ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಚಿವ ಆನಂದ್ ಸಿಂಗ್ ಅವಿರೋಧ ಆಯ್ಕೆ

Last Updated 9 ಫೆಬ್ರುವರಿ 2021, 10:42 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಆನಂದ್ ಸಿಂಗ್ ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಚ್. ವಿಶ್ವನಾಥ್ ಮಧ್ಯಾಹ್ನ ಇಲ್ಲಿ ಘೋಷಿಸಿದರು.

ಆನಂದ್ ಸಿಂಗ್ ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದರು. ಮೂರು ಕ್ರಮಬದ್ಧವಾಗಿದ್ದವು. ಅದರಲ್ಲಿ ಒಂದನ್ನು ಪರಿಗಣಿಸಲಾಯಿತು ಎಂದು ಹೇಳಿದರು.

ಇತ್ತೀಚೆಗೆ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ. ಚಂದ್ರಶೇಖರಯ್ಯ ರಾಜೀನಾಮೆ ಸಲ್ಲಿಸಿದ್ದರು. ತೆರವಾದ ಸ್ಥಾನಕ್ಕೆ‌ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಹದಿಮೂರು ಜನ ನಿರ್ದೇಶಕರನ್ನು ಒಳಗೊಂಡಿರುವ ಬ್ಯಾಂಕಿನ ಹಾಲಿ ಅವಧಿ ಇನ್ನೂ ಮೂರು ವರ್ಷ ಇದೆ. ಮಂಗಳವಾರ ನಡೆದ ಚುನಾವಣೆ ಸಭೆಗೆ ಹನ್ನೊಂದು ಜನ ಪಾಲ್ಗೊಂಡಿದ್ದರು. ಭರತ್ ರೆಡ್ಡಿ, ಭೋಗಾರೆಡ್ಡಿ ಗೈರು ಹಾಜರಾಗಿದ್ದರು.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಎಲ್ಲ ನಿರ್ದೇಶಕರ ಸಹಕಾರದಿಂದ ಬ್ಯಾಂಕಿನ ಅಧ್ಯಕ್ಷನಾಗಿರುವೆ. ಬ್ಯಾಂಕಿನ ಶ್ರೇಯೋಭಿವೃದ್ಧಿ, ರೈತರ ಹಿತಕ್ಕಾಗಿ ಕೆಲಸ ಮಾಡುವೆ. ಬ್ಯಾಂಕಿನ ಖಾಲಿ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಬ್ಯಾಂಕಿನಲ್ಲಿ ಮೊದಲಿನಿಂದಲೂ ಅಧ್ಯಕ್ಷ ಗಾದಿಗೆ ಅವಿರೋಧ ಆಯ್ಕೆ ನಡೆಯುತ್ತ ಬಂದಿದೆ. ಈ ಸಲವೂ ಹಾಗೆಯೇ ಆಗಿದೆ. ಸಹಕಾರ ಕ್ಷೇತ್ರದಲ್ಲಿ ಸ್ಪರ್ಧೆ ಕಡಿಮೆ. ಅನೇಕ ಜನ ಹಿರಿಯ ನಿರ್ದೇಶಕರಿದ್ದಾರೆ. ಅವರ ಸಹಕಾರದೊಡನೆ ಕೆಲಸ ನಿರ್ವಹಿಸುವೆ ಎಂದರು.

ಈ ರಂಗಕ್ಕೆ ಬರಬೇಕು ಎನ್ನುವ ಯಾವುದೇ ಆಲೋಚನೆ ಇರಲಿಲ್ಲ. ರಾಜಕೀಯ ರಂಗ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿ ಹಠಾತ್ತಾಗಿ ಬೆಳೆವಣಿಗೆಗಳು ನಡೆಯುತ್ತವೆ. ಸಡನ್, ಶಾಕಿಂಗ್ ಏನೂ ಇಲ್ಲ. ಕಾಲ ಕೂಡಿ ಬಂದಿದ್ದು, ಅಧ್ಯಕ್ಷನಾಗಿರುವೆ. ಬ್ಯಾಂಕಿನಲ್ಲಿ ಯಾರು ಮೇಲು-ಕೀಳು ಇಲ್ಲ. ಬ್ಯಾಂಕಿನಲ್ಲಿ ಏನೇನು ಕೆಲಸಗಳಾಗಬೇಕು ಎನ್ನುವುದರ ಕುರಿತು ಮಾಹಿತಿ ಪಡೆದು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಉಸ್ತುವಾರಿ ಬದಲಾವಣೆ ಸಿ.ಎಂ ನಿರ್ಧಾರ

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ ಬದಲಿಸಬೇಕೆಂದು ಶಾಸಕ ಜಿ. ಸೋಮಶೇಖರ್ ರೆಡ್ಡಿ ಹೇಳಿರುವುದು ಅವರ ವೈಯಕ್ತಿಕ ಅನಿಸಿಕೆ. ಎಲ್ಲರಿಗೂ ಅವರ ಅನಿಸಿಕೆ ಹೇಳುವ ಸ್ವಾತಂತ್ರ್ಯ ಇದೆ. ಯಾರು, ಯಾವ ಜಿಲ್ಲೆಯ ಉಸ್ತುವಾರಿ ಆಗಬೇಕು ಎನ್ನುವುದರ ಕುರಿತು ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT