುತ್ತಿದ್ದಾರೆ.

ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್‌ ಜತೆಜತೆಗೆ ಡೆಂಗಿ, ಮಲೇರಿಯಾ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ಔಷಧಿಯ ದಾಸ್ತಾನು ಮಾಡಲಾಗಿದೆ. ಎಲ್ಲೆಡೆ ಲಾರ್ವಾ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಆಯಾ ಪುರಸಭೆ, ನಗರಸಭೆಯಿಂದ ಫಾಗಿಂಗ್‌ ಮಾಡಲಾಗುತ್ತಿದೆ. ಆದರೆ, ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ.

ಎಲ್ಲ 35 ವಾರ್ಡ್‌ಗಳಿಗೆ ಅನುಗುಣವಾಗಿ ಕಸ ಸಂಗ್ರಹಿಸಿ ವಿಲೇವಾರಿಗೊಳಿಸುವ ವಾಹನಗಳಿಲ್ಲ. ಜನ ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುತ್ತಾರೆ. ಮಳೆಗಾಲ ಇರುವುದರಿಂದ ಎಲ್ಲೆಡೆ ಹರಿದು, ದುರ್ಗಂಧಕ್ಕೆ ಕಾರಣವಾಗಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೆಂಗಿ, ಮಲೇರಿಯಾ ಹರಡುವ ಆತಂಕವೂ ಹೆಚ್ಚಿದೆ. ಇತ್ತೀಚೆಗೆ ತಾಲ್ಲೂಕಿನ ಕಮಲಾಪುರದಲ್ಲಿ ಹತ್ತಕ್ಕೂ ಹೆಚ್ಚು ಜನರಲ್ಲಿ ಡೆಂಗಿ ಕಾಣಿಸಿಕೊಂಡಿತ್ತು. ಈಗ ಅವರೆಲ್ಲ ಚೇತರಿಸಿಕೊಂಡಿದ್ದಾರೆ.

ಮಳೆಯಿಂದ ತುಂಬಿ ಹರಿಯುತ್ತಿರುವ ಚರಂಡಿ, ಅಸ್ವಚ್ಛತೆ, ಸತತ ಮಳೆಗೆ ನೆಗಡಿ, ಕೆಮ್ಮು, ಜ್ವರ, ಗಂಟಲು ಕೆರೆತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಜನ ಕೋವಿಡ್‌ ಭಯದಿಂದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬರುತ್ತಿದೆ. 

‘ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧಿ ದಾಸ್ತಾನಕ್ಕೆ ಕೊಟ್ಟಷ್ಟು ಮಹತ್ವ ಸ್ವಚ್ಛತೆಗೆ ಕೊಡುವುದು ಉತ್ತಮ. ಪ್ರತಿಯೊಂದು ಬಡಾವಣೆಗಳಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಗೊಳಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮಳೆ ನೀರು ನಿಲ್ಲದಂತೆ ನಿಯಂತ್ರಿಸಬೇಕು. ಮಳೆಗಾಲ, ಚಳಿಗಾಲ ಮುಗಿಯುವವರೆಗೆ ನಿತ್ಯ ಫಾಗಿಂಗ್‌ ಮಾಡಬೇಕು. ಹೆಚ್ಚಿನ ಕಡೆಗಳಲ್ಲಿ ಇದ್ಯಾವ ಕೆಲಸಗಳು ನಡೆಯದ ಕಾರಣ ಜನರಲ್ಲಿ ರೋಗಗಳು ಕಾಣಿಸಿಕೊಳ್ಳುತ್ತಿವೆ’ ಎನ್ನುತ್ತಾರೆ ಸಾರ್ವಜನಿಕರು.

ರೋಗಿಗಳಿಗೆ ಅಗತ್ಯ ಔಷಧಿ

ಹರಪನಹಳ್ಳಿ ವರದಿ: ತಾಲ್ಲೂಕಿನಲ್ಲಿ ಕೋವಿಡ್‌, ಡೆಂಗಿ ಸೇರಿದಂತೆ ಇತರೆ ರೋಗಿಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ದಾಸ್ತಾನಿದೆ.

ಮೂರು ತಿಂಗಳ ಹಿಂದೆ ಶ್ರೀಕಂಠಾಪುರದಲ್ಲಿ ಡೆಂಗಿ ದೃಢೀಕೃತವಾಗಿತ್ತು, ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಬಾಧೆಗಳಿಗೆ ಅಗತ್ಯ ಔಷಧಿಗಳಿವೆ. ಹೊಸದಾಗಿ ಎಲ್ಲೂ ಡೆಂಗಿ ಪ್ರಕರಣಗಳು ವರದಿಯಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು