ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ನೌಕರಿಗಾಗಿ ಉರಿ ಬಿಸಿಲು ಲೆಕ್ಕಿಸಲಿಲ್ಲ

ಸಂದರ್ಶನಕ್ಕೆ ನಗರ, ಗ್ರಾಮೀಣ ಪ್ರದೇಶದಿಂದ ಬಂದ ಅಭ್ಯರ್ಥಿಗಳು
Last Updated 3 ಮಾರ್ಚ್ 2021, 12:06 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ನಗರದ ಶಂಕರ್ ಆನಂದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಬಂದಿದ್ದ ನೂರಾರು ಅಭ್ಯರ್ಥಿಗಳು ಉರಿ ಬಿಸಿಲು ಲೆಕ್ಕಿಸದೆ ನೋಂದಣಿಗಾಗಿ ತಡಹೊತ್ತು ಸರದಿ ಸಾಲಿನಲ್ಲಿ ನಿಂತಿದ್ದರು.

‘ನ್ಯಾಷನಲ್ ಕೆರಿಯರ್ ಸ್ಕೀಮ್’ ಅಡಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 18 ಖಾಸಗಿ ಕಂಪೆನಿಗಳು ಸಂದರ್ಶನ ಏರ್ಪಡಿಸಿದ್ದವು.

ಬೆಳಿಗ್ಗೆಯಿಂದಲೇ ಕಾಲೇಜಿನ ಆವರಣದಲ್ಲಿ ಜಮಾಯಿಸಿದ್ದ ಅಭ್ಯರ್ಥಿಗಳು ಆವರಣದಲ್ಲಿದ್ದ ಹಾಕಲಾಗಿದ್ದ ಸೂಚನಾ ಫಲಕಗಳಲ್ಲಿ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳ ವಿವರವನ್ನು ಹುಡುಕುವುದರಲ್ಲಿ ನಿರತರಾಗಿದ್ದರು.

ಸಂದರ್ಶನಕ್ಕೂ ಮುನ್ನ ಆರಂಭಗೊಂಡ ನೋಂದಣಿ ಪ್ರಕ್ರಿಯೆಗೆ ಬಿಸಿಲನ್ನೂ ಲೆಕ್ಕಿಸದೇ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅಭ್ಯರ್ಥಿಗಳ ಜೊತೆಗೆ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ ಸಂದರ್ಶನದ ಅನುಭವಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ನೋಂದಣಿ ಮಾಡಿಸಿದ್ದು ವಿಶೇಷವಾಗಿತ್ತು.

ಉದ್ಯೋಗ ಮೇಳದ ಉದ್ಘಾಟಿಸಿದ ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ, ‘ಕೋವಿಡ್ ಲಾಕ್‌ಡೌನ್‌ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಎಲ್ಲರಿಗೂ ಸರ್ಕಾರಿ ನೌಕರಿ ಕೊಡಲು ಸಾಧ್ಯವಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಹುದ್ದೆಗಳಿಗೆ ಸ್ಪರ್ಧೆಯು ಹೆಚ್ಚಿರುತ್ತದೆ’ ಎಂದರು.

‘ಶೇ 20ರಿಂದ 30 ರಷ್ಟು ಮಾತ್ರ ಸರ್ಕಾರಿ ಹುದ್ದೆಗಳಿವೆ. ಉಳಿದವು ಖಾಸಗಿ ಕ್ಷೇತ್ರದ ಉದ್ಯೋಗಗಳಾಗಿವೆ. ಉದ್ಯೋಗ ಮೇಳಕ್ಕೆ ಬಂದಿರುವ 18 ಕಂಪೆನಿಗಳಲ್ಲಿ 500ಕ್ಕೂ ಹೆಚ್ಚು ಉದ್ಯೋಗ ಅವಕಾಶಗಳಿವೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ ಮಾತನಾಡಿ, ‘ಕಾಲೇಜಿನಲ್ಲಿ ಎರಡನೇ ಬಾರಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗ ಗಿಟ್ಟಿಸುವುದು ಮುಖ್ಯವಲ್ಲ. ನೌಕರಿ ಸಿಕ್ಕ ನಂತರ ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ನಿರ್ವಹಿಸುವುದು ಬಹಳ ಮುಖ್ಯವಾದುದು’ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಸಮುದಾಯ ಸಂಘಟನಾ ಅಧಿಕಾರಿ ಎ.ರವಿಕುಮಾರ್, ಸಂದೀಪ್ ಸಿಂಗ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಯು.ರಾಘವೇಂದ್ರ, ಚಿನ್ನಿ ರಾಮ್ ಕುಮಾರ್, ಮಧುರಚೆನ್ನ ಶಾಸ್ತ್ರಿ ಇದ್ದರು.

***

ಕೋವಿಡ್ ಲಾಕ್‌ಡೌನ್‌ ನಂತರ ಉದ್ಯೋಗ ಅವಕಾಶಗಳು ಕಡಿಮೆಯಾಗಿದ್ದು, ಇಂತಹ ಉದ್ಯೋಗ ಮೇಳವನ್ನು ಆಯೋಜಿಸುವುದರಿಂದ ಉಪಯೋಗವಾಗುತ್ತದೆ.
-ಮೌನ, ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿ

***

ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇಂತಹ ಉದ್ಯೋಗ ಮೇಳಗಳ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಲು ಅನುಕೂಲವಾಗಬಹುದು.
-ಎ.ಕುಮಾರ್, ಉದ್ಯೋಗ ಆಕಾಂಕ್ಷಿ

/ಅಂಕಿ ಅಂಶ/
ಒಟ್ಟು ನೋದಣಿ 969
ಪುರುಷ ಅಭ್ಯರ್ಥಿಗಳು 617
ಮಹಿಳಾ ಅಭ್ಯರ್ಥಿಗಳು 352
ಸಂದರ್ಶನ ಮಾಡಿದ ಸಂಸ್ಥೆಗಳು 18
ಸಂದರ್ಶನಕ್ಕೆ ಆಯ್ಕೆಗೊಂಡವರು 110

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT